ಇಂಫಾಲ, ನ. 13: ಸಂಘರ್ಷ ಪೀಡಿತ ಈಶಾನ್ಯ ರಾಜ್ಯ ಮಣಿಪುರ ಇನ್ನೂ ಸಹಜ ಸ್ಥಿತಿಯತ್ತ ಬಂದಿಲ್ಲ (Manipur Violence). ಇದೀಗ ಮತ್ತೆ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಉಖ್ರುಲ್ ಜಿಲ್ಲೆಯಲ್ಲಿ ಶುಕ್ರವಾರ (ನವೆಂಬರ್ 13) ನಡೆದ ದಾಳಿಯಲ್ಲಿ ನಾಗಾ ಸಮುದಾಯದ ನಾಲ್ವರು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 3 ತಿಂಗಳಲ್ಲಿ ಈ ಸಮುದಾಯದ ಮೇಲೆ ನಡೆಯುತ್ತಿರುವ 2ನೇ ಭೀಕರ ದಾಳಿ ಇದಾಗಿದೆ. ಬಂಡುಕೋರರು ಹೊಂಚುಹಾಕಿ ವಾಹನದಲ್ಲಿ ಸಾಗುತ್ತಿದ್ದವರ ಮೇಲೆ ಈ ದಾಳಿ ನಡೆದಿದ್ದಾರೆ. ʼʼಈ ಸಂತ್ರಸ್ತರು ಇಂಫಾಲದ ಕಡೆಗೆ ಪ್ರಯಾಣಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-202ರಲ್ಲಿ ಸಶಸ್ತ್ರಧಾರಿ ವ್ಯಕ್ತಿಗಳು ವಾಹನಗಳ ಮೇಲೆ ದಾಳಿ ನಡೆಸಿದರುʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರನ್ನು ಶಾಂಗ್‌ಶಾಕ್ ಗ್ರಾಮದ ಕಪಾಂಗ್‌ಖುಯಿ ಆರ್‌ಎಸ್ (Kapangkhui RS) ಮತ್ತು ಹೌಲೈಲಾ ಆರ್‌ಎಸ್ (Haoleila RS) ಹಾಗೂ ತಶಾರ್ ಗ್ರಾಮದ ಆಗಸ್ಟ್ ನ್ಗಾಲಂಗ್ (August Ngalung) ಮತ್ತು ಖಾನ್‌ಮಿಲಾ ಕೀಶಿಂಗ್ (Khanmila Keishing) ಎಂದು ಗುರುತಿಸಲಾಗಿದೆ. ಇವರು ಎರಡು ಪ್ರತ್ಯೇಕ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾಗ ನ್ಯೂ ಹೆವನ್ ಗ್ರಾಮದ ಬಳಿ ಸಶಸ್ತ್ರ ವ್ಯಕ್ತಿಗಳ ಗುಂಪೊಂದು ಹಠಾತ್ ದಾಳಿ ನಡೆಸಿತು.
ಮಣಿಪುರದಲ್ಲಿ ನಾಲ್ವರು ನಾಗಾ ಸಮುದಾಯದವರ ಹತ್ಯೆ:
"ಶಸ್ತ್ರಾಸ್ತ್ರ ಹೊಂದಿದ್ದ ಅಪರಿಚಿತ ವ್ಯಕ್ತಿಗಳು ಈ ದಾಳಿ ನಡೆಸಿದ್ದಾರೆ. ಇವರನ್ನು ಕುಕಿ ಬಂಡುಕೋರರೆಂದು ಶಂಕಿಸಲಾಗಿದೆ. ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಕಿ ಸಂಘಟನೆಗಳ ಕಡೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮಣಿಪುರ ಮತ್ತೆ ಉದ್ವಿಗ್ನ; ಶಿಕ್ಷಕ ಸೇರಿ ನಾಗಾ ಸಮುದಾಯದ ನಾಲ್ವರ ಹತ್ಯೆ; ಓರ್ವನಿಗೆ ಗಾಯ, ಮತ್ತೋರ್ವ ನಾಪತ್ತೆ
ಆಗಸ್ಟ್‌ನಲ್ಲೂ ನಾಲ್ವರ ಹತ್ಯೆ
ಕೆಲವು ದಿನಗಳ ಹಿಂದೆಯಷ್ಟೇ ನಾಗಾ ಬುಡಕಟ್ಟು ಸಮುದಾಯಕ್ಕೆ ಸೇರಿದ ನಾಲ್ವರನ್ನು ಅಪರಿಚಿತ ಬಂಡುಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆಗಸ್ಟ್ 27ರ ಬೆಳಗ್ಗೆ ನಡೆದ ಈ ದಾಳಿಯಲ್ಲಿ ಓರ್ವ ಗಾಯಗೊಂಡು ಮತ್ತೋರ್ವ ನಾಪತ್ತೆಯಾಗಿದ್ದ. ಹತ್ಯೆಯಾದವರಲ್ಲಿ ಓರ್ವ ಶಾಲಾ ಮುಖ್ಯೋಪಾಧ್ಯಾಯ ಕೂಡ ಇದ್ದರು. ಈ ಹಿಂದೆ 1992ರಲ್ಲಿ ಆರಂಭವಾಗಿ ಸುಮಾರು 6 ವರ್ಷಗಳ ಕಾಲ ನಡೆದ ಕುಕಿ-ನಾಗಾ ಜನಾಂಗೀಯ ಸಂಘರ್ಷದಲ್ಲಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
2023ರಿಂದ ಹಿಂಸಾಚಾರ
ಮಣಿಪುರದಲ್ಲಿ 2023ರ ಮೇಯಲ್ಲಿ ಆರಂಭವಾದ ಹಿಂಸಾಚಾರವು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಅಲ್ಲಿನ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡಂತಿದೆ. ಆಗಾಗ ಸಂಘರ್ಷ ಭುಗಿಲೇಳುತ್ತಲೇ ಇದೆ. ಅಂದಿನಿಂದ ಹಿಂಸಾಚಾರಕ್ಕೆ ಸುಮಾರು 370ಕ್ಕೂ ಮಂದಿ ಬಲಿಯಾಗಿದ್ದಾರೆ. ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈಥಿ ಸಮುದಾಯ ಬೇಡಿಕೆ ಮುಂದಿಟ್ಟ ಬಳಿಕ ಬುಡಕಟ್ಟು ಸಮುದಾಯ ಕುಕಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂಸಾಚಾರ ಭುಗಿಲೆದ್ದಿತ್ತು. ಮಣಿಪುರದ ಜನಸಂಖ್ಯೆಯ ಶೇ. 53ರಷ್ಟಿರುವ ಮೈಥಿ ಸಮುದಾಯದವರು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಆದಿವಾಸಿಗಳು ಮಣಿಪುರ ಜನಸಂಖ್ಯೆಯ ಶೇ. 40ರಷ್ಟಿದ್ದಾರೆ ಮತ್ತು ಮುಖ್ಯವಾಗಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ. ಕೆಲವು ದಿನಗಳಿಂದ ಶಾಂತವಾಗಿದ್ದ ಕಣಿವೆ ರಾಜ್ಯದಲ್ಲಿ ಮತ್ತೆ ಸಂಘರ್ಷ ಕಾಣಿಸಿಕೊಂಡಿದೆ.