ಕಾಠ್ಮಂಡು, ಆ.27: ಹಿಮಾಲಯದ ತಪ್ಪಲಿನ ಪುಟ್ಟ ದೇಶ ನೇಪಾಳದಲ್ಲಿ ದಿಢೀರ್ ಪ್ರವಾಹದಿಂದಾಗಿ ಸಂಭವಿಸಿರುವ ಅವಘಡದಲ್ಲಿ ತಮಿಳುನಾಡಿನ 37 ಜನ ಪ್ರವಾಸಿಗರು ಸೇರಿದಂತೆ 137 ಭಾರತೀಯರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 400ಕ್ಕೂ ಹೆಚ್ಚು ಜನರು ಪವಿತ್ರ ಮಾನಸ ಸರೋವರ ಯಾತ್ರೆಗೆಂದು ತೆರಳಿದ್ದವರಾಗಿದ್ದಾರೆ.
ತಂಜಾವೂರು, ತಿರುವರೂರು, ಮಯಿಲಾದುತುರೈ ಹಾಗೂ ಕೃಷ್ಣಗಿರಿ ಜಿಲ್ಲೆಗಳ 57 ಜನರು ನೇಪಾಳ ಹಾಗೂ ಟಿಬೆಟ್‌ಗೆ 13 ದಿನಗಳ ತೀರ್ಥಯಾತ್ರೆಗೆ ತೆರಳಿದ್ದರು. ಈ ಪೈಕಿ 20 ಜನರು ಸುರಕ್ಷಿತವಾಗಿದ್ದಾರೆ ಎಂಬುದಾಗಿ ಈ ಪ್ರವಾಸದ ಉಸ್ತುವಾರಿಯೊಬ್ಬರು ಮಾಹಿತಿ ನೀಡಿದ್ದಾರೆ’ ಎಂದು ಈ ಪ್ರವಾಸವನ್ನು ಆಯೋಜಿಸಿರುವ ಸೂಪರ್ ಯಾತ್ರಾ ಟೂರಿಸ್ಟ್ ಏಜೆನ್ಸಿ ತಿಳಿಸಿದೆ.
ಇಶಾ ಫೌಂಡೇಶನ್, ನೇಪಾಳದ ವಲಸೆ ಕೇಂದ್ರದಲ್ಲಿದ್ದ ತನ್ನ 77 ಸದಸ್ಯರು ನಾಪತ್ತೆಯಾಗಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಿದೆ. ವಲಸೆ ಕಚೇರಿಯಲ್ಲಿದ್ದವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ, ಆದರೆ 495 ಜನರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಅದರ ಸಂಸ್ಥಾಪಕ ಸದ್ಗುರು ಹೇಳಿದ್ದಾರೆ.
ನೇಪಾಳದಲ್ಲಿ ಸಿಲುಕಿರುವ ಭಾರತೀಯರಿಗೆ ಮತ್ತು ಅವರ ಸಂಬಂಧಿಕರ ಬಗ್ಗೆ ಮಾಹಿತಿ ಪಡೆಯಲು ಕುಟುಂಬಗಳಿಗೆ ಸಹಾಯ ಮಾಡಲು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಹಲವಾರು ರಾಜ್ಯಗಳ ಸರ್ಕಾರಗಳು ಸಹಾಯವಾಣಿಗಳನ್ನು ಸಕ್ರಿಯಗೊಳಿಸಿವೆ. ಪೀಡಿತ ಭಾರತೀಯರಲ್ಲಿ ಕನಿಷ್ಠ 59 ಮಂದಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಪ್ರಯಾಣಿಸುವ ಯಾತ್ರಿಕರು ಎಂದು ಸಾಮ್ರಾಟ್ ಟೂರ್ಸ್ ಮತ್ತು ಟ್ರಾವೆಲ್ ಏಜೆನ್ಸಿ ತಿಳಿಸಿದೆ. ಆದಾಗ್ಯೂ, ಸಂವಹನ ಸಂಪರ್ಕಗಳು ತೀವ್ರವಾಗಿ ಅಸ್ತವ್ಯಸ್ತಗೊಂಡಿರುವುದರಿಂದ ಮಾಹಿತಿ ಸೀಮಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಭಾರೀ ಪ್ರಮಾಣದ ನೀರ್ಗಲ್ಲು ಕುಸಿದು ಅದರ ನೀರು ನದಿಗೆ ಹರಿದ ಕಾರಣ ದುರ್ಘಟನೆ ಸಂಭವಿಸಿದೆ ಎಂದು ಒಂದು ವರದಿ ಹೇಳಿದ್ದರೆ, ಟಿಬೆಟ್‌ನ ಬೆಟ್ಟದ ಮೇಲೆ ಚೀನಾ ಕೈಗೊಂಡಿರುವ ಕಾಮಗಾರಿಗಳು ಈ ದುರ್ಘಟನೆಗೆ ಕಾರಣವಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಪ್ರವಾಹದ ರಭಸಕ್ಕೆ ನೂರಾರು ಮನೆ, ಕಟ್ಟಡ, ವಲಸೆ ವಿಭಾಗದ ಕಚೇರಿ, ಸೇತುವೆ, ಮಾರುಕಟ್ಟೆ ಹಾಗೂ ನದಿಪಾತ್ರದ ಪ್ರದೇಶಗಳು ಕೊಚ್ಚಿಹೋಗಿವೆ. ನೇಪಾಳ-ಚೀನಾ ಗಡಿ ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗ ಸಂಪೂರ್ಣ ಧ್ವಂಸಗೊಂಡಿದ್ದು, ಕನಿಷ್ಠ 13 ಜಲವಿದ್ಯುತ್ ಯೋಜನೆಗಳಿಗೆ ಹಾನಿಯಾಗಿದೆ. ದುರ್ಘಟನೆಯಲ್ಲಿ 200ಕ್ಕೂ ಹೆಚ್ಚು ಲಾರಿಗಳು ಸೇರಿದಂತೆ ಸಾವಿರಾರು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ದಿಢೀರ್ ಪ್ರವಾಹದ ದೃಶ್ಯಗಳ ಸಿಸಿಟೀವಿ ವಿಡಿಯೋ ದೃಶ್ಯಗಳು ಮೈಝುಮ್ಮೆನಿಸುವಂತಿದೆ.