ರಾಯ್‌ಪುರ, ಏ. 14: ಛತ್ತೀಸ್‌ಗಢದಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಕಾರ್ಖಾನೆಯೊಂದರ ಬಾಯ್ಲರ್ ಸ್ಫೋಟಗೊಂಡು (Boiler Explodes) ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ 40 ಮಂದಿ ಗಾಯಗೊಂಡಿದ್ದಾರೆ. ಶಕ್ತಿಯ ಜಿಲ್ಲೆಯಲ್ಲಿ ಮಂಗಳವಾರ (ಏಪ್ರಿಲ್ 14) ಈ ದುರಂತ ಸಂಭವಿಸಿದೆ (Chhattisgarh News). ಘಟನೆ ಸ್ಥಳದಲ್ಲಿ ಇನ್ನಷ್ಟು ಕಾರ್ಮಿಕರು ಸಿಕ್ಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸಿಂಘಿತರೈ ಗ್ರಾಮದಲ್ಲಿರುವ ವೇದಾಂತ ಲಿಮಿಟೆಡ್ ವಿದ್ಯುತ್ ಸ್ಥಾವರದಲ್ಲಿ ಮಧ್ಯಾಹ್ನ ಬಾಯ್ಲರ್ ಟ್ಯೂಬ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಛತ್ತೀಸ್‌ಗಢದಲ್ಲಿ ನಡೆದ ಬಾಯ್ಲರ್ ಸ್ಫೋಟದ ದೃಶ್ಯ:
ಸದ್ಯ ಸ್ಫೋಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದಟ್ಟ ಹೊಗೆ ಆ ಪ್ರದೇಶದಲ್ಲಿ ಆವರಿಸಿರುವುದು ಕಂಡು ಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಬೈಲಹೊಂಗಲ ಸಕ್ಕರೆ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 7ಕ್ಕೆ ಏರಿಕೆ
ಕಾರಣವೇನು?
ಸ್ಫೋಟಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಪ್ರಾಥಮಿಕ ವರದಿಯ ಪ್ರಕಾರ ಬಾಯ್ಲರ್‌ನ ಟ್ಯೂಬ್‌ನೊಳಗೆ ಸಮಸ್ಯೆ ಕಾಣಿಸಿಕೊಂಡು, ಸರಿಯಾಗಿ ಕಾರ್ಯ ನಿರ್ವಹಿಸದೆ ಸ್ಫೋಟಗೊಂಡಿದೆ. ಇದರ ಬೆನ್ನಲ್ಲೇ ಬೆಂಕಿ ಇಡಿ ಕಾರ್ಖಾನೆಗೆ ವ್ಯಾಪಿಸಿದೆ. ಸ್ಫೋಟ ನಡೆದ ತಕ್ಷಣ ಸ್ಥಳದಲ್ಲಿ ಕಾಲ್ಕುಳಿತ ರೀತಿಯ ಸನ್ನಿವೇಶ ನಿರ್ಮಾಣವಾಗಿತ್ತು. ಕಾರ್ಖಾನೆಯಿಂದ ಕಾರ್ಮಿಕರು ಒಮ್ಮೆಲೆ ಹೊರಗೆ ಧಾವಿಸಿ ಬಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗುಜರಾತ್ ದುರಂತದ ಬೆನ್ನಲ್ಲೇ ಛತ್ತೀಸ್‌ಗಢದಲ್ಲಿ ಸ್ಫೋಟ
ಇತ್ತೀಚೆಗೆ ಗುಜರಾತ್‌ನಲ್ಲಿ ಇದೇ ರೀತಿಯ ದುರಂತ ಸಂಭವಿಸಿ 21 ಮೃತಪಟ್ಟು, 6 ಮಂದಿ ಗಾಯಗೊಂಡಿದ್ದರು. ಗುಜರಾತ್‌ನ ಬನಸ್ಕಂತ ಜಿಲ್ಲೆಯ ಕಾರ್ಖಾನೆಯ ಗೋದಾಮಿನಲ್ಲಿ ಬಾಯ್ಲರ್ ಸ್ಫೋಟಗೊಂಡಿತ್ತು. ತನಿಳೆ ವೇಳೆ ದೀಸಾ ಪಟ್ಟಣದ ಧುನ್ವಾ ರಸ್ತೆಯಲ್ಲಿರುವ ಈ ಕಾರ್ಖಾನೆ ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ತಿಳಿದು ಬಂದಿದೆ. ತಪಾಸಣೆಯ ವೇಳೆ ಅಧಿಕಾರಿಗಳು ಕಾರ್ಖಾನೆ ಪರವಾನಗಿಯನ್ನು ನವೀಕರಿಸಲು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ನಂತರವೂ ಇದು ಕಾರ್ಯ ನಿರ್ವಹಿಸುತ್ತಿತ್ತು ಎನ್ನಲಾಗಿದೆ.
ಗುಜರಾತ್ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿ, ʼʼಈ ಕಾರ್ಖಾನೆಗೆ ಯಾವುದೇ ಪರವಾನಗಿ ನೀಡಿರಲಿಲ್ಲʼʼ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ, ʼʼಗುಜರಾತ್‌ನ ಬನಸ್ಕಾಂತದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜೀವಹಾನಿಯಾಗಿರುವುದಕ್ಕೆ ದುಃಖವಾಗಿದೆ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ" ಎಂದು ತಿಳಿಸಿದ್ದರು.
ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಬ್ಲಾಸ್ಟ್: 17 ಮಂದಿ ಸಾವು, 18 ಜನರಿಗೆ ಗಾಯ
ಮೃತರ ಹತ್ತಿರದ ಸಂಬಂಧಿಕರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) 2 ಲಕ್ಷ ರುಪಾಯಿ ಮತ್ತು ಗಾಯಾಳುಗಳಿಗೆ 50,000 ರುಪಾಯಿ ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದರು. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೃತರ ಕುಟುಂಬಗಳಿಗೆ 4 ಲಕ್ಷ ರುಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ 50,000 ರುಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.