ಇಂಫಾಲ್: ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ (SIT) ರಾಜಾ ರಘುವಂಶಿ ಕೊಲೆ (Raja Raghuvanshi) ಪ್ರಕರಣದಲ್ಲಿ ತನ್ನ ಆರೋಪಪಟ್ಟಿಯನ್ನು ಸಲ್ಲಿಸಿದ್ದು, ರಘುವಂಶಿ ಪತ್ನಿ, ಆಕೆಯ ಪ್ರಿಯಕರ ರಾಜ್ ಕುಶ್ವಾಹ ಮತ್ತು ಇತರ ಮೂವರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಜನವರಿಯಲ್ಲಿ ನಡೆದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ರಾಜಾ ರಘುವಂಶಿ ಇಂದೋರ್‌ನಲ್ಲಿ ಉದ್ಯಮಿಯಾಗಿದ್ದು, ಆತನ ಪತ್ನಿ ಹಾಗೂ ಆಕೆಯ ಪ್ರಿಯಕರ ಕೊಲೆ ಮಾಡಿದ್ದರು. ಕೊಲೆಗೆ ಸಂಬಂಧಿಸಿದಂತೆ 790 ಪುಟಗಳ ಆರೋಪಪಟ್ಟಿಯನ್ನು ಸೊಹ್ರಾ ಉಪ-ವಿಭಾಗದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ ಎಂದು ಮೇಘಾಲಯ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೋನಮ್ ಮತ್ತು ರಾಜ್ ಜೊತೆಗೆ, ಆಕಾಶ್ ರಜಪೂತ್, ಆನಂದ್ ಕುರ್ಮಿ ಮತ್ತು ವಿಶಾಲ್ ಸಿಂಗ್ ಚೌಹಾಣ್ ಮೇ 23 ರಂದು ತಮ್ಮ ಹನಿಮೂನ್ ಸಮಯದಲ್ಲಿ ಮಹಿಳೆ ತನ್ನ ಗಂಡನನ್ನು ಕೊಲ್ಲಲು ಸಹಾಯ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಕೊಲೆಗಾಗಿ ಸೆಕ್ಷನ್ 103 (I), ಅಪರಾಧದ ಸಾಕ್ಷ್ಯಗಳ ಕಣ್ಮರೆಗಾಗಿ 238 (a) ಮತ್ತು ಕ್ರಿಮಿನಲ್ ಪಿತೂರಿಗಾಗಿ 61 (2) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಹೆಚ್ಚುವರಿ ವಿಧಿವಿಜ್ಞಾನ ವರದಿಗಳು ಹೊರಬಂದ ನಂತರ ಇತರ ಮೂವರು ಸಹ-ಆರೋಪಿಗಳ ವಿರುದ್ಧ ಪೂರಕ ಆರೋಪಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಪೂರ್ವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಮ್ ಹೇಳಿದ್ದಾರೆ. ಸಾಕ್ಷ್ಯ ನಾಶ ಮತ್ತು ಸಾಕ್ಷ್ಯಗಳನ್ನು ಮರೆಮಾಚುವ ಆರೋಪದ ಮೇಲೆ ಬಂಧಿಸಲ್ಪಟ್ಟ ಜೇಮ್ಸ್, ತೋಮರ್ ಮತ್ತು ಅಹಿರ್‌ಬರ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
ಈ ಸುದ್ದಿಯನ್ನೂ ಓದಿ: Biklu Shiva Murder case: ರೌಡಿಶೀಟರ್ ಬಿಕ್ಲು ಶಿವ ಕೊಲೆಯ ಪ್ರಮುಖ ಆರೋಪಿ ಜಗದೀಶ್ ಬಂಧನ
29 ವರ್ಷದ ರಾಜಾ ಮತ್ತು 24 ವರ್ಷದ ಸೋನಮ್ ಈಶಾನ್ಯ ರಾಜ್ಯವಾದ ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದರು. ಜೂನ್ 2 ರಂದು ರಾಜಾ ಅವರ ಶವ ಪತ್ತೆಯಾದ ಸ್ಥಳದಿಂದ 20 ಕಿ.ಮೀ ದೂರದಲ್ಲಿರುವ ನೊಂಗ್ರಿಯಾಟ್ ಗ್ರಾಮದಲ್ಲಿನ ಹೋಂಸ್ಟೇಯಿಂದ ಹೊರಬಂದ ಕೆಲವೇ ಗಂಟೆಗಳ ನಂತರ, ಮೇ 23 ರಂದು ಅವರು ನಾಪತ್ತೆಯಾಗಿದ್ದರು. ತನಿಖೆ ಬಳಿಕ ಕೊಲೆ ಮಾಡಿಸಿದ್ದ ಆತನ ಪತ್ನಿ ಹಾಗೂ ಪ್ರಿಯಕರ ಎಂದು ತಿಳಿದು ಬಂದಿತ್ತು.