ಜೈಪುರ, ನ. 2: ರಾಜಸ್ಥಾನದಲ್ಲಿ ಭೀಕರ ದುರಂತವೊಂದು ನಡೆದಿದ್ದು, ವಿದ್ಯುತ್ ಶಾಕ್ ಹೊಡೆದು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ 8 ಕಾರ್ಮಿಕರು ಮೃತಪಟ್ಟು, 5 ಮಂದಿ ಗಾಯಗೊಂಡಿದ್ದಾರೆ. ಝುಂಝುನು ಜಿಲ್ಲೆಯ ಉದಯಪುರವಾಟಿ ಪ್ರದೇಶದ ಛಾಪೋಲಿ ಗ್ರಾಮದಲ್ಲಿ ಜಲ್ಲಿ ಮತ್ತು ಮರಳು ಮಿಶ್ರ ಮಾಡುವ ಯಂತ್ರಕ್ಕೆ ಹೈಟೆನ್‌ಷನ್ ಪವರ್ ಲೈನ್ ಸ್ಪರ್ಶಿಸಿ ಈ ಅವಘಡ ಸಂಭವಿಸಿದೆ (Rajasthan Horror). ಈ ವೇಳೆ ಕಾರ್ಮಿಕರು ರಸ್ತೆ ಕಾಮಗಾರಿ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ವಿದ್ಯುತ್ ಇಲಾಖೆ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಉದಯಪುರವಾಟಿ ಠಾಣಾಧಿಕಾರಿ ರಾಂಪಾಲ್ ಮಾಹಿತಿ ನೀಡಿ, “ಜಲ್ಲಿ ಮತ್ತು ಮರಳನ್ನು ಮಿಶ್ರಣ ಮಾಡಲು ಬಳಸುತ್ತಿದ್ದ ಯಂತ್ರವೊಂದು ವಿದ್ಯುತ್ ತಂತಿಯನ್ನು ಸ್ಪರ್ಶಿಸಿತು. ಇದರಿಂದ ಯಂತ್ರದಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿದ್ದ ಕಾರ್ಮಿಕರಿಗೆ ವಿದ್ಯುತ್ ಆಘಾತ ಉಂಟಾಯಿತು” ಎಂದು ತಿಳಿಸಿದ್ದಾರೆ. ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವರು ವಿವರಿಸಿದ್ದಾರೆ.
ರಾಜಸ್ಥಾನದಲ್ಲಿ ಶಾಕ್ ಹೊಡೆದು 8 ಮಂದಿಯ ಸಾವು:
ಮೃತರನ್ನು ಹಳೇದ ಮಂದಾವರ ನಿವಾಸಿಗಳಾದ ಹರಿರಾಮ್ ಗುರ್ಜರ್ (30), ಮಂಗಲ್‌ಚಂದ್ ಗುರ್ಜರ್ (22), ಕಲುರಾಮ್ ಗುರ್ಜರ್ (29), ಮತ್ತು ಪವನ್ ಗುರ್ಜರ್ (23) ಮತ್ತು ಛಪೋಲಿ ನಿವಾಸಿಗಳಾದ ವಿಷ್ಣು ಸೈನಿ (38), ಸುರೇಂದ್ರ ಅಲಿಯಾಸ್ ಸುರೇಶ್ ಸೈನಿ (30), ಮುಖೇಶ್ ಸೈನಿ (27), ಮತ್ತು ಫತೇಚಂದ್ ಸೈನಿ (32) ಎಂದು ಗುರುತಿಸಲಾಗಿದೆ. ಛಾಪೋಲಿಯ ನಿವಾಸಿಗಳಾದ ಮಹೇಂದ್ರ, ಗೀತಾ ದೇವಿ, ಸಂತಾರಾ ದೇವಿ, ಗಿದಾ ರಾಮ್ ಮತ್ತು ಮಂಜು ದೇವಿ ಗಾಯಗೊಂಡಿದ್ದಾರೆ.
ಕೃಷಿ ಹೊಂಡದಲ್ಲಿ ಕರೆಂಟ್ ಶಾಕ್ ಹೊಡೆದು ಮೂವರು ಸಾವು
ಗ್ರಾಮಸ್ಥರಿಂದ ಆಕ್ರೋಶ
ಈ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಮತ್ತು ತಂತಿಗಳು ಮರಗಳಿಗೆ ತಗುಲಿಕೊಂಡಿದ್ದವು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಗ್ರಿಡ್ ಸಬ್‌ಸ್ಟೇಷನ್‌ಗೆ ಕರೆ ಮಾಡಿದಾಗ, ಅಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ ಎಂದು ತಿಳಿಸಿದ್ದಾರೆ. ಈ ಅಪಾಯವನ್ನು ಗುರುತಿಸುವಲ್ಲಿ ಆಡಳಿತ ಮತ್ತು ವಿದ್ಯುತ್ ಇಲಾಖೆ ವಿಫಲವಾಗಿದೆ ಎಂದಿದ್ದಾರೆ.
ಮಾಜಿ ಸಚಿವ ರಾಜೇಂದ್ರ ಗುಧಾ ಸ್ಥಳಕ್ಕೆ ಆಗಮಿಸಿ, ಸಂತ್ರಸ್ತ ಕುಟುಂಬಗಳಿಗೆ ನೆರವಾಗುವಂತೆ ಆಗ್ರಹಿಸಿದ್ದಾರೆ. "ಮೃತಪಟ್ಟ ಪ್ರತಿ ವ್ಯಕ್ತಿಯ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು. ಇದೊಂದು ರಾಜಕೀಯಗೊಳಿಸಬೇಕಾದ ವಿಷಯವಲ್ಲ. ಇದು ಸಂತ್ರಸ್ತರ ಪರವಾಗಿ ನಿಲ್ಲುವ ಮತ್ತು ಅವರ ಪುನರ್ವಸತಿಯ ಬಗ್ಗೆ ಯೋಚಿಸಬೇಕಾದ ಸಮಯ. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಕುಟುಂಬಗಳಿಗೆ ಧೈರ್ಯ ತುಂಬಬೇಕು" ಎಂದು ಅವರು ಹೇಳಿದ್ದಾರೆ.
ಇಸ್ಕಾನ್ ದೇಗುಲದಲ್ಲಿ ಶಾಕ್ ಹೊಡೆದು ಅಸುನೀಗಿದ ಮಗನ ಮೃತದೇಹದ ಮುಂದೆ ತಂದೆಯ ಆಕ್ರಂದನ
ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಸಂತಾಪ
ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು, ಗಾಯಗೊಂಡವರಿಗೆ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು, ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ನೆರವು ನೀಡಲು ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.