ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ʼʼತಂದೆ ಬಂದಿದ್ದೇನೆ, ನೋಡುʼʼ: ಇಸ್ಕಾನ್‌ ದೇಗುಲದಲ್ಲಿ ಶಾಕ್‌ ಹೊಡೆದು ಅಸುನೀಗಿದ ಮಗನ ಮೃತದೇಹದ ಮುಂದೆ ತಂದೆಯ ಆಕ್ರಂದನ

ಉತ್ತರ ಪ್ರದೇಶದ ವೃಂದಾವನದ ಇಸ್ಕಾನ್‌ ದೇವಸ್ಥಾನದಲ್ಲಿ ಭೀಕರ ದುರಂತವೊಂದು ನಡೆದಿದ್ದು, ವಾಟರ್‌ ಸ್ಪ್ರೇ ಕೂಲರ್‌ನಿಂದ ವಿದ್ಯುತ್‌ ಪ್ರವಹಿಸಿ 21 ವರ್ಷದ ಯುವ ಮೃತಪಟ್ಟಿದ್ದಾನೆ. ಮೃತನನ್ನು ಮಧ್ಯ ಪ್ರದೇಶದ ಛತ್ರಾಪುರದಿಂದ ಆಗಮಿಸಿದ ಅಭಿಜ್ಞಾನ್‌ ಗುಪ್ತ ಎಂದು ಗುರುತಿಸಲಾಗಿದೆ. ಆತನ ಮೃತದೇಹದ ಮುಂದೆ ತಂದೆ ಗೋಳಾಡುತ್ತಿರುವ ವಿಡಿಯೊ ಸದ್ಯ ವೈರಲ್‌ ಆಗಿದೆ.

ಇಸ್ಕಾನ್‌ ದೇಗುಲದಲ್ಲಿ ಶಾಕ್‌ ಹೊಡೆದು 21 ವರ್ಷದ ಯುವಕ ಸಾವು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Jun 17, 2026 4:12 PM

ಲಖನೌ, ಜೂ. 17: ʼʼಎದ್ದೇಳು ಪುಟ್ಟ. ನಿನ್ನ ತಂದೆ ಬಂದಿದ್ದಾರೆ ನೋಡುʼʼ-ಉತ್ತರ ಪ್ರದೇಶದ ವೃಂದಾವನದ ಇಸ್ಕಾನ್‌ ದೇವಸ್ಥಾನದಲ್ಲಿ (ISKCON Temple) ಶಾಕ್‌ ಹೊಡೆದು ಮೃತಪಟ್ಟ 21 ವರ್ಷದ ಯುವಕನ ತಂದೆ ಅನಿಲ್‌ ಕುಮಾರ್‌ ಗುಪ್ತ ಗೋಗೆರೆದ ರೀತಿ ಅಲ್ಲಿದ್ದವರ ಕಣ್ಣಂಚು ಒದ್ದೆಯಾಗುವಂತೆ ಮಾಡಿದೆ. ಹೌದು, ಸೋಮವಾರ (ಜೂನ್‌ 15) ನಡೆದ ಭೀಕರ ಅಪಘಾತದಲ್ಲಿ ಇಸ್ಕಾನ್‌ ದೇವಸ್ಥಾನದ ದ್ವಾರದಲ್ಲಿ ಅಳವಡಿಸಿದ್ದ ವಾಟರ್‌ ಸ್ಪ್ರೇ ಕೂಲರ್‌ ಶಾಕ್‌ ಹೊಡೆದು 21 ವರ್ಷದ ಭಕ್ತನೊಬ್ಬ ಅಸುನೀಗಿದ ಬಳಿಕ ಸ್ಥಳದಲ್ಲಿ ಭಾವುಕ ದೃಶ್ಯ ಕಂಡು ಬಂದಿದ್ದು, ಘಟನೆಯ ವಿಡಿಯೊ ವೈರಲ್‌ (Viral Video) ಆಗಿದೆ.

ಮೃತ ಸಂತ್ರಸ್ತನನ್ನು ಮಧ್ಯ ಪ್ರದೇಶದ ಛತ್ರಾಪುರದಿಂದ ಆಗಮಿಸಿದ ಅಭಿಜ್ಞಾನ್‌ ಗುಪ್ತ (ಅವಿಜ್ಞಾನ್‌) ಎಂದು ಗುರುತಿಸಲಾಗಿದೆ. ತನ್ನ ತಂದೆಯೊಂದಿಗೆ ದೇವರ ದರ್ಶನಕ್ಕೆ ಆಗಮಿಸಿದ ಅಭಿಜ್ಞಾನ್‌ ಶಾಕ್‌ ಹೊಡೆದು ಮೃತಪಟ್ಟಿದ್ದಾನೆ. ಕಣ್ಣೆದುರೇ ಮಗ ಅಸುನೀಗಿರುವುದನ್ನು ನೋಡಿ ಆ ಅಮಾಯಕ ತಂದೆ ಕುಸಿದು ಬಿದ್ದು, ಆತನನ್ನು ಏಳಿಸಲು ಯತ್ನಿಸುತ್ತಿರುವ ದೃಶ್ಯ ಎಂತಹವರ ಕರುಳು ಚುರುಕ್‌ ಎನ್ನುವಂತೆ ಮಾಡಿದೆ.

ಘಟನೆಯ ವಿಡಿಯೊ:



ಘಟನೆ ವಿವರ

ಇತ್ತೀಚಿನ ದಿನಗಳಲ್ಲಿ ರಾಜ್ಯದ ಉಷ್ಣಾಂಶದ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದರಿಂದ ಭಕ್ತರನ್ನು ಪಾರು ಮಾಡಲು ಮುನ್ಸಿಪಲ್‌ ಕಾರ್ಪೋರೇಷನ್‌ ದೇವಸ್ಥಾನದಲ್ಲಿ ವಾಟರ್‌ ಸ್ಪ್ರೇ ಕೂಲರ್‌ ಅಳವಡಿಸಿದೆ. ಈ ಪೈಕಿ ದೇವಸ್ಥಾನದ ದ್ವಾರದ ಬಳಿ ಅಳವಡಿಸಿದ್ದ ಘಟಕದಲ್ಲಿ ಸಮಸ್ಯೆ ಕಂಡು ಬಂದಿದ್ದು, ಶಾಕ್‌ ಹೊಡೆದಿದೆ. ಬೆಳಗ್ಗೆ 10:30ರ ಸುಮಾರಿಗೆ ಈ ಘಟನೆ ನಡೆದಿದೆ.

ಯುವಕರಿಗೆ ಕಿರುಕುಳ ನೀಡಿ ತಾವೇ ಬಟ್ಟೆ ಹರಿದುಕೊಂಡ ಕಿʼಲೇಡಿʼಗಳು: ಮಹಿಳೆಯರ ಕಳ್ಳಾಟ ಕ್ಯಾಮರಾದಲ್ಲಿ ಸೆರೆ

ʼʼಶೂ ಸ್ಟ್ಯಾಂಡ್‌ ಬಳಿ ಇರಿಸಿದ್ದ ವಾಟರ್‌ ಸ್ಪ್ರೇ ಕೂಲರ್‌ ಅನ್ನು ಯುವಕ ಆಕಸ್ಮಿಕವಾಗಿ ಸ್ಪರ್ಶಿಸುತ್ತಿದ್ದಂತೆ ಶಾಕ್‌ ಹೊಡೆದಿದೆ. ಅಪ್ಪ-ಮಗ ಚಪ್ಪಲಿ ಕಳಚಿ ದೇವಸ್ಥಾನಕ್ಕೆ ಪ್ರವೇಶಿಸಲು ಮುಂದಾಗುತ್ತಿದ್ದಾಗ ಅವಘಡ ಸಂಭವಿಸಿದೆʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಾಕ್‌ ಹೊಡೆಯುತ್ತಿದ್ದಂತೆ ಅಭಿಜ್ಞಾನ್‌ ಕಿರುಚಾಡಿದ್ದಾನೆ. ಕೂಡಲೇ ಧಾವಿಸಿದ ಅನಿಲ್‌ ಕುಮಾರ್‌ ಮಗನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗಲಿಲ್ಲ. ಬಳಿಕ ಸ್ಥಳೀಯರು ಅಭಿಜ್ಞಾನ್‌ನನ್ನು ಯಂತ್ರದಿಂದ ಬೇರ್ಪಡಿಸಿದ್ದಾರೆ. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲಿ ಅಭಿಜ್ಞಾನ್‌ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ..

ಕಣ್ಣಂಚು ಒದ್ದೆ ಮಾಡಿ ದೃಶ್ಯ

ಆಸ್ಪತ್ರೆಯಲ್ಲಿ ಎಲ್ಲರ ಕಣ್ಣಂಚು ಒದ್ದೆ ಮಾಡುವ ಭಾವುಕ ದೃಶ್ಯ ಕಂಡುಬಂತು. ಏಕೈಕ ಮಗ ಮೃತಪಟ್ಟಿದ್ದಾನೆ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಅನಿಲ್‌ ಕುಮಾರ್‌ ಗುಪ್ತ ಅತ್ತಿದ್ದಾರೆ. ʼʼಏದ್ದೇಳು. ನಿನ್ನ ತಂದೆ ಕರೆಯುತ್ತಿದ್ದಾರೆʼʼ ಎಂದು ಮೃತದೇಹದ ಮುಂದೆ ನಿಂತು ಗೋಳಾಡಿದ್ದಾರೆ. ʼʼಅಭಿಜ್ಞಾನ್‌ನನ್ನು ಬದುಕಿಸಲು ಕೈಯಿಂದಾಗುವ ಎಲ್ಲ ರೀತಿಯಲ್ಲೂ ಪ್ರಯತ್ನಿಸಿದ್ದೇವೆ. ಆದರೆ ಸಾಧ್ಯವಾಗಲಿಲ್ಲʼʼ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

ಪ್ರತಿಭಟನೆ ವೇಳೆ ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದಿಪ್ಕೆಗೆ ಧರ್ಮದೇಟು

ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ. ಈ ಘಟನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮುನ್ಸಿಪಾಲಿಟಿ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗಿದೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.