ರಾಯ್‌ಪುರ, ಮೇ 2: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಶನಿವಾರ ನಕ್ಸಲರು ಈ ಹಿಂದೆ ಹೂತಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನವನ್ನು (IED) ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಯ ವೇಳೆ ಸಂಭವಿಸಿದ ಸ್ಫೋಟದಲ್ಲಿ ಜಿಲ್ಲಾ ಮೀಸಲು ಪಡೆಯ (District Reserve Guard) ನಾಲ್ವರು ಜವಾನರು ಮೃತ ಪಟ್ಟಿದ್ದಾರೆ. ರಾಜ್ಯವನ್ನು ನಕ್ಸಲ್ (Naxal) ಮುಕ್ತ ಎಂದು ಘೋಷಿಸಿದ ನಂತರ ಸಂಭವಿಸಿದ ಮೊದಲ ಘಟನೆ ಇದಾಗಿದೆ.
ನಾರಾಯಣಪುರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಪೊಲೀಸರ ತಂಡವು ಡಿಮೈನಿಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ನಕ್ಸಲರು ಈ ಹಿಂದೆ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಹೂತಿಟ್ಟಿದ್ದ ಸ್ಫೋಟಕಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವುದು ಈ ಕಾರ್ಯಾಚರಣೆಯ ಉದ್ದೇಶ. ಈ ವೇಳೆ ಜವಾನರು ಅಕಸ್ಮಾತ್ ಆಗಿ ಸ್ಫೋಟಕದ ಸಂಪರ್ಕಕ್ಕೆ ಬಂದಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗಾಯಗೊಂಡ ಸಿಬ್ಬಂದಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಮೃತ ಭದ್ರತಾ ಪಡೆ ಸಿಬ್ಬಂದಿ:
ಇನ್ಸ್‌ಪೆಕ್ಟರ್ ಸುಖ್‌ರಾಮ್ ವಟ್ಟಿ, ಕಾನ್‌ಸ್ಟೆಬಲ್ ಕೃಷ್ಣ ಕೊಮ್ರಾ ಮತ್ತು ಕಾನ್‌ಸ್ಟೆಬಲ್ ಸಂಜಯ್ ಗಢ್‌ಪಾಲೆ ಎಂಬ ಮೂವರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಕಾನ್‌ಸ್ಟೆಬಲ್ ಪರಮಾನಂದ ಕೊಮ್ರಾ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಮೂಲಗಳು ತಿಳಿಸಿವೆ.
2ನೇ ಹಂತದ ಮತದಾನದ ಸಿದ್ಧತೆಯಲ್ಲಿರುವ ಪಶ್ಚಿಮ ಬಂಗಾಳದಲ್ಲಿ 100 ಕಚ್ಚಾ ಬಾಂಬ್ ಪತ್ತೆ
ಮಾರ್ಚ್ 31 ರಂದು ಭಾರತವನ್ನು 'ಎಡಪಂಥೀಯ ತೀವ್ರಗಾಮಿ' (ನಕ್ಸಲಿಸಂ) ಮುಕ್ತ ರಾಷ್ಟ್ರವೆಂದು ಘೋಷಿಸಲಾಯಿತು. 2015ರಿಂದ ನಿರಂತರವಾಗಿ ನಡೆಸಲಾದ ಬಂಡಾಯ ವಿರೋಧಿ ಕಾರ್ಯಾಚರಣೆಗಳ ಫಲವಾಗಿ ದೇಶದ ಯಾವುದೇ ಜಿಲ್ಲೆಯು ಪ್ರಸ್ತುತ 'ನಕ್ಸಲ್ ಪೀಡಿತ' ಎಂದು ವರ್ಗೀಕರಿಸಲ್ಪಟ್ಟಿಲ್ಲ. ಆದರೆ ಕೇಂದ್ರ ಸರ್ಕಾರವು ಇತ್ತೀಚೆಗೆ ಒಂಬತ್ತು ರಾಜ್ಯಗಳ 37 ಜಿಲ್ಲೆಗಳನ್ನು ʼಲೆಗಸಿ ಆ್ಯಂಡ್ ಥ್ರಸ್ಟ್ ಡಿಸ್ಟ್ರಿಕ್ಟ್ಸ್ʼ ಎಂದು ಮರು-ವರ್ಗೀಕರಿಸಿದೆ. ಅಂದರೆ ಈ ಭಾಗಗಳಲ್ಲಿ ಸಕ್ರಿಯ ನಕ್ಸಲ್ ಹಿಂಸಾಚಾರ ಇಲ್ಲದಿದ್ದರೂ, ಭದ್ರತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ನಿರಂತರ ನಿಗಾ ವಹಿಸುವುದು ಅತ್ಯಗತ್ಯ.
ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯನ್ನು ಮಾತ್ರ ʼಕಳವಳಕಾರಿ ಜಿಲ್ಲೆʼ ಎಂದು ಗುರುತಿಸಲಾಗಿದ್ದು, ಅಲ್ಲಿನ ಬಂಡಾಯ ಜಾಲಗಳು ದುರ್ಬಲಗೊಂಡಿದ್ದರೂ ಜಾಗರೂಕತೆಯ ಅಗತ್ಯವಿದೆ ಎಂದು ತಿಳಿಸಲಾಗಿದೆ. ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‌ಗಢ ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳಲ್ಲಿ ಈ ನಿಗಾ ಮುಂದುವರಿಯಲಿದೆ.
ಸಕ್ರಿಯ ಸಂಘರ್ಷದ ವಲಯಗಳಿಂದ ಅಭಿವೃದ್ಧಿಯತ್ತ ಸಾಗುತ್ತಿರುವ ಈ ಪ್ರದೇಶಗಳಲ್ಲಿ ಇಂತಹ ಸ್ಫೋಟಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಅತ್ಯಂತ ಅಪಾಯಕಾರಿಯಾಗಿದ್ದರೂ, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಗಾಯಗೊಂಡ ಜವಾನರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.