ಪಟನಾ, ಏ.21: ನೀವು ಬಾಲಿವುಡ್ ಸಿನಿಮಾ 'ಮುನ್ನಾ ಭಾಯಿ ಎಂಬಿಬಿಎಸ್' (Munna Bhai MBBS) ನೋಡಿದ್ದೀರಾ? ಮುಂಬೈ ಭೂಗತ ಜಗತ್ತಿನ ಡಾನ್ ಮುನ್ನಾ ಭಾಯಿ ತನ್ನ ತಂದೆಯನ್ನು ಮೆಚ್ಚಿಸಲು ವೈದ್ಯನಂತೆ ನಟಿಸುವ ಹಾಸ್ಯ ಚಿತ್ರ ಇದಾಗಿದೆ. ಈ ಸಿನಿಮಾ ನೋಡಿ ನಕ್ಕು ನಕ್ಕು ಹಗುರಾದವರು ಅನೇಕರು. ಈಗಲೂ ಈ ಚಿತ್ರ ಅನೇಕರಿಗೆ ಅಚ್ಚುಮೆಚ್ಚು. ಆದರೆ, ನಿಜ ಜೀವನದಲ್ಲಿ ಮುನ್ನಾ ಭಾಯಿ ಅಂತಾ ಡಾಕ್ಟರ್ ಇದ್ದರೆ ರೋಗಿಯ ಕಥೆ ಏನಾಗಬೇಡ ಹೇಳಿ? ಬಿಹಾರದ (Bihar) ಪಶ್ಚಿಮ ಚಂಪಾರಣ್ ಜಿಲ್ಲೆಯ ಬಾಗಹಾ ಪಟ್ಟಣದಲ್ಲಿ, ಇದೇ ರೀತಿಯ ದೃಶ್ಯ ಕಂಡುಬಂದಿದೆ. ಹಾಗಂತ ಇದು ಸಿನಿಮಾ ಚಿತ್ರೀಕರಣವಲ್ಲ. ನಿಜ ಜೀವನದ ಮುನ್ನಾ ಭಾಯಿ!.
ಹೌದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮುನ್ನಾ ಭಾಯಿ ಅಂಥವರೊಬ್ಬರು ಕಂಡು ಬಂದಿದ್ದು ಜನರನ್ನು ದಂಗಾಗಿಸಿದೆ. ಇಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ರೋಗಿಯ ಗಾಯಗಳಿಗೆ ಹೊಲಿಗೆ ಹಾಕಿದ್ದಾರೆ. ವೈದ್ಯರು ಮಾಡಬೇಕಾದ ಕೆಲಸವನ್ನು ಸೆಕ್ಯೂರಿಟಿ ಗಾರ್ಡ್ ಮಾಡಿದ್ದಾರೆ. ಬಾಗಾಹಾ ಉಪ-ವಿಭಾಗೀಯ ಆಸ್ಪತ್ರೆಯ ವೈರಲ್ ಫೋಟೋದಲ್ಲಿ, ಮೈನರ್ ಆಪರೇಷನ್ ಥಿಯೇಟರ್ ಒಳಗೆ ಗಾಯಗೊಂಡ ರೋಗಿಯ ಗಾಯಗಳಿಗೆ ಸೆಕ್ಯೂರಿಟಿ ಗಾರ್ಡ್ ಹೊಲಿಗೆ ಹಾಕುತ್ತಿರುವುದನ್ನು ತೋರಿಸುತ್ತದೆ.
ತರಬೇತಿ ಪಡೆದ ವೈದ್ಯರು ಅಥವಾ ದಾದಿಯರ ಬದಲಿಗೆ, ಭದ್ರತಾ ಸಿಬ್ಬಂದಿ ರೋಗಿಯ ಗಾಯಗಳಿಗೆ ಹೊಲಿಗೆ ಹಾಕುತ್ತಿರುವುದು ಕಂಡುಬಂದಿದೆ. ನಿಯಮಗಳ ಪ್ರಕಾರ, ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ತರಬೇತಿ ಪಡೆದ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗೆ ಮಾತ್ರ ಪ್ರವೇಶ ಸೀಮಿತವಾಗಿದೆ. ಆದರೆ, ಸೆಕ್ಯೂರಿಟಿ ಗಾರ್ಡ್‌ಗೆ ಪ್ರವೇಶ ನೀಡಿದ್ದು ಮಾತ್ರವಲ್ಲದೆ, ರೋಗಿಯನ್ನು ನಿರ್ವಹಿಸುತ್ತಿರುವುದು ಕಳವಳ ಮೂಡಿಸಿದೆ.
20ನೇ ಮಹಡಿಯಿಂದ ಜಿಗಿಯಲು ಯತ್ನಿಸಿದ ಯುವತಿಯನ್ನು ಅತ್ಯಂತ ಸಾಹಸಿಕವಾಗಿ ರಕ್ಷಿಸಿದ ಸಾರ್ವಜನಿಕರು; ರೋಚಕ ವಿಡಿಯೊ ವೈರಲ್
ಮಾಹಿತಿಯ ಪ್ರಕಾರ, ಒಂದು ರಸ್ತೆ ಅಪಘಾತದ ನಂತರ ಗಾಯಗೊಂಡ ರೋಗಿಗಳನ್ನು ಆಸ್ಪತ್ರೆಗೆ ತರಲಾಯಿತು. ಟೆಂಪೋ ಮತ್ತು ಪಿಕಪ್ ವ್ಯಾನ್ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಪಿಕಪ್ ವಾಹನವು ರಸ್ತೆಯಲ್ಲಿ ಉರುಳಿಬಿದ್ದಿದ್ದು, ಅದರ ಚಾಲಕ ಮತ್ತು ಇತರ ಹಲವರು ಗಾಯಗೊಂಡಿದ್ದಾರೆ. ಅಪಘಾತದ ನಂತರ ಟೆಂಪೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಸ್ಥಳೀಯ ನಿವಾಸಿಗಳ ಸಹಾಯದಿಂದ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಾಗಾಹಾ ಉಪ-ವಿಭಾಗೀಯ ಆಸ್ಪತ್ರೆಗೆ ಸಾಗಿಸಲಾಯಿತು. ಗಾಯಗೊಂಡ ಪಿಕಪ್ ಚಾಲಕ ವಾಸಿಂ ಅಖ್ತರ್ ಮತ್ತು ಮತ್ತೊಬ್ಬ ಸುರೇಂದ್ರ ಪಾಸಿಗೆ ಭದ್ರತಾ ಸಿಬ್ಬಂದಿಯೇ ಗಾಯಗಳಿಗೆ ಹೊಲಿಗೆ ಹಾಕಿದ್ದಾರೆ.
ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇದ್ದರು ಎಂದು ಗಾಯಾಳುಗಳು ಹೇಳಿದರು. ಆದರೆ ಸಿಬ್ಬಂದಿ ಕೊರತೆಯಿಂದಾಗಿ, ಸೆಕ್ಯೂರಿಟಿ ಗಾರ್ಡ್ ಹೊಲಿಗೆ ಹಾಕಿದ್ದಾರೆ. ಗಾಯಾಳುಗಳು ಘಟನೆಯನ್ನು ಸಂಪೂರ್ಣ ನಿರ್ಲಕ್ಷ್ಯ ಎಂದು ಕರೆದರು. ತರಬೇತಿ ಪಡೆಯದ ವ್ಯಕ್ತಿಯ ಚಿಕಿತ್ಸೆಯು ಅವರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿತ್ತು ಎಂದು ಹೇಳಿದರು.
ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾದ ನಂತರ, ಆಸ್ಪತ್ರೆ ಆಡಳಿತವು ಸ್ಪಷ್ಟೀಕರಣವನ್ನು ನೀಡಿತು. ಉಪ ಅಧೀಕ್ಷಕ ಡಾ. ಅಶೋಕ್ ಕುಮಾರ್ ತಿವಾರಿ ಮಾತನಾಡಿ, ಆಸ್ಪತ್ರೆಯು ದೀರ್ಘಕಾಲದಿಂದ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದರು.
ಆಪರೇಷನ್ ಥಿಯೇಟರ್ ಸಹಾಯಕರು ಮತ್ತು ಡ್ರೆಸ್ಸರ್‌ಗಳ ಹುದ್ದೆಗಳು ಖಾಲಿ ಉಳಿದಿವೆ. ಇದರಿಂದಾಗಿ ಆಸ್ಪತ್ರೆಯು ಸೀಮಿತ ಮಾನವಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಅವರ ಪ್ರಕಾರ, ಆಸ್ಪತ್ರೆಯು ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ (ಜಿಎನ್‌ಎಂ) ಸಿಬ್ಬಂದಿಯ ಸಹಾಯದಿಂದ ಹೆಚ್ಚಿನ ಪ್ರಕರಣಗಳನ್ನು ನಿರ್ವಹಿಸುತ್ತಿದೆ.
ಘಟನೆ ನಡೆದ ದಿನ, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡ ರೋಗಿಗಳು ಒಂದೇ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದರು ಎಂದು ಅವರು ಹೇಳಿದರು. ಒಬ್ಬ ರೋಗಿಗೆ ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ನೋಡಿ, ವೈದ್ಯರ ಮೇಲ್ವಿಚಾರಣೆಯಲ್ಲಿ ಭದ್ರತಾ ಸಿಬ್ಬಂದಿಯಿಂದ ಸಹಾಯ ಪಡೆಯಲಾಯಿತು ಎಂದು ಅವರು ಹೇಳಿದರು. ಆಸ್ಪತ್ರೆಯ ವಿವರಣೆಯು ಸಿಬ್ಬಂದಿ ಕೊರತೆಯನ್ನು ಸೂಚಿಸಿದರೆ, ಈ ಘಟನೆಯು ಬಿಹಾರದ ಆರೋಗ್ಯ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.