ಭೋಪಾಲ್, ಜೂ. 14: ರಕ್ತ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಮೂರು ವರ್ಷದ ಬಾಲಕನೊಬ್ಬನ ರಕ್ತನಾಳಕ್ಕೆ ಸೂಚಿಸಲಾದ ಔಷಧಿಯ ಬದಲು ಫಾರ್ಮಾಲಿನ್ ಚುಚ್ಚಿದ್ದರಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಮಧ್ಯಪ್ರದೇಶದ ಭೋಪಾಲ್‌ನ ಏಮ್ಸ್‌ನಲ್ಲಿ (AIIMS Bhopal) ಘಟನೆ ನಡೆದಿದೆ. ಘಟನೆ ನಡೆದ ತಿಂಗಳುಗಳ ನಂತರ ಪೊಲೀಸರು ಇಬ್ಬರು ನರ್ಸ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಿದ್ದಾರೆ (crime news).
2025ರ ಡಿಸೆಂಬರ್‌ನಲ್ಲಿ ನಡೆದ ಈ ಪ್ರಕರಣವು ಆಸ್ಪತ್ರೆಯ ಆಂತರಿಕ ತನಿಖೆಯ ಬಳಿಕ ಬೆಳಕಿಗೆ ಬಂದಿದೆ. ತನಿಖಾ ವರದಿಯಲ್ಲಿ ವಿಷಕಾರಿ ರಾಸಾಯನಿಕವಾದ ಫಾರ್ಮಾಲಿನ್ ಬಾಲಕನ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದ್ದು, ಚಿಕಿತ್ಸೆ ಮತ್ತು ಔಷಧ ನೀಡುವ ಪ್ರಕ್ರಿಯೆಯಲ್ಲಿ ಗಂಭೀರ ನಿಯಮ ಉಲ್ಲಂಘನೆಗಳು ಹಾಗೂ ನಿರ್ಲಕ್ಷ್ಯ ನಡೆದಿರುವುದು ಬಹಿರಂಗವಾಗಿದೆ.
ಮೃತ ಬಾಲಕನನ್ನು ಸಾರ್ಥಕ್ ಯಾದವ್ ಎಂದು ಗುರುತಿಸಲಾಗಿದ್ದು, ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹಳ್ಳಿಯ ನಿವಾಸಿ. ಲ್ಯುಕೇಮಿಯಾದಿಂದ ಬಳಲುತ್ತಿದ್ದ ಬಾಲಕನನ್ನು ಡಿಸೆಂಬರ್ 15, 2025 ರಂದು ಭೋಪಾಲ್ ಏಮ್ಸ್‌ನ ಮಕ್ಕಳ ವಾರ್ಡ್‌ಗೆ ದಾಖಲಿಸಲಾಯಿತು. ಆಸ್ಪತ್ರೆಯ ಆಂತರಿಕ ವಿಚಾರಣೆಯ ಪ್ರಕಾರ, ಡಿಸೆಂಬರ್ 17 ರ ಬೆಳಗ್ಗೆ ಚಿಕಿತ್ಸೆಯ ಸಮಯದಲ್ಲಿ ಗಂಭೀರ ದೋಷ ಸಂಭವಿಸಿದೆ.
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು ಪ್ರಕರಣ; ಗುತ್ತಿಗೆದಾರ ಕಂಪನಿ ವಿರುದ್ಧ ಎಫ್‌ಐಆರ್
ಬಾಲಕನಿಗೆ ಅಳವಡಿಸಲಾಗಿದ್ದ ಇಂಟ್ರಾವೀನಸ್ ಲೈನ್ ಬ್ಲಾಕ್ ಆಗಿದೆ. ಈ ವೇಳೆ ನರ್ಸಿಂಗ್ ಅಧಿಕಾರಿ ಮಧುಬಾಲಾ ಶರ್ಮಾ ಅವರು F ಎಂಬ ಅಕ್ಷರ ಗುರುತಿಸಲ್ಪಟ್ಟಿದ್ದ ಸಿರಿಂಜ್‌ನಲ್ಲಿದ್ದ ದ್ರವವನ್ನು ಸರಿಯಾಗಿ ಪರಿಶೀಲಿಸದೆಯೇ ಬಾಲಕನಿಗೆ ಚುಚ್ಚಿದ್ದರು ಎಂದು ಆರೋಪಿಸಲಾಗಿದೆ.
ಸಿರಿಂಜ್‌ನಲ್ಲಿ ವೈದ್ಯರು ಸೂಚಿಸಿದ್ದ ಔಷಧಿ ಇಲ್ಲ ಎಂದು ಬಾಲಕನ ತಂದೆ ಆಸ್ಪತ್ರೆಯ ಸಿಬ್ಬಂದಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ, ಅವರ ಮಾತುಗಳನ್ನು ನಿರ್ಲಕ್ಷ್ಯ ಮಾಡಲಾಯಿತು. ಅಲ್ಲದೆ ತಮಗೆ ಏನು ಕೊಡಬೇಕು ಅನ್ನೋದು ಗೊತ್ತಿದೆ ಎಂದು ಗದರಿಸಿ, ಅವರನ್ನು ಮೌನವಾಗಿರುವಂತೆ ಹೇಳಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇಂಜೆಕ್ಷನ್ ನೀಡಿದ ಕೆಲವೇ ಕ್ಷಣಗಳಲ್ಲಿ, ಮಗುವಿನ ಆರೋಗ್ಯ ಸ್ಥಿತಿ ಶೀಘ್ರವಾಗಿ ಹದಗೆಟ್ಟಿತು. ಬಾಲಕ ಪ್ರಜ್ಞಾಹೀನನಾದನು. ಕೂಡಲೇ ಅವನನ್ನು ಮಕ್ಕಳ ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯಲಾಯಿತು. ವೈದ್ಯರು ಆತನ ಚೇತರಿಕೆಗೆ ತುಂಬಾ ಪ್ರಯತ್ನಿಸಿದರು. ಆದರೆ, ನಂತರ ಸಾರ್ಥಕ್ ಮೃತಪಟ್ಟಿದ್ದಾಗಿ ಘೋಷಿಸಲಾಯಿತು.
ಆಸ್ಪತ್ರೆಯ ವಿಚಾರಣೆಯಲ್ಲಿ ಬಾಲಕನ ಮೇಲೆ ಬಳಸಲಾದ ಸಿರಿಂಜ್‌ನಲ್ಲಿ ಫಾರ್ಮಾಲಿನ್ ಇರುವುದು ಕಂಡುಬಂದಿದೆ. ಫಾರ್ಮಾಲಿನ್ (Formalin) ಎನ್ನುವುದು ಫಾರ್ಮಾಲ್ಡಿಹೈಡ್ ಅನಿಲದ ಜಲೀಯ ದ್ರಾವಣವಾಗಿದ್ದು, ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ ಬಯಾಪ್ಸಿ ಮಾದರಿಗಳು ಹಾಗೂ ಮಾನವ ಅಂಗಾಂಶಗಳನ್ನು ಸಂರಕ್ಷಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ಹೆಚ್ಚು ವಿಷಕಾರಿ ರಾಸಾಯನಿಕವಾಗಿದ್ದು, ಯಾವುದೇ ಸಂದರ್ಭಗಳಲ್ಲಿ ಇದನ್ನು ಮಾನವ ದೇಹಕ್ಕೆ ಚುಚ್ಚುವ ಉದ್ದೇಶಕ್ಕಾಗಿ ಬಳಸುವುದಿಲ್ಲ.
ತನಿಖೆಯಲ್ಲಿ, ಮತ್ತೊಬ್ಬ ನರ್ಸ್ ಅನುಕಾ ಎಂಬವರು ಪ್ರಯೋಗಾಲಯದ ಬಳಕೆಗಾಗಿ ಸಿರಿಂಜ್‌ನಲ್ಲಿ ಫಾರ್ಮಾಲಿನ್ ತುಂಬಿಸಿದ್ದರು ಎಂದು ತಿಳಿದುಬಂದಿದೆ. ಆಸ್ಪತ್ರೆಯ ಶಿಷ್ಟಾಚಾರದ ಅಡಿಯಲ್ಲಿ ಅಗತ್ಯವಿರುವಂತೆ ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸುವ ಬದಲು, ಅದನ್ನು ರೋಗಿಯ ಹಾಸಿಗೆಯ ಬಳಿ ಇಡಲಾಗಿದೆ ಎಂದು ಆರೋಪಿಸಲಾಗಿದೆ.
ತನಿಖಾ ವರದಿಯ ಆಧಾರದ ಮೇಲೆ, ಭೋಪಾಲ್ ಪೊಲೀಸರು ಜೂನ್ 11 ರಂದು ಇಬ್ಬರು ನರ್ಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿದರು. ಅಮಿತ್ ಸೋನಿ ಮತ್ತು ಮಧುಬಾಲ ಶರ್ಮಾ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 106(1) ರ ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.