ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೀಟ್ ಮರುಪರೀಕ್ಷೆಗೆ ಮುನ್ನ 22 ವರ್ಷದ ವಿದ್ಯಾರ್ಥಿಯ ಆತ್ಮಹತ್ಯೆ, ಮೊಬೈಲ್‌ನಲ್ಲಿ ವಿಡಿಯೊ ಪತ್ತೆ

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 22 ವರ್ಷದ ವಿದ್ಯಾರ್ಥಿಯೊಬ್ಬ ಮರುಪರೀಕ್ಷೆಗೆ ಎರಡು ದಿನ ಬಾಕಿ ಇರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಮುನ್ನ ವಿದ್ಯಾರ್ಥಿ ದಾಖಲಿಸಿದ್ದ ವಿಡಿಯೊ ಪತ್ತೆಯಾಗಿದ್ದು, ಅದರ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಲಖನೌ, ಜೂ. 20: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನೀಟ್ (NEET Exam) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 22 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಜೂನ್ 21ರಂದು ನಡೆಯಲಿರುವ ನೀಟ್‌ ಮರುಪರೀಕ್ಷೆಗೆ (NEET Re-Examination) ಕೇವಲ ಎರಡು ದಿನಗಳು ಬಾಕಿ ಇರುವಾಗ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಜತಿನ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಗಾಜಿಯಾಬಾದ್‌ನ ವಿಜಯನಗರ ಪ್ರದೇಶದ ಪ್ರತಾಪ್ ವಿಹಾರ್‌ನ ನಿವಾಸಿ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಜತಿನ್ ಗುರುವಾರ (ಜೂನ್‌ 18) ತಡರಾತ್ರಿವರೆಗೆ ತನ್ನ ಕೋಣೆಯಲ್ಲಿ ಓದುತ್ತಿದ್ದ ಹಾಗೂ ಓಡಾಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಕುಟುಂಬದವರು ಅವನನ್ನು ಎಬ್ಬಿಸಲು ಹೋದಾಗ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ತಕ್ಷಣ ವಿಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ಕಟ್ಟಲಾಗಿದ್ದ ಹಗ್ಗ ತುಂಡಾಗಿ ಹೋಗಿದ್ದು, ಜತಿನ್‌ನ ಮೃತದೇಹ ನೆಲದ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ವೇಳೆ ಜತಿನ್ ಮೊಬೈಲ್ ಫೋನ್‌ನಿಂದ ಸುಮಾರು 1 ನಿಮಿಷ 4 ಸೆಕೆಂಡ್‌ಗಳ ವಿಡಿಯೊವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಕೆಲವೇ ಕ್ಷಣಗಳ ಮೊದಲು ಈ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಶಂಕಿಸಲಾಗಿದೆ.

ನಾಳೆ ನೀಟ್‌ ಮರುಪರೀಕ್ಷೆ; ದೇಶಾದ್ಯಂತ ಬಿಗಿ ಭದ್ರತೆ: ಡ್ರೆಸ್‌ ಕೋಡ್‌ ಹೇಗಿರಬೇಕು?

ವಿಡಿಯೊದಲ್ಲಿ ಜತಿನ್ ತನ್ನ ಓದುವ ಕೊಠಡಿಯನ್ನು ತೋರಿಸುತ್ತಾ, "ಇಂದು ನಾನು ಏನೋ ವಿಭಿನ್ನವಾದ ಕೆಲಸ ಮಾಡಲು ಯೋಚಿಸುತ್ತಿದ್ದೇನೆ" ಎಂದು ಹೇಳಿರುವುದು ಕಂಡುಬಂದಿದೆ. ಅಲ್ಲದೆ ಸೀಲಿಂಗ್ ಫ್ಯಾನ್‌ಗೆ ಕಟ್ಟಿದ್ದ ಹಗ್ಗವನ್ನೂ ವಿಡಿಯೋದಲ್ಲಿ ತೋರಿಸಿದ್ದಾನೆ.

ಪೊಲೀಸರ ಪ್ರಕಾರ, ವಿಡಿಯೋದಲ್ಲಿ ಜತಿನ್ ತಾನು ಯಾವುದೇ ಒತ್ತಡದಲ್ಲಿಲ್ಲ ಹಾಗೂ ನೀಟ್ ಪರೀಕ್ಷೆಯ ಬಗ್ಗೆ ಮಾನಸಿಕ ಒತ್ತಡ ಹೊಂದಿಲ್ಲ ಎಂದು ಹೇಳಿದ್ದಾನೆ. ಪರೀಕ್ಷೆಯ ಬಗ್ಗೆ ಹೆಚ್ಚು ಚಿಂತಿಸಬೇಡ ಎಂದು ತಂದೆ ಸಲಹೆ ನೀಡಿದ್ದರು ಎಂದೂ ಉಲ್ಲೇಖಿಸಿದ್ದಾನೆ.
ಇದಲ್ಲದೆ, ತಾನು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಬಯಸುತ್ತಿದ್ದೇನೆ. ಯಶಸ್ವಿಯಾದರೆ ಜನರು ಈ ವಿಡಿಯೋವನ್ನು ನೋಡುವರು ಎಂದು ಹೇಳಿದ್ದಾನೆ. ಈ ಹೇಳಿಕೆಯ ನಂತರ ವಿಡಿಯೊ ಕೊನೆಗೊಂಡಿದೆ.

ಜತಿನ್ ಕುಟುಂಬದ ಏಕೈಕ ಪುತ್ರನಾಗಿದ್ದನು. ತಂದೆ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಮಗನ ಅಕಾಲಿಕ ಸಾವಿನಿಂದ ಕುಟುಂಬ ಆಘಾತಕ್ಕೊಳಗಾಗಿದೆ.
ಸಹಾಯಕ ಪೊಲೀಸ್ ಆಯುಕ್ತೆ ಉಪಾಸನಾ ಪಾಂಡೆ ಮಾತನಾಡಿ, ವಿದ್ಯಾರ್ಥಿ ದಾಖಲಿಸಿರುವ ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.