ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮತ್ತೊಂದು ಕೊಳವೆ ಬಾವಿ ದುರಂತ; 220 ಅಡಿ ಆಳಕ್ಕೆ ಬಿದ್ದ 4 ವರ್ಷದ ಬಾಲಕನ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ

Borewell Rescue Operation: 4 ವರ್ಷದ ಬಾಲಕನೊಬ್ಬ 220 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಆಘಾತಕಾರಿ ಘಟನೆ ಹರಿಯಾಣದ ಅಂಬಾಲ ಜಿಲ್ಲೆಯಲ್ಲಿ ನಡೆದಿದೆ. ಬಾಲಕ ಹೊಲದಲ್ಲಿ ಆಟವಾಡುತ್ತಿದ್ದಾಗ, ಯಾರೂ ಇಲ್ಲದಿದ್ದಾಗ ದುರ್ಘಟನೆ ಸಂಭವಿಸಿದೆ.

ಹರಿಯಾಣದಲ್ಲಿ 220 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 4 ವರ್ಷದ ಬಾಲಕ

ಚಂಡೀಗಢ, ಜೂ. 30: ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದೆ. 4 ವರ್ಷದ ಬಾಲಕನೊಬ್ಬ 220 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ (Boy Falls into Borewell) ಆಘಾತಕಾರಿ ಘಟನೆ ಹರಿಯಾಣದ (Haryana) ಅಂಬಾಲ ಜಿಲ್ಲೆಯಲ್ಲಿ ನಡೆದಿದೆ. ಬಾಲಕನ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಬಾಲಕನನ್ನು ನಿರ್ಭಯ್ ಎಂದು ಗುರುತಿಸಲಾಗಿದೆ. ಮಂಗಳವಾರ (ಜೂ. 30) ಬೆಳಗ್ಗೆ 6.30ರ ಸುಮಾರಿಗೆ ಬರಾರಾದ ಧನೌರಾ ಗ್ರಾಮದಲ್ಲಿ ಒಂಬತ್ತು ಇಂಚು ಅಗಲದ ಕಿರಿದಾದ ಕೊಳವೆ ಬಾವಿಗೆ ನಿರ್ಭಯ್ ಬಿದ್ದಿದ್ದಾನೆ. ತನ್ನ ತಂದೆಯೊಂದಿಗೆ ಹೊಲಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ಬಾಲಕನ ತಂದೆ ಮಂಜಿತ್, ನಿರ್ಭಯ್ ತಾತ ಕರ್ನೈಲ್ ಸಿಂಗ್ ಅವರಿಗೆ ಉಪಾಹಾರ ತಲುಪಿಸಲು ಹೋಗಿದ್ದರು. ದೊಡ್ಡವರು ಕೃಷಿ ಕೆಲಸಕ್ಕೆ ಹೋಗುತ್ತಿದ್ದಂತೆ, ನಿರ್ಭಯ್ ಸಮೀಪದಲ್ಲಿ ಆಟವಾಡಲು ಪ್ರಾರಂಭಿಸಿದ್ದ. ಈ ವೇಳೆ ಆತ ತೆರೆದಿರುವ ಕೊಳವೆ ಬಾವಿಯನ್ನು ಗಮನಿಸಿ ಅದರೊಳಗೆ ಒಂದು ಹಿಡಿ ಮಣ್ಣನ್ನು ಹಾಕಲು ಪ್ರಾರಂಭಿಸಿದ. ಕೊಳವೆ ಬಾವಿಯ ಸುತ್ತಲಿನ ನೆಲ ಒದ್ದೆಯಾಗಿತ್ತು, ಹೀಗಾಗಿ ಅದು ಜಾರುತ್ತಿತ್ತು. ಬಾಲಕ ಇಣುಕಿ ನೋಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಸಮತೋಲನ ಕಳೆದುಕೊಂಡು ಕೊಳವೆ ಬಾವಿಯೊಳಗೆ ಬಿದ್ದಿದ್ದಾನೆ ಎನ್ನಲಾಗಿದೆ.

ದೊಡ್ಡ ಶಬ್ಧ ಕೇಳಿ ಬಂದಿದ್ದರಿಂದ ನಿರ್ಭಯ್‌ನ ತಂದೆ ಮತ್ತು ಅಜ್ಜ ಕೊಳವೆ ಬಾವಿಯ ಬಳಿಗೆ ಧಾವಿಸಿದರು. ಆತ ಅಲ್ಲೆಲ್ಲೂ ಕಾಣಿಸದಿದ್ದಾಗ ಮಗುವಿನ ಹೆಸರನ್ನು ಪದೇ ಪದೆ ಕರೆದರು. ಬಳಿಕ ಆತ ಕೊಳವೆ ಬಾವಿಗೆ ಬಿದ್ದಿರುವುದು ಗೊತ್ತಾಯ್ತು. ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಬಾಲಕನನ್ನು ರಕ್ಷಿಸಲು ತಮ್ಮ ಕೈಲಾದ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ.

10 ದಿನಗಳ ಬಳಿಕ ಹೊರ ಬಂದ 3 ವರ್ಷದ ಕಂದಮ್ಮ ಬದುಕುಳಿಯಲಿಲ್ಲ

ಸ್ಥಳೀಯರ ಪ್ರಯತ್ನಗಳು ವಿಫಲವಾದ ನಂತರ, ಬೆಳಗ್ಗೆ 7.30 ರ ಸುಮಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಕೆಲವೇ ಗಂಟೆಗಳಲ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಜಿಲ್ಲಾಡಳಿತದ ತಂಡಗಳು ವಿಶೇಷ ರಕ್ಷಣಾ ಸಾಧನಗಳೊಂದಿಗೆ ಸ್ಥಳಕ್ಕೆ ತಲುಪಿದವು.

ರಕ್ಷಣಾ ಕಾರ್ಯದ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅಜಯ್ ಸಿಂಗ್ ತೋಮರ್, ''ಬೋರ್‌ವೆಲ್ ಸುಮಾರು ಒಂಬತ್ತು ಇಂಚು ಅಗಲವನ್ನು ಹೊಂದಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆ ಬಹಳ ಸವಾಲಿನಿಂದ ಕೂಡಿದೆ'' ಎಂದು ಹೇಳಿದರು. ಮಗುವನ್ನು ಸುರಕ್ಷಿತವಾಗಿ ಮೇಲೆ ತರಲು ರಕ್ಷಣಾ ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಅತ್ಯಂತ ಕಠಿಣ ಹಾಗೂ ಸವಾಲಿನ ರಕ್ಷಣಾ ಕಾರ್ಯಾಚರಣೆಯಲ್ಲಿ ತುರ್ತು ರಕ್ಷಣಾ ತಂಡಗಳು ಹೋರಾಡುತ್ತಿದ್ದು, ಮಗು ನಿರ್ಭಯ್ ಸುರಕ್ಷಿತವಾಗಿ ಹೊರಬರಲಿ ಎಂದು ಆತನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರಾರ್ಥಿಸುತ್ತಿದ್ದಾರೆ.