ಗುರುಗ್ರಾಮ, ಜು.1: ಹರಿಯಾಣದ (Haryana) ಅಂಬಾಲಾ ಜಿಲ್ಲೆಯಲ್ಲಿ 220 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬುಧವಾರ (ಜುಲೈ 1) ಮುಂಜಾನೆ ಸತತ 21 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಬಾಲಕನ ಶವವನ್ನು ಹೊರತೆಗೆಯಲಾಯಿತು. ಮಂಗಳವಾರ ಬೆಳಗ್ಗೆ (ಜೂ.30) ಪ್ರಾರಂಭವಾದ ರಕ್ಷಣಾ ಕಾರ್ಯಾಚರಣೆಯ (Borewell rescue operation) ನಂತರ ಬಾಲಕ ನಿರ್ವೈರ್ ಸಿಂಗ್‌ನನ್ನು ಬೆಳಗಿನ ಜಾವ 3.40 ರ ಸುಮಾರಿಗೆ ಕೊಳವೆ ಬಾವಿಯಿಂದ ಹೊರತೆಗೆಯಲಾಯಿತು. ತಕ್ಷಣವೇ ಆಂಬ್ಯುಲೆನ್ಸ್‌ನಲ್ಲಿ ಅಂಬಾಲಾ ಕಂಟೋನ್ಮೆಂಟ್‌ನಲ್ಲಿರುವ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮಗುವನ್ನು ತುರ್ತು ನಿಗಾ ಘಟಕಕ್ಕೆ ಕರೆದೊಯ್ಯುವಾಗ ಬಾಲಕ ಅದಾಗಲೇ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮಂಗಳವಾರ (ಜೂ.30) ಬೆಳಗ್ಗೆ 6.30 ರ ಸುಮಾರಿಗೆ ಅಂಬಾಲಾ ಜಿಲ್ಲೆಯ ಧನಿಯೋರಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ನಿರ್ವೈರ್ ತನ್ನ ತಂದೆ ಮಂಜಿತ್ ಅವರೊಂದಿಗೆ ತನ್ನ ಅಜ್ಜ ಕರ್ನೈಲ್ ಸಿಂಗ್‌ಗೆ ಉಪಹಾರ ನೀಡಲು ಹೊಲಕ್ಕೆ ಹೋಗಿದ್ದ.
ಕರ್ನೈಲ್ ಬೆಳಗ್ಗೆ ಹೊಲಕ್ಕೆ ಕೆಲಸಕ್ಕೆ ತೆರಳಿದ್ದರು. ಅವರಿಗೆ ಉಪಾಹಾರ ಕೊಡುವುದಕ್ಕಾಗಿ ಮಂಜಿತ್ ಹೋಗಿದ್ದಾರೆ. ಈ ವೇಳೆ ತಂದೆಯೊಂದಿಗೆ ಬಾಲಕ ನಿರ್ವೈರ್ ಕೂಡ ತೆರಳಿದ್ದಾನೆ. ಹೊಲಕ್ಕೆ ತಲುಪಿದ ನಂತರ, ಮಂಜಿತ್ ಕೆಲಸ ಮಾಡಲು ಪ್ರಾರಂಭಿಸಿದರು. ತನ್ನ ಅಜ್ಜನ ಬಳಿ ಕುಳಿತಿದ್ದ ನಿರ್ವೈರ್ ನಂತರ ಸಮೀಪದಲ್ಲೇ ಆಟವಾಡುತ್ತಿದ್ದ. ಈ ವೇಳೆ ಬಾಲಕ ತೆರೆದ ಕೊಳವೆಬಾವಿಯನ್ನು ಗಮನಿಸಿ ಅದಕ್ಕೆ ಮಣ್ಣನ್ನು ಎಸೆಯಲು ಪ್ರಾರಂಭಿಸಿದನು. ಕೊಳವೆಬಾವಿಯ ಸುತ್ತಲು ಮಣ್ಣು ಒದ್ದೆಯಾಗಿತ್ತು. ಒಳಗೆ ನೋಡಲು ಬಾಗಿದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ.
ದೊಡ್ಡ ಶಬ್ಧ ಕೇಳಿದ ತಕ್ಷಣ ತಾತ ಹಾಗೂ ತಂದೆ ಕೊಳವೆ ಬಾವಿಯ ಬಳಿಗೆ ಧಾವಿಸಿ ಮಗುವನ್ನು ಕರೆದಿದ್ದಾರೆ. ಕುಟುಂಬ ಮತ್ತು ಗ್ರಾಮಸ್ಥರು ಆರಂಭದಲ್ಲಿ ತಾವಾಗಿಯೇ ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿದರು. ಸಾಧ್ಯವಾಗದ ಕಾರಣ ಕೊನೆಗೆ ಬೆಳಗ್ಗೆ 7.30 ರ ಸುಮಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿದವು.
ಜಿಲ್ಲಾಧಿಕಾರಿ ಅಜಯ್ ಸಿಂಗ್ ತೋಮರ್ ಮತ್ತು ಇತರ ಆಡಳಿತ ಅಧಿಕಾರಿಗಳು ಶೀಘ್ರದಲ್ಲೇ ಸ್ಥಳಕ್ಕೆ ತಲುಪಿದರು. ನಂತರ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸೇನೆಯ ರಕ್ಷಣಾ ತಂಡಗಳು ವ್ಯಾಪಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಹರಿಯಾಣದ ಸಂಪುಟ ಸಚಿವ ಅನಿಲ್ ವಿಜ್ ಕೂಡ ಮಂಗಳವಾರ (ಜೂ.30) ಸಂಜೆ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಮಗುವಿನ ಕುಟುಂಬವನ್ನು ಅವರು ಭೇಟಿ ಮಾಡಿದರು. ಬೋರ್‌ವೆಲ್ ಮುಚ್ಚದವರ ವಿರುದ್ಧ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದರು.
ಕೊಳವೆಬಾವಿಗಳನ್ನು ಸರಿಯಾಗಿ ಮುಚ್ಚಿದ್ದರೆ ಈ ದುರಂತವನ್ನು ತಡೆಯಬಹುದಿತ್ತು ಎಂದು ಹೇಳಿದ ತೋಮರ್, ಕೊಳವೆಬಾವಿಗಳನ್ನು ತೆರೆದಿಡದಂತೆ ರೈತರನ್ನು ಒತ್ತಾಯಿಸಿದರು.
ಕಳೆದ ತಿಂಗಳು, ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಮನೆಯ ಬಳಿ ಹೊಸದಾಗಿ ತೋಡಲಾಗಿದ್ದ ಕೊಳವೆಬಾವಿಗೆ ಬಿದ್ದ ನಂತರ ಆತನನ್ನು ರಕ್ಷಿಸಲಾಯಿತು. ಸುಮಾರು 20 ರಿಂದ 30 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಅವನನ್ನು ಸುಮಾರು ಒಂಬತ್ತು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಹೊರತೆಗೆಯಲಾಗಿತ್ತು.
2006 ರಲ್ಲಿ, ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೋರ್‌ವೆಲ್‌ಗೆ ಬಿದ್ದ ಐದು ವರ್ಷದ ಪ್ರಿನ್ಸ್ ಎಂಬ ಬಾಲಕನನ್ನು 48 ಗಂಟೆಗಳ ಬೃಹತ್ ಕಾರ್ಯಾಚರಣೆಯ ನಂತರ ರಕ್ಷಿಸಲಾಯಿತು. ಈ ಘಟನೆ ದೇಶವನ್ನೇ ಬೆಚ್ಚಿಬೀಳಿಸಿತ್ತು.