ನವದೆಹಲಿ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನಿಂದಾಗಿ ಜಗತ್ತಿನಾದ್ಯಂತ ತೈಲ ಕೊರತೆ ಉಂಟಾಗಿದೆ. ಇದೀಗ (Petrol price hike) ಕೇಂದ್ರ ಸರ್ಕಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 3 ರೂ. ಏರಿಕೆ ಮಾಡಿದೆ. ಸುಮಾರು ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 3 ರೂ. ಹೆಚ್ಚಳ ಕಂಡಿದೆ. ಆದಾಗ್ಯೂ, ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ಕಡಿಮೆ ಬೆಲೆ ಏರಿಕೆಯಾಗಿದೆ. ಇರಾನ್ ಯುದ್ಧವು ವಿಶ್ವದ ಅತ್ಯಂತ ನಿರ್ಣಾಯಕ ತೈಲ ಮಾರ್ಗವಾದ ಹಾರ್ಮೊಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಇಂಧನ ಬೆಲೆಗಳು ದೇಶಾದ್ಯಂತ ಏರಿವೆ.
ಕಚ್ಚಾ ತೈಲವು ಬ್ಯಾರೆಲ್‌ಗೆ 100 ಡಾಲರ್ ದಾಟಿದಾಗಲೂ, ಸಾರ್ವಜನಿಕ ವಲಯದ ತೈಲ ಕಂಪನಿಗಳು ಸುಮಾರು 76 ದಿನಗಳ ಕಾಲ ಬೆಲೆಗಳನ್ನು ಸ್ಥಿರವಾಗಿ ಕಾಯ್ದುಕೊಂಡವು. ಹಲವಾರು ರಾಷ್ಟ್ರಗಳು ಬೆಲೆಗಳನ್ನು ಶೇ. 20, 40, ಅಥವಾ ಶೇ. 90 ರಷ್ಟು ಬದಲಾಯಿಸಿದರೂ, ಭಾರತ ಎರಡು ತಿಂಗಳಿಗೂ ಹೆಚ್ಚು ಕಾಲ ಆ ಆಘಾತವನ್ನು ಸಹಿಸಿಕೊಂಡಿತು. ಯುಎಇ, ಯುನೈಟೆಡ್ ಕಿಂಗ್‌ಡಮ್‌ನಂತಹ ದೇಶಗಳು ಕಚ್ಚಾ ತೈಲದ ಬೆಲೆಯನ್ನು ಗಣನೀಯವಾಗಿ ಏರಿಸಿವೆ.
ಭಾರತವು ತನ್ನ ಕಚ್ಚಾ ತೈಲದ 80-85 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲದ ಪ್ರತಿ 10 ಡಾಲರ್ ಏರಿಕೆಯು ಆಮದು ಬಿಲ್‌ಗೆ 13-14 ಡಾಲರ್ ಬಿಲಿಯನ್ ಅನ್ನು ಸೇರಿಸುತ್ತದೆ. ಭಾರತದ ವಾರ್ಷಿಕ ಕಚ್ಚಾ ತೈಲ ಆಮದು ಬಿಲ್ ಈಗಾಗಲೇ 12-15 ಲಕ್ಷ ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಇದಲ್ಲದೆ, ಚಿನ್ನದ ಆಮದು ಸುಮಾರು 6 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ತೈಲ ಮತ್ತು ಚಿನ್ನ ಒಟ್ಟಾಗಿ ವಿದೇಶಿ ವಿನಿಮಯದ ಮೇಲೆ ಬೃಹತ್ ಮೊತ್ತವನ್ನು ನೀಡುತ್ತಿದೆ. ಇದರ ಹೊರತಾಗಿಯೂ ಸರ್ಕಾರ, ಗ್ರಾಹಕರನ್ನು ರಕ್ಷಿಸಲು ಕೇಂದ್ರವು ಈ ಹಿಂದೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 8 ರೂ ಮತ್ತು ಡೀಸೆಲ್ ಮೇಲಿನ 6 ರೂ ಕಡಿತಗೊಳಿಸಿತ್ತು.
ಜಾಗತಿಕ ಬ್ರೋಕರೇಜ್ ಸಂಸ್ಥೆ ಬಾರ್ಕ್ಲೇಸ್ ಪ್ರಕಾರ, ಲೋಹಗಳು, ರಾಸಾಯನಿಕಗಳು ಮತ್ತು ಜವಳಿಗಳ ತಯಾರಿಕಾ ಬೆಲೆಗಳ ಏರಿಕೆಯಿಂದಾಗಿ ಮೂಲ ಸಗಟು ಬೆಲೆ ಹಣದುಬ್ಬರ ವರ್ಷದಿಂದ ವರ್ಷಕ್ಕೆ ಶೇ. 5 ಕ್ಕೆ ಏರಿದೆ. ಇಂಧನ ಮತ್ತು ಶಕ್ತಿ ವಿಭಾಗದಲ್ಲಿ ಸಗಟು ಬೆಲೆ ಹಣದುಬ್ಬರವು ಮಾರ್ಚ್ನಲ್ಲಿ ಶೇ. 1.05 ರಷ್ಟಿದ್ದದ್ದು, ಏಪ್ರಿಲ್‌ನಲ್ಲಿ42 ತಿಂಗಳ ಗರಿಷ್ಠ ಮಟ್ಟವಾದ ಶೇ.24.71ಕ್ಕೆ ಏರಿದೆ. ಆಹಾರಪದಾರ್ಥಗಳ ಹಣದುಬ್ಬರ ಮಾರ್ಚ್ ನಲ್ಲಿ ಶೆ.1.90ರಷ್ಟಿದ್ದರೆ, ಏಪ್ರಿಲ್ ತಿಂಗಳಿನಲ್ಲಿ ಶೆ.1.98 ರಷ್ಟಿದೆ. ಆಹಾರೇತರ ವಸ್ತುಗಳಲ್ಲಿ ಹಣದುಬ್ಬರವು ಹಿಂದಿನ ತಿಂಗಳ ಶೇ.11.5ರಷ್ಟಿರಿಂದ ಏಪ್ರಿಲ್‌ನಲ್ಲಿ ಶೆ.12.18ಕ್ಕೆ ಏರಿಕೆಯಾಗಿದೆ. ಉತ್ಪಾದಿನ ವಸ್ತುಗಳ ಹಣದುಬ್ಬರವು ಹಿಂದಿನ ತಿಂಗಳ ಶೇ.3.39ಕ್ಕೇ ಹೋಲಿಸಿದರೆ ಏಪ್ರಿಲ್ ನಲ್ಲಿ ಶೇ.4.62ರಷ್ಟಿತ್ತು. ಇತ್ತ, ಎಲ್‌ಪಿಜಿ ಹಣದುಬ್ಬರ ಮಾರ್ಚ್ ನಲ್ಲಿ ಮೈನಸ್‌ನಲ್ಲಿ ಶೇ.1.54ರಷ್ಟಿದ್ದರೆ, ಏಪ್ರಿಲ್‌ನಲ್ಲಿ ಶೇ.10.29ರಷ್ಟಿದೆ.
ಹಾರ್ಮೊಜ್ ಬಿಕ್ಕಟ್ಟಿಗೆ ಯುಎಇ ಹೊಸ ಪ್ಲಾನ್! ಹೊಸ ತೈಲ ಪೈಪ್‌ಲೈನ್ ಯೋಜನೆಗೆ ಅಸ್ತು
ಜಾಗತಿಕ ಬಿಕ್ಕಟ್ಟಿನಿಂದಾಗಿ ಈಗಾಗಲೇ ಪ್ರಧಾನಿ ಮೋದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಸಾವರ್ಜನಿಕ ವಾಹನವನ್ನು ಹೆಚ್ಚಾಗಿ ಬಳಸಿ, ಒಂದು ವರ್ಷ ಚಿನ್ನ ಖರೀದಿಯನ್ನು ಮುಂದೂಡಿ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ ಎಂದು ಹೇಳಿದ್ದಾರೆ.