ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

AAP vs Raghav Chadda: ಪಕ್ಷದ ನಾಯಕರಿಂದಲೇ ರಾಘವ್‌ ಚಡ್ಡಾ ವಿರುದ್ಧ ವಾಗ್ದಾಳಿ; ಬೆಂಬಲಕ್ಕೆ ನಿಂತ ಬಿಜೆಪಿ

ಆಮ್ ಆದ್ಮಿ ಪಕ್ಷ ಮತ್ತು ರಾಘವ್ ಚಡ್ಡಾ ನಡುವೆ ಉಂಟಾದ ಸಂಘರ್ಷ ಇದೀಗ ಬಹಿರಂಗವಾಗಿದೆ. ಪಕ್ಷದ ನಾಯಕರು ಚಡ್ಡಾ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ಅವರ ಬೆಂಬಲಕ್ಕೆ ನಿಂತಿರುವುದು ರಾಜಕೀಯ ಕುತೂಹಲ ಹೆಚ್ಚಿಸಿದೆ.

ರಾಘವ್ ಚಡ್ಡಾ (ಸಂಗ್ರಹ ಚಿತ್ರ)

ನವದೆಹಲಿ, ಏ. 3: ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಅತ್ಯಂತ ಆಪ್ತ ನಾಯಕರಾಗಿದ್ದ ರಾಜ್ಯಸಭಾ (Rajy Sabha) ಸಂಸದ ರಾಘವ್ ಚಡ್ಡಾ (Raghav Chadha) ಮತ್ತು ಆಮ್ ಆದ್ಮಿ ಪಕ್ಷದ (Aam Aadmi Party) ನಡುವಿನ ಬಿರುಕು ಈಗ ಬಹಿರಂಗ ಸಂಘರ್ಷಕ್ಕೆ ನಾಂದಿ ಹಾಡಿದೆ. ಪಕ್ಷದ ಹಿರಿಯ ನಾಯಕರೆಲ್ಲರೂ ಒಗ್ಗೂಡಿ ಚಡ್ಡಾ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ (BJP) ನಾಯಕರು ಚಡ್ಡಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

ರಾಜ್ಯಸಭೆಯಲ್ಲಿ ಎಎಪಿ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೆಳಗಿಳಿಸಿ ಅಶೋಕ್ ಮಿತ್ತಲ್ ಅವರನ್ನು ನೇಮಿಸಿದ ನಂತರ ಈ ಸಂಘರ್ಷ ತಾರಕಕ್ಕೇರಿದೆ. "ಪಕ್ಷವು ನನ್ನನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ. ರಾಜ್ಯಸಭೆಯಲ್ಲಿ ನನ್ನ ಪಾಲಿನ ಕೋಟಾದಡಿ ಮಾತನಾಡಲು ಅವಕಾಶ ನೀಡದಂತೆ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ" ಎಂದು ಚಡ್ಡಾ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ತಮ್ಮ 'X' ಖಾತೆಯ ಬಯೋದಿಂದ 'AAP' ಹೆಸರನ್ನು ಅವರು ತೆಗೆದುಹಾಕಿದ್ದಾರೆ.

ರಾಘವ್ ಚಡ್ಡಾ ಎಕ್ಸ್‌ ಪೋಸ್ಟ್‌:



ಚಡ್ಡಾ ವಿರುದ್ಧ ಎಎಪಿ ನಾಯಕರ ಆರೋಪಗಳು

ಇತ್ತ ಪಕ್ಷದ ನಾಯಕರು ಸಾಲು ಸಾಲು ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ರಾಘವ್ ಚಡ್ಡಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ:

ಸೌರಭ್ ಭಾರದ್ವಾಜ್: ಹೆದರಿದವನು ಸತ್ತಂತೆ (ಜೋ ಡರ್ ಗಯಾ, ಸಮ್‌ಝೋ ಮರ್ ಗಯಾ) ಎಂದು ಕುಟುಕಿದ್ದು, ಚಡ್ಡಾ ಸಂಸತ್ತಿನಲ್ಲಿ ಗಂಭೀರ ವಿಷಯಗಳ ಬದಲಿಗೆ ಸಮೋಸಾ ಮತ್ತು ಪಿಜ್ಜಾದಂತಹ ವಿಷಯಗಳ ಬಗ್ಗೆ ಚರ್ಚಿಸಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಅತಿಶಿ: ನೀವು ಪ್ರಧಾನಿ ಮೋದಿಗೆ ಯಾಕೆ ಹೆದರುತ್ತಿದ್ದೀರಿ? ಕೇಜ್ರಿವಾಲ್ ಬಂಧನದ ವಿರುದ್ಧ ಹೋರಾಡದೆ ಕಣ್ಣಿನ ಚಿಕಿತ್ಸೆ ನೆಪದಲ್ಲಿ ಲಂಡನ್‌ಗೆ ಓಡಿ ಹೋಗಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಭಗವಂತ್ ಮಾನ್: ಚಡ್ಡಾ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಮತ್ತು ಸಂಸತ್ತಿನಲ್ಲಿ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಆಪ್ ಉಪನಾಯಕ ಹುದ್ದೆಯಿಂದ ತೆಗೆದುಹಾಕಿದ ಬಳಿಕ ರಾಘವ್ ಚಡ್ಡಾ ಬಿಡುಗಡೆ ಮಾಡಿರುವ ಮೊದಲ ವಿಡಿಯೊದಲ್ಲಿ ಏನಿದೆ?

ಬಿಜೆಪಿಯ ಅಚ್ಚರಿಯ ಬೆಂಬಲ

ಈ ಬಿಕ್ಕಟ್ಟಿನ ನಡುವೆ ಬಿಜೆಪಿ ನಾಯಕರು ರಾಘವ್ ಚಡ್ಡಾ ಅವರ ಸಂಸತ್ತಿನ ಭಾಷಣಗಳನ್ನು ಶ್ಲಾಘಿಸಿದ್ದಾರೆ. "ಕೇಜ್ರಿವಾಲ್ ಅವರಿಗೆ ಜನರನ್ನು ಬಳಸಿ ಬಿಸಾಡುವುದು ಹವ್ಯಾಸವಾಗಿದೆ. ಚಡ್ಡಾ ಅವರಂತಹ ಸಮರ್ಥ ನಾಯಕನ ಧ್ವನಿಯನ್ನು ಅಡಗಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ" ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.

ರಾಘವ್ ಚಡ್ಡಾ ಅವರ ಅಧಿಕಾರಾವಧಿ 2028ರವರೆಗೆ ಇದ್ದು, ಅವರು ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆಯೇ ಎಂಬ ಊಹಾಪೋಹಗಳು ದಟ್ಟವಾಗಿವೆ. ಒಟ್ಟಾರೆಯಾಗಿ, ಆಮ್ ಆದ್ಮಿ ಪಕ್ಷದ ಒಳಗಿನ ಈ ಹಗ್ಗಜಗ್ಗಾಟ ಈಗ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.