Fire Accident: ಅಪಾರ್ಟ್ಮೆಂಟ್ನಲ್ಲಿ ಭೀಕರ ಅಗ್ನಿ ಅವಘಡ; ಹಲವರು ಟ್ರ್ಯಾಪ್!
ದೆಹಲಿಯ ಅಪಾರ್ಟ್ಮೆಂಟ್ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಧಗಧಗಿಸಿ ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ. ಘಟನೆಯ ಸುದ್ದಿ ತಿಳಿದ ಕೂಡಲೇ ತುರ್ತಾಗಿ ಅಗ್ನಿಶಾಮಕ ದಳ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.


ನವದೆಹಲಿ: ಇಲ್ಲಿನ ದ್ವಾರಕಾಪ್ರದೇಶನಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ಮಂಗಳವಾರ ಬೆಂಕಿ ಹೊತ್ತಿಕೊಂಡಿರುವ ಘಟನೆ(Fire accident) ನಡೆದಿದೆ. ಮೂಲಗಳ ಪ್ರಕಾರ, ಕಟ್ಟಡದ ಆರನೇ ಮಹಡಿಯಲ್ಲಿರುವ ಫ್ಲಾಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಸಂದರ್ಭದಲ್ಲಿ ಕೆಲವರು ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಯವರು ಸ್ಥಳಕ್ಕೆ ದೌಡಾಯಿಸಿದೆ. ಒಟ್ಟು ಎಂಟು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸಪಡುತ್ತಿದೆ. ಜೊತೆಗೆ ಉನ್ನತ ತಂತ್ರಜ್ಞಾನ 'ಸ್ಕೈ ಲಿಫ್ಟ್' ಉಪಕರಣಗಳನ್ನೂ ಬಳಸಲಾಗಿದೆ ಎನ್ನಲಾಗುತ್ತಿದೆ.
ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಕಟ್ಟಡದ ಒಳಗಡೆ ಭಾರೀ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯ ಕಾಣಿಸುತ್ತವೆ. ಹೊಗೆ ವ್ಯಾಪಕವಾಗಿ ಹರಡಿದ್ದು, ಕಟ್ಟಡದ ಒಂದು ಬಾಲ್ಕನಿಯಲ್ಲಿ ಕೆಲವರು ಆತಂಕದಲ್ಲಿ ನಿಂತಿದ್ದು, ಘಟನೆಯಿಂದ ಪಾರಾಗಲು ಯತ್ನಿಸುತ್ತಿರುದನ್ನು ಕಾಣಬಹುದು. ಘಟನೆಗೆ ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲ. ಈವರೆಗೆ ಸಾವು-ನೋವುಗಳ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಈ ಸುದ್ದಿಯನ್ನೂ ಓದಿ: Fire accident: ಬೆಂಗಳೂರಿನಲ್ಲಿ ತಡರಾತ್ರಿ ಅಗ್ನಿ ಅವಘಡ: ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ
ಎರಡು ದಿನಗಳ ಹಿಂದೆಯೂ ದೆಹಲಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ರೋಹಿಣಿ ಸೆಕ್ಟರ್ 17 ರಲ್ಲಿರುವ ಶ್ರೀ ನಿಕೇತನ ಅಪಾರ್ಟ್ಮೆಂಟ್ ಸಮೀಪದ ಭಾನುವಾರ ಮಧ್ಯಾಹ್ನ ಭಾರೀ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಇನ್ನು ಇದರ ಪರಿಣಾಮ ಇಬ್ಬರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಮೃತ ದೇಹಗಳನ್ನು ಸ್ಥಳದಿಂದ ತೆಗೆಯಲಾಗಿದೆ. ಪಶ್ಚಿಮ ವಲಯದ ಉಪವಿಭಾಗದ ಅಗ್ನಿಶಾಮಕ ಅಧಿಕಾರಿ ಎಂ.ಕೆ. ಚಟೋಪಾಧ್ಯಾಯ ಅವರು ಮಾತನಾಡಿ, ಅವಘಡದಲ್ಲಿ ಗಾಯಗೊಂಡ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಘಟನೆಯ ಮುಖ್ಯ ಕಾರಣ ಇನ್ನು ಸ್ಪಷ್ಟವಾಗಿಲ್ಲ. ಘಟನೆಯ ಕುರಿತು ಮಾಹಿತಿ ಬಂದ ತಕ್ಷಣ ತುರ್ತಾಗಿ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳಿಸಲಾಯಿತು. ಇಲ್ಲಿ ರಸ್ತೆ ಇಳಿಜಾರು ಇರುವುದರಿಂದ ನಮ್ಮ ವಾಹನಗಳು ಸ್ಥಳಕ್ಕೆ ತಲುಪಲು ಕಷ್ಟವಾಯಿತು.