ಡೆಹ್ರಾಡೂನ್: ಉತ್ತರಾಖಂಡದ (Uttarakhand) ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಬದರಿನಾಥ ಧಾಮದಿಂದ ಹಿಂತಿರುಗುತ್ತಿದ್ದ ಹೆಲಿಕಾಪ್ಟರ್ (Helicopter Crash) ಪತನಗೊಂಡಿದ್ದು, ಪೈಲಟ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸೋಲಂಕಿ, ಪ್ರತಾಪ್, ವಕೀಲರಾದ ಬಿ.ಶಂಕರೇಗೌಡ, ಸುಧೀರ್ ಕೆ., ಎಚ್.ಎಸ್. ನಟರಾಜ್ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಸುಮಾರು 2:15 ರ ವೇಳೆಗೆ ಬದರಿನಾಥದಿಂದ ಡೆಹ್ರಾಡೂನ್ ಅಥವಾ ಸಹಸ್ತ್ರಧಾರಾ ಕಡೆಗೆ ಹೊರಟಿದ್ದ 'ಟ್ರಾನ್ಸ್ ಭಾರತ್ ಏವಿಯೇಷನ್' ಸಂಸ್ಥೆಯ ಹೆಲಿಕಾಪ್ಟರ್, ಪ್ರತಿಕೂಲ ಹವಾಮಾನದಿಂದಾಗಿ ನಿಯಂತ್ರಣ ಕಳೆದುಕೊಂಡು ಹಾತಿ ಪರ್ವತದ ಸಮೀಪವಿರುವ ಚಾಯಿ ಗ್ರಾಮದ ಬಳಿ ಪತನಗೊಂಡಿದೆ.
ವರದಿ ಪ್ರಕಾರ ಹೆಲಿಕಾಪ್ಟರ್‌ನಲ್ಲಿ ಓರ್ವ ಪೈಲಟ್ ಮತ್ತು ಐದು ಮಂದಿ ತೀರ್ಥಯಾತ್ರಿಗಳು ಸೇರಿದಂತೆ ಒಟ್ಟು 6 ಜನರಿದ್ದರು. ಜೋಶಿಮಠ ಮತ್ತು ಬದರಿನಾಥ ಮಾರ್ಗದಲ್ಲಿ ಉಂಟಾದ ಭಾರಿ ಹಿಮಪಾತ, ಮಳೆ ಮತ್ತು ದಟ್ಟವಾದ ಮೋಡ ಕವಿದ ವಾತಾವರಣದಿಂದಾಗಿ ಹೆಲಿಕಾಪ್ಟರ್ ನಿಯಂತ್ರಣ ಕಂಟ್ರೋಲ್ ರೂಮ್‌ನೊಂದಿಗೆ ಸಂಪರ್ಕ ಕಡಿತಗೊಂಡಿತ್ತು. ಜಿಲ್ಲಾಡಳಿತವು ಕಾಣೆಯಾದ ವಿಮಾನವನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ಪ್ರಾರಂಭಿಸಿತು, ಅದನ್ನು ಪತ್ತೆಹಚ್ಚಲು ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ವೈಮಾನಿಕ ಶೋಧ ತಂಡವನ್ನು ನಿಯೋಜಿಸಲಾಗಿದೆ. ಕಾಣೆಯಾದ ಹೆಲಿಕಾಪ್ಟರ್‌ಗಾಗಿ ಹುಡುಕಾಟ ನಡೆಸುತ್ತಿರುವ ತಂಡಗಳು ಅವಶೇಷಗಳ ದೃಶ್ಯಗಳು ಕಂಡು ಬಂದಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದ ಕುರಿತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದು, "ಜೋಶಿಮಠದ ಸಮೀಪವಿರುವ ಚಾಯಿ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿರುವ ಅತ್ಯಂತ ದುರದೃಷ್ಟಕರ. ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಜಂಟಿಯಾಗಿ ಸ್ಥಳದಲ್ಲಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಹೇಳಿದ್ದಾರೆ.
ಮಿಗ್-29 ಪತನದ ವೈರಲ್ ವಿಡಿಯೋ ಸುಳ್ಳು; ಅದು ವಿಡಿಯೊ ಗೇಮ್‌ನ ದೃಶ್ಯ ಎಂದ ಸರ್ಕಾರ
ಗುಡ್ಡಗಾಡು ಪ್ರದೇಶ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ತಂಡಗಳಿಗೆ ಅಪಘಾತದ ನಿಖರ ಸ್ಥಳ ತಲುಪಲು ಮತ್ತು ಅವಶೇಷಗಳ ಶೋಧ ನಡೆಸಲು ತೀವ್ರ ತೊಂದರೆಯಾಗುತ್ತಿದ್ದು, ಶೋಧ ಕಾರ್ಯ ನಡೆಯುತ್ತಿದೆ.