Boiler Blast: ಬೈಲಹೊಂಗಲ ಸಕ್ಕರೆ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 7ಕ್ಕೆ ಏರಿಕೆ
ಕಾರ್ಖಾನೆ ವಾಲ್ ದುರಸ್ತಿ ಮಾಡುವಾಗ ವಾಲ್ ಸಿಡಿದು ಕುದಿಯುವ ಕಬ್ಬಿನ ಹಾಲು ಮೈಮೇಲೆ ಬಿದ್ದು 8 ಜನ ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇದುವರೆಗೆ 7 ಮಂದಿ ಮೃತಪಟ್ಟಿದ್ದಾರೆ. ಒಬ್ಬನನ್ನು ಹೊರತುಪಡಿಸಿ ಯಾರಿಗೂ ಪರಿಹಾರ ದೊರೆತಿಲ್ಲ, ಪೊಲೀಸರೂ ಕಠಿಣ ಕ್ರಮ ಕೈಗೊಂಡಿಲ್ಲ.
ಸಾಂದರ್ಭಿಕ ಚಿತ್ರ -
ಬೆಳಗಾವಿ, ಜ.09: ಸಕ್ಕರೆ ಕಾರ್ಖಾನೆಯಲ್ಲಿ (Sugar Factory) ಬಾಯ್ಲರ್ ಸ್ಫೋಟಗೊಂಡು (Boiler Blast) ಗಂಭೀರ ಗಾಯಗೊಂಡಿದ್ದ ಕಾರ್ಮಿಕರ ಪೈಕಿ ಮತ್ತೆ ಮೂವರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಬೆಳಗಾವಿ (Belagavi news) ಜಿಲ್ಲೆಯ ಬೈಲಹೊಂಗಲ (Bailhongal) ತಾಲೂಕಿನ ಮರಕುಂಬಿಯಲ್ಲಿರುವ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆಗೆ ಬಾಯ್ಲರ್ ಸ್ಫೋಟಗೊಂಡಿತ್ತು.
ಕಾರ್ಖಾನೆ ವಾಲ್ ದುರಸ್ತಿ ಮಾಡುವಾಗ ವಾಲ್ ಸಿಡಿದು ಕುದಿಯುವ ಕಬ್ಬಿನ ಹಾಲು ಮೈಮೇಲೆ ಬಿದ್ದು 8 ಜನ ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತೇಶ ಸಾರವಾಡಿ, ಬಾಗಲಕೋಟ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್, ಅಥಣಿ ಪಟ್ಟಣದ ನಿವಾಸಿ ಮಂಜುನಾಥ್ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಅಕ್ಷಯ್ ಚೋಪಡೆ (45), ದೀಪಕ್ ಮನ್ನೋಳ್ಳಿ (31), ಸುದರ್ಶನ ಬನೋಶಿ (25), ಭರತೇಶ್ ಸಾರವಾಡೆ (27), ಗುರು ತಮ್ಮನ್ನವರ್ (26), ಮಡಿವಾಳಪ್ಪ ಕಾಜಗಾರ್ (28), ಮಂಜುನಾಥ್ ತೇರದಾಳ (26) ಎಂದು ಗುರುತಿಸಲಾಗಿದೆ. ವಿಕ್ರಂ ಇನಾಮದಾರ್, ಪ್ರಭಾಕರ್ ಕೋರೆ, ವಿಜಯ್ ಮೆಟಗುಡ್ಡ ಮೂವರ ಸಹಭಾಗಿತ್ವದಲ್ಲಿ ಈ ಕಾರ್ಖಾನೆ ನಡೆಯುತ್ತಿತ್ತು. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Road Accident: ಮರಕ್ಕೆ ಬೊಲೆರೊ ಡಿಕ್ಕಿಯಾಗಿ ನಾಲ್ವರು ದುರ್ಮರಣ
ಕ್ರಮವೂ ಇಲ್ಲ, ಪರಿಹಾರವೂ ಇಲ್ಲ!
ಕಾರ್ಖಾನೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳಿಲ್ಲದಿರುವುದೇ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಸುರಕ್ಷತೆಗೆ ಆದ್ಯತೆ ನೀಡಬೇಕಿದ್ದ ಕಾರ್ಖಾನೆ ಆಡಳಿತ ಮಂಡಳಿ ತೋರಿದ ಬೇಜವಾಬ್ದಾರಿಯಿಂದ ಏಳು ಅಮಾಯಕ ಜೀವಗಳು ಬಲಿಯಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಪೊಲೀಸರು ಕೇವಲ ಕಾರ್ಖಾನೆಯ ಜನರಲ್ ಮ್ಯಾನೇಜರ್ ಸೇರಿದಂತೆ ಮೂವರು ಸಿಬ್ಬಂದಿಗಳ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿ, ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಕೈತೊಳೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಘಟನೆ ನಡೆದು ಎರಡು ದಿನಗಳಾದರೂ ಯಾರನ್ನೂ ಬಂಧಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಕ್ರಮ್ ಇನಾಮದಾರ, ವಿಜಯ ಮೆಟಗುಡ್ಡ ಮತ್ತು ಪ್ರಭಾಕರ್ ಕೋರೆ ಪಾಲುದಾರಿಕೆಯಲ್ಲಿ ನಡೆಯುತ್ತಿರುವ ಈ ಕಾರ್ಖಾನೆಯ ಮೇಲೆ ಪ್ರಭಾವಿಗಳ ಒತ್ತಡದಿಂದ ತನಿಖೆ ದಿಕ್ಕು ತಪ್ಪಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
Road Accident: ಭೀಕರ ಅಪಘಾತ, ಕೊಪ್ಪಳ ಮೂಲದ ನಾಲ್ವರು ಅಯ್ಯಪ್ಪ ಭಕ್ತರ ದುರ್ಮರಣ
ಮೃತರ ಕುಟುಂಬಸ್ಥರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಚನ್ನಮ್ಮ ವೃತ್ತದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರೂ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಏಳು ಜನರಲ್ಲಿ ಕೇವಲ ಒಬ್ಬ ಮೃತ ಕಾರ್ಮಿಕನ ಕುಟುಂಬಕ್ಕೆ ಮಾತ್ರ 18 ಲಕ್ಷ ರೂ. ಪರಿಹಾರ ಭರವಸೆ ನೀಡಲಾಗಿದೆ. ಉಳಿದ ಕುಟುಂಬಗಳಿಗೆ ಪರಿಹಾರದ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿರದ ಕಾರಣ ಬಡವರ ಜೀವಕ್ಕೆ ಬೆಲೆ ಇಲ್ಲವೇ ಎಂದು ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.