ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

“ಅಜಿತ್ ಪವಾರ್‌ಗೆ ಸಿಕ್ಕ ಗೌರವ”: ಬಾರಾಮತಿ ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ಬಗ್ಗೆ ಸುನೇತ್ರಾ ಪವಾರ್ ಹೇಳಿದ್ದೇನು?

Baramati Bypoll: ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನತ್ತ ಸಾಗುತ್ತಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥೆ ಸುನೇತ್ರಾ ಪವಾರ್, ತಮ್ಮ ಗೆಲುವನ್ನು ದಿವಂಗತ ಪತಿ ಅಜಿತ್ ಪವಾರ್ ಮೇಲೆ ನಂಬಿಕೆ ಇಟ್ಟ ಮತದಾರರಿಗೆ ಅರ್ಪಿಸಿದ್ದಾರೆ.

ಸುನೇತ್ರಾ ಪವಾರ್

ಮುಂಬೈ, ಮೇ 4: ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ (Baramati Bypoll) ಐತಿಹಾಸಿಕ ಗೆಲುವಿನತ್ತ ಸಾಗುತ್ತಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥೆ ಸುನೇತ್ರಾ ಪವಾರ್ (Sunetra Pawar) ತಮ್ಮ ಗೆಲುವನ್ನು ದಿವಂಗತ ಪತಿ ಅಜಿತ್ ಪವಾರ್ ಅವರ ಮೇಲೆ ನಂಬಿಕೆ ಇಟ್ಟಿದ್ದ ಮತದಾರರಿಗೆ ಅರ್ಪಿಸಿದ್ದಾರೆ. 24 ಸುತ್ತುಗಳ ಎಣಿಕೆಯಲ್ಲಿ15 ಸುತ್ತುಗಳಲ್ಲಿ 1.32 ಲಕ್ಷಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿರುವ ಸುನೇತ್ರಾ ಪವಾರ್, ತಮ್ಮ ಪತಿ ಅಜಿತ್ ಪವಾರ್ (Ajit Pawar) ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಈ ಹಿಂದೆ ಸ್ಥಾಪಿಸಿದ್ದ ದಾಖಲೆಗಳನ್ನು ಮೀರಿಸುವ ಮೂಲಕ ಹೊಸ ಇತಿಹಾಸ ಬರೆಯುವತ್ತ ಹೆಜ್ಜೆ ಹಾಕಿದ್ದಾರೆ.

“ಇದು ಮೊದಲ ಚುನಾವಣೆ. ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಬಾರಾಮತಿಯ ಜನತೆ ನೀಡುತ್ತಿರುವ ಈ ಮತಗಳು ಅಜಿತ್ ದಾದಾ ಅವರಿಗೆ ಸಲ್ಲಿಸುತ್ತಿರುವ ನಿಜವಾದ ಶ್ರದ್ಧಾಂಜಲಿ. ಎಲ್ಲರಿಗೂ ನಾನು ಹೃದಯಾಂತರಾಳದಿಂದ ಧನ್ಯವಾದ ಅರ್ಪಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.

“ನಾನು ನನ್ನ ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ. ಅಭಿವೃದ್ಧಿ ಕಾರ್ಯಗಳ ಮೂಲಕ ಅಜಿತ್ ಪವಾರ್ ಅವರ ಕನಸುಗಳನ್ನು ನನಸಾಗಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಅಸ್ಸಾಂನಲ್ಲಿ 100 ಸ್ಥಾನಗಳ ಗಡಿ ದಾಟಿದ ಎನ್‌ಡಿಎ ಮೈತ್ರಿಕೂಟ

ಜನವರಿ 28ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಬಳಿ ವಿಮಾನ ಅಪಘಾತದಲ್ಲಿ ಅಂದಿನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ನಿಧನರಾದ ನಂತರ ಏಪ್ರಿಲ್ 23ರಂದು ಉಪಚುನಾವಣೆ ನಡೆಸಲಾಯಿತು. ಪವಾರ್ ಕುಟುಂಬದ ಭದ್ರಕೋಟೆಯಾಗಿರುವ ಈ ಸ್ಥಾನದಿಂದ ಎನ್‌ಸಿಪಿಯು ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಿತು.

ಅಜಿತ್ ಪವಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಪ್ರಮುಖ ರಾಜಕೀಯ ಪಕ್ಷವು ಅವರ ವಿರುದ್ಧ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಸುನೇತ್ರಾ ಪವಾರ್ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು.

“ಬಾರಾಮತಿ ನನ್ನ ಕುಟುಂಬ. ಶರದ್ ಪವಾರ್ ಅವರು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಘೋಷಿಸಿದ್ದರು. ಇದು ನನ್ನ ಕುಟುಂಬದಿಂದ ನನಗೆ ಸಿಕ್ಕಿರುವ ಬೆಂಬಲ. ಸುಪ್ರಿಯಾ ಸುಳೆ ಮತ್ತು ಪವಾರ್ ಕುಟುಂಬವು (ಈ ಕ್ಷೇತ್ರಕ್ಕೆ) ನೀಡಿರುವ ಕೆಲಸ, ನಂಬಿಕೆ ಮತ್ತು ಸೇವೆಯನ್ನು ಪರಿಗಣಿಸಿ, ಅದನ್ನು ಮುಂದುವರಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ” ಎಂದು ಅವರು ಹೇಳಿದರು.

ಇನ್ನು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಗಾಧ ಗೆಲುವಿಗಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಅಭಿನಂದಿಸಿದರು.