ಗುವಾಹಾಟಿ: ಅಸ್ಸಾಂನ ನೀಲಾಚಲ ಬೆಟ್ಟದಲ್ಲಿರುವ ಪವಿತ್ರ ಕಾಮಾಖ್ಯ ದೇವಾಲಯವು ಪ್ರಸಿದ್ಧ ಶಕ್ತಿಪೀಠವಾಗಿದ್ದು, ವಿಶ್ವದಾದ್ಯಂತ ಅಪಾರ ಭಕ್ತರನ್ನು ಆಕರ್ಷಿಸುವ ದಿವ್ಯ ಕ್ಷೇತ್ರವಾಗಿದೆ. ಇಲ್ಲಿನ ಭಕ್ತಿ ಮತ್ತು ಆಧ್ಯಾತ್ಮಿಕ ಪವಾಡಗಳ ಪ್ರೇರಣೆಯಿಂದ ಇದೀಗ ಅಪರೂಪದ ಸಂಗೀತ ಸಮರ್ಪಣೆ ನೆರವೇರಿದೆ.
ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಅವರು ಕಾಮಾಖ್ಯ ದೇವಿಯ ಅನುಗ್ರಹ ಹಾಗೂ ಪ್ರೇರಣೆಯಿಂದ 'ಕಾಮಾಖ್ಯಪ್ರಿಯ' ಎಂಬ ನೂತನ ಶಾಸ್ತ್ರೀಯ ರಾಗವನ್ನು ಸೃಷ್ಟಿಸಿ ಆ ರಾಗದಲ್ಲಿ ಸಂಸ್ಕೃತ ಸ್ತೋತ್ರವನ್ನು ರಚಿಸುವುದರ ಜೊತೆಗೆ ಒಂಬತ್ತು ಭಾಷೆಗಳ ಭಕ್ತಿ ಆಲ್ಬಂಗಳನ್ನು ದೇವಿಗೆ ಸಮರ್ಪಿಸಿದ್ದಾರೆ.
ಇದನ್ನೂ ಓದಿ: Roopa Gururaj Column: ದೇವಕಿ ಅಮ್ಮ: ಕೇರಳದ ವನಮಾತೆಯ ಸ್ಪೂರ್ತಿದಾಯಕ ಕಥೆ
ಸಂಗೀತ ಕೃತಿಯ ಹಿನ್ನೆಲೆ
ಈ ಗೀತೆಗಳ ಸಂಯೋಜನೆ ಕುರಿತು ಮಾತನಾಡಿದ ಮಹೇಶ್ ಮಹದೇವ್, "ನಾವು ಅಂದುಕೊಂಡಿ ದ್ದಕ್ಕಿಂತ ಕಲ್ಪನೆಗೂ ಮೀರಿದ್ದು ದೈವಿಕ ಕೃಪೆಯಿಂದ ಸಾಕಾರಗೊಳ್ಳುತ್ತದೆ. ಕೆಲವು ದಿನಗಳ ಮೊದಲು ತಂದೆಯವರು ಸ್ಟುಡಿಯೋದಲ್ಲಿ ದೇವಿಯ ಬಗ್ಗೆ ಪ್ರಸ್ತಾಪಿಸಿದ ಮಾತುಗಳು, ಆತ್ಮೀಯ ಸ್ನೇಹಿತ ಡಾ. ಉಮೇಶ್ ಕುಮಾರ್ ಅವರು ಕಾಮಾಖ್ಯ ಮಂದಿರಕ್ಕೆ ತೆರಳುತ್ತಿದ್ದೇನೆ ಎಂದಿದ್ದು, ಅದೇ ಸಮಯದಲ್ಲಿ ನಾನು ದೇವಿಯ ಮೇಲೆ ಮಾಡುತ್ತಿದ್ದ ಭಕ್ತಿಗೀತೆಗಳ ಸಂಯೋಜನೆ—ಎಲ್ಲವೂ ಒಂದೇ ಸಮಯಕ್ಕೆ ಕೂಡಿಬಂದು ಈ ಆಲ್ಬಂ ಬಿಡುಗಡೆಗೆ ನಾಂದಿಯಾಯಿತು" ಎಂದರು. "ಕಾಮಾಖ್ಯ ದೇವಿ ನೆಲೆಸಿರುವುದು ಅಸ್ಸಾಂನಲ್ಲಿ, ಹೀಗಾಗಿ ಸಂಸ್ಕೃತ ಸ್ತೋತ್ರದೊಂದಿಗೆ ಅಸ್ಸಾಮಿ ಭಕ್ತಿಗೀತೆ ಯೊಂದನ್ನು ಮಾಡೋಣ" ಎಂದು ಗಾಯಕಿ ಪ್ರಿಯದರ್ಶಿನಿ ಇಚ್ಛೆ ವ್ಯಕ್ತಪಡಿಸಿದಾಗ ಇಡೀ ಯೋಜನೆಗೆ ವೇಗ ಸಿಕ್ಕಿತು.
ಇವರ ಸಂಗೀತ ವಿದ್ಯಾರ್ಥಿ ಹೇಮಂತ್ ಅವರ ಸಹಕಾರದಿಂದ ಗುವಾಹಾಟಿಯ ರಾಜ್ ನಸೀಮ್ ಅವರ ಸಂಪರ್ಕವಾಯಿತು. ಮಹೇಶ್ ಅವರ ಮೂಲ ಸಾಹಿತ್ಯವನ್ನು ಇಟ್ಟುಕೊಂಡು ರಾಜ್ ನಸೀಮ್ ತಕ್ಷಣ ಅಸ್ಸಾಮಿ ಸಾಹಿತ್ಯ ಬರೆದರೆ, ರಿತು ಚೌಧರಿ ಬೆಂಗಾಲಿ ಹಾಗೂ ಸುಮತಿ ರಾಮ್ ತಮಿಳು ಸಾಹಿತ್ಯ ರಚಿಸಿದರು. ಬೆನ್ನಲ್ಲೇ ನೇಪಾಳಿ ಮತ್ತು ಒಡಿಯಾ ಆವೃತ್ತಿಗಳು ಸಿದ್ಧಗೊಂಡವು. ಮಹೇಶ್ ಮಹದೇವ್ ಅವರ ಸಂಸ್ಕೃತ, ಹಿಂದಿ, ಕನ್ನಡ ಮತ್ತು ತೆಲುಗು ಸಾಹಿತ್ಯವೂ ಸೇರಿ ಒಟ್ಟು ಒಂಬತ್ತು ಭಾಷೆಗಳ ಸಾಹಿತ್ಯವು ನೋಡನೋಡುತ್ತಲೇ ಕೇವಲ ಒಂದೇ ದಿನದಲ್ಲಿ ರಚನೆ ಯಾಯಿತು. ಇದಕ್ಕೆ ಪೂರಕವಾಗಿ ವಾದ್ಯ ಕಲಾವಿದರಾದ ವೇಣುಗೋಪಾಲ್ ವೆಂಕಿ ಮತ್ತು ಸೆಲ್ವಕುಮಾರ್ ಅಂದೇ ಮಧ್ಯರಾತ್ರಿ ವಾದ್ಯ ಸಹಕಾರ ನೀಡಿ ರೆಕಾರ್ಡಿಂಗ್ ಪೂರ್ಣಗೊಳಿಸ ಲಾಯಿತು. ಮರುದಿನ ಪ್ರಿಯದರ್ಶಿನಿ, ರಾಜ್ ನಸೀಮ್ ಮತ್ತು ಮಹೇಶ್ ಮಹದೇವ್ ಗೀತೆಗಳನ್ನು ಹಾಡಿ ಆಲ್ಬಂ ಸಿದ್ಧವಾಯಿತು
'ಕಾಮಾಖ್ಯಪ್ರಿಯ' ರಾಗದ ವಿವರಣೆ ಹಾಗೂ ಅನಾವರಣ
ಕಾಮಾಖ್ಯಾ ಸ್ತೋತ್ರ ಸಂಯೋಜಿಸುವಾಗ ಹೊಸ ಸ್ವರಸಂಯೋಜನೆ ಸ್ವಯಂಪ್ರೇರಿತವಾಗಿ ಹರಿಯತೊಡಗಿತು. ಅದು ಚಾಲ್ತಿಯಲ್ಲಿರುವ ಯಾವುದೇ ರಾಗಕ್ಕಿಂತ ಭಿನ್ನವಾಗಿತ್ತು. ಪದಗಳಲ್ಲಿ ವರ್ಣಿಸಲು ಸಾಧ್ಯವಾಗದಂತಹ ದೈವಿಕ ಅನುಭವವದು. ಈ ರೀತಿಯ ಅನುಭವ ಹಿಂದೆ ಹಲವು ಬಾರಿ ದೇವರ ಗೀತೆಗಳ ಹಾಗೂ ರಾಗ ರಚನೆಯ ಸಂದರ್ಭದಲ್ಲೂ ಆಗಿದೆ. ಅದೇ ತರಹದ ಅನುಭವ ಈಗಲೂ ಆಗಿದ್ದು ಇದು ಸಹ ದೇವಿಯ ಸೂಚನೆಯಂತೆ ಮೂಡಿದ ರಾಗವೆಂದು ಇದಕ್ಕೆ 'ಕಾಮಾಖ್ಯಪ್ರಿಯ' ಎಂದು ಹೆಸರಿಟ್ಟೆ ಎಂದು ಮಹೇಶ್ ಮಹದೇವ್ ತಿಳಿಸಿದರು.
ಈ ನೂತನ ರಾಗವು ಕರ್ನಾಟಕ ಶಾಸ್ತ್ರೀಯ ಸಂಗೀತದ 20ನೇ ಮೇಳಕರ್ತ ರಾಗವಾದ 'ನಟಭೈರವಿ' ಯ ಜನ್ಯ ರಾಗವಾಗಿದೆ. ಆರೋಹಣದಲ್ಲಿ ಸ ರಿ₂ ಮ₁ ಪ ಧ₁ ನಿ₂ ಸ ಮತ್ತು ಅವರೋಹಣದಲ್ಲಿ ಸ ನಿ₂ ಪ ಮ₁ ಗ₂ ರಿ₂ ಸ ಸ್ವರಗಳನ್ನು ಹೊಂದಿರುವ ಇದು 'ಶಾಡವ-ಶಾಡವ' ವಿಭಾಗಕ್ಕೆ ಸೇರಿದ್ದು, ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಗೆ ಹೊಸ ಸೇರ್ಪಡೆಯಾಗಿದೆ ವಿವರಣೆ ನೀಡಿದರು.
ಕಾಮಾಖ್ಯಪ್ರಿಯ' ರಾಗದ ಮೊದಲ ಕೃತಿಯನ್ನು ಬಹುಭಾಷಾ ಹಿನ್ನೆಲೆಗಾಯಕಿ ಡಾ ಪ್ರಿಯದರ್ಶಿನಿ ಅವರು ಹಾಡಿದ್ದು, "ಈ ಅಪರೂಪದ ಸಂಗೀತ ಆಲ್ಬಂಗಳಲ್ಲಿ ಭಾಗಿಯಾಗಿದ್ದು ನನಗೆ ಸಿಕ್ಕ ಅಪಾರ ಸಂತಸ ಮತ್ತು ಗೌರವದ ವಿಷಯ. ಒಂಬತ್ತು ಭಾಷೆಗಳಲ್ಲಿ ಹಾಡುವ ಹಾಗೂ ಹೊಸದಾಗಿ ಸೃಷ್ಟಿ ಯಾದ 'ಕಾಮಾಖ್ಯಪ್ರಿಯ' ರಾಗದ ಪ್ರಥಮ ಕೃತಿಯನ್ನು ಪ್ರಸ್ತುತಪಡಿಸುವ ಅಪರೂಪದ ಅವಕಾಶ ನನಗೂ ಸಿಕ್ಕಿತು. ಕಾಮಾಖ್ಯಾ ದೇವಿ ಅತ್ಯಂತ ಶಕ್ತಿಶಾಲಿ, ಈ ಗೀತೆಗಳನ್ನು ಹಾಡುವಾಗ ನನಗೆ ಒಂದು ವಿಶಿಷ್ಟ ಆಧ್ಯಾತ್ಮಿಕ ಕಂಪನದ ಅನುಭವವಾಯಿತು. ಅತ್ಯಂತ ಕಡಿಮೆ ಸಮಯದಲ್ಲಿ ಈ ಹೊಸ ರಾಗದ ಸಂಯೋಜನೆಯನ್ನು ಕಲಿತು ರೆಕಾರ್ಡ್ ಮಾಡಲು ಸಾಧ್ಯವಾಗಿದ್ದು ದೇವಿಯ ಆಶೀರ್ವಾದವೇ ಸರಿ. ಇದೊಂದು ಅತ್ಯಂತ ಹೃದಯಸ್ಪರ್ಶಿ ಹಾಗೂ ಮರೆಯಲಾಗದ ಸಂಗೀತ ಅನುಭವ" ಎಂದು ಅವರು ಹೇಳಿದರು.
ಕಾಮಾಖ್ಯ ಮಂದಿರದಲ್ಲಿ ಆಲ್ಬಂ ಮತ್ತು ರಾಗ ಅನಾವರಣ
ಕಾಮಾಖ್ಯಾ ದೇವಸ್ಥಾನದ ಸನ್ನಿಧಿಯಲ್ಲಿ 'ಕ್ರಿಯೇಟಿವ್ ಡಿವೈಸಸ್' ಛೇರ್ಮನ್, ಕಲಾ ಪೋಷಕ ಡಾ. ಬಿ. ಎಂ. ಉಮೇಶ್ ಕುಮಾರ್ ಈ ಆಲ್ಬಂಗಳನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ್ ಕುಮಾರ್, "ನನ್ನ ಹುಟ್ಟುಹಬ್ಬದಂದೇ ದೇವಿಯ ಸನ್ನಿಧಿಯಲ್ಲಿ ಈ ಸುಂದರ ಆಲ್ಬಂಗಳ ಆಡಿಯೋ ಬಿಡುಗಡೆ ಮಾಡಿದ್ದು ನಿಜಕ್ಕೂ ದೈವಿಕ ಆಶೀರ್ವಾದ" ಮಹೇಶ್ ಅವರ ಸಂಯೋಜನೆಗಳು ಅತ್ಯಂತ ಮಧುರವಾಗಿದ್ದು, ನೂತನ 'ಕಾಮಾಖ್ಯಾಪ್ರಿಯಾ' ರಾಗದ ಸೃಷ್ಟಿ ನಿಜಕ್ಕೂ ಅದ್ಭುತವಾಗಿದೆ. ಪ್ರಿಯದರ್ಶಿನಿ ಅವರ ಭಾವಪೂರ್ಣ ಧ್ವನಿಯು ಪ್ರತಿಯೊಂದು ಸಂಯೋಜನೆಗೂ ಆಳವಾದ ಭಕ್ತಿ ಮತ್ತು ಭಾವನೆಯನ್ನು ತುಂಬಿದೆ."ಎಂದರು.
ಯಾವುದೇ ಪೂರ್ವ ನಿಯೋಜನೆ ಇಲ್ಲದಿದ್ದರೂ, ಪ್ರಯಾಣಕ್ಕೆ ಕೆಲವೇ ಗಂಟೆಗಳಿದ್ದಾಗ ಮಹೇಶ್ ಮಹಾದೇವ್ ಅವರು ಅನಿರೀಕ್ಷಿತವಾಗಿ ಡಾ. ಉಮೇಶ್ ಕುಮಾರ್ ಅವರೊಂದಿಗೆ ಅಸ್ಸಾಂಗೆ ಪ್ರಯಾಣಿಸಿ. ದೇವಿಯ ದಿವ್ಯ ದರ್ಶನ ಪಡೆದು ನೂತನ ರಾಗದ ಸ್ವರಗಳ ಮುದ್ರಿತ ಫಲಕವನ್ನು ಕಾಮಾಖ್ಯ ದೇವಿಯ ಮೂಲ ಉದ್ಭವ ಶಿಲೆಗೆ ಸ್ಪರ್ಶಿಸುವ ಮೂಲಕ ರಾಗವನ್ನು ದೇವಿಗೆ ಸಮರ್ಪಣೆ ಮಾಡಿ ನಂತರ, ಆಲ್ಬಂನ ಆಡಿಯೋ ಲೋಕಾರ್ಪಣೆಯಲ್ಲಿ ಭಾಗಿಯಾದದ್ದು ನಿಜಕ್ಕೂ ಕಾಮಾಖ್ಯ ದೇವಿಯ ಮತ್ತೊಂದು ಪವಾಡವೇ ಸರಿ.
ಈ ಭಕ್ತಿ ಸಂಗ್ರಹದಲ್ಲಿ ಮೂರು ಪ್ರಮುಖ ಆಲ್ಬಂಗಳಿವೆ:ಜೈ ಜೈ ಮಾ ಕಾಮಾಖ್ಯಾ (9 ಭಾಷೆಗಳಲ್ಲಿ) ಕಾಮಾಖ್ಯ ಬೀಜ ಮಂತ್ರ ಕಾಮಾಖ್ಯಾ ಸ್ತೋತ್ರಂ ಮತ್ತು ಇತರ ಕೃತಿಗಳು ಇವೆ. ಶಿವಶಕ್ತಿ ಡಿಜಿಟಲ್ ಮೀಡಿಯಾ ಪ್ರೊಡಕ್ಷನ್ಸ್ ಈ ವೀಡಿಯೋ ನಿರ್ಮಿಸಿದ್ದು, ಸುನಿಲ್ ಮಹಾದೇವ್ ಮತ್ತು ತಂಡ ಛಾಯಾಗ್ರಹಣ ಹಾಗೂ ಸಂಕಲನ ಮಾಡಿದ್ದಾರೆ. ಈ ಆಲ್ಬಂಗಳ ವಿಡಿಯೋ ಆವೃತ್ತಿ ಶೀಘ್ರದಲ್ಲೇ 'PM Audios and Entertainments' ಯೂಟ್ಯೂಬ್ ಚಾನೆಲ್ ಹಾಗೂ ಪ್ರಮುಖ OTT ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಾಗಲಿದೆ (www.pmaudios.com).