ನವದೆಹಲಿ, ಡಿ.27: ದೇಶಾದ್ಯಂತ ಹೊಸ(New Year) ವರ್ಷವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಲಾಗುತ್ತಿದೆ. ಈ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿ(Delhi Police)ಯಲ್ಲಿ ಹೊಸ ವರ್ಷಾಚರಣೆಗೂ ಮುನ್ನ ನೂರಾರು ಜನರನ್ನು ಬಂಧಿಸಲಾಗಿದೆ. ಆಪರೇಷನ್ ಆಘಾಟ್ 3.0(Operation Aaghat 3.0) ಅಡಿಯಲ್ಲಿ ಪೂರ್ವಭಾವಿ ಕ್ರಮವಾಗಿ ಆಗ್ನೇಯ ಜಿಲ್ಲೆಯ ಪೊಲೀಸರು ಸುಮಾರು ಎರಡು ಡಜನ್ ಅಕ್ರಮ ಶಸ್ತ್ರಾಸ್ತ್ರಗಳು, ಲಕ್ಷಾಂತರ ನಗದು, ಅಕ್ರಮ ಮದ್ಯ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಶಸ್ತ್ರಾಸ್ತ್ರ ಕಾಯ್ದೆ, ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಜೂಜಾಟ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ 285 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಹೊಸ ವರ್ಷದ ಸಮಯದಲ್ಲಿ ಸಂಭಾವ್ಯ ಅಪರಾಧಗಳನ್ನು ತಪ್ಪಿಸಲು ತಡೆಗಟ್ಟುವ ಕ್ರಮವಾಗಿ 504 ಜನರನ್ನು ಬಂಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ 21 ದೇಶೀಯ ನಿರ್ಮಿತ ಪಿಸ್ತೂಲುಗಳು, 20 ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು 27 ಚಾಕುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ತಂಡಗಳು ಮಾದಕ ದ್ರವ್ಯಗಳು ಮತ್ತು ಅಕ್ರಮ ಮದ್ಯದ ಸರಕುಗಳನ್ನು ಸಹ ವಶಪಡಿಸಿಕೊಂಡಿವೆ.
ಸ್ಥಳೀಯ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪೊಲೀಸರು ರಾತ್ರಿಯಿಡೀ ಇಡೀ ದೆಹಲಿಯಾದ್ಯಂತ ದಾಳಿ ಮಾಡಿದ್ದಾರೆ. ಜೂಜು ಹಾಗೂ ಮಟಕಾ ದಂಧೆ ನಡೆಸುತ್ತಿದ್ದವರ ಮೇಲೆಯೂ ಕೇಸ್ ದಾಖಲಿಸಲಾಗಿದೆ.
ಬೆಂಗಳೂರಿನಲ್ಲೂ ಕಟ್ಟೆಚ್ಚರ
ಹೊಸ ವರ್ಷಕ್ಕೂ ಮುನ್ನ ಬೆಂಗಳೂರಿನ ಹಲವು ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಗರದೆಲ್ಲೆಡೆ ಬಿಗಿ ಪೊಲೀಸ್ ಭದ್ರತೆಗೆ ಸಿದ್ಧತೆಯಾಗಿದ್ದು, ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಸೂಕ್ಷ್ಮ ಹಾಗೂ ಆಯಕಟ್ಟಿನ ಸ್ಥಳಗಳಿಗೆ ಖುದ್ದು ಭೇಟಿ ಕೊಟ್ಟು ಭದ್ರತಾ ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಡಿಸೆಂಬರ್ 31ರಂದು ಬಾರ್ ಮತ್ತು ಪಬ್ಗಳಿಗೆ ರಾತ್ರಿ 1 ಗಂಟೆವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಒಟ್ಟಾಗಿ ಸೇರುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳು ಹಾಗೂ ಸಾರ್ವಜನಿಕ ಶಾಂತಿ ಭಂಗವಾಗದಂತಿರಲು ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸೇರಿದ ಎಲ್ಲಾ ಉದ್ಯಾನಗಳು ಮತ್ತು ಕೆರೆಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.