ಕೋಲ್ಕತ್ತಾ/ಚೆನ್ನೈ, ಏ. 23: ರಾಷ್ಟ್ರ ರಾಜಕೀಯವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭೆಯ ಮತದಾನ ಪೂರ್ಣಗೊಂಡಿದೆ. ಪಶ್ಚಿಮ ಬಂಗಾಳದ 2 ಹಂತದ ಮತದಾನದ ಪೈಕಿ ಮೊದಲ ಹಂತ ಪೂರ್ಣಗೊಂಡಿದ್ದು, ತಮಿಳುನಾಡಿನ ಎಲ್ಲ ಕ್ಷೇತ್ರಗಳಲ್ಲಿ ಮತದಾನ ಒಂದೇ ಹಂತದಲ್ಲಿ ಪೂರ್ಣಗೊಂಡಿದೆ. ಎರಡೂ ರಾಜ್ಯಗಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾರರು ಹಕ್ಕುಚಲಾಯಿಸದರು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತ (West Bengal Assembly elections) ಶೇ. 92.03ರಷ್ಟು ಮತದಾನದೊಂದಿಗೆ ಮುಕ್ತಾಯಗೊಂಡಿತು. ಇತ್ತ ತಮಿಳುನಾಡಿನಲ್ಲಿ ಶೇ. 84ಕ್ಕಿಂತ ಹೆಚ್ಚು ಮತದಾನವಾಗಿದೆ.
ಪಶ್ಚಿಮ ಬಂಗಾಳದ ರಘುನಾಥ್‌ಗಂಜ್‌ನಲ್ಲಿ ಅತೀ ಹೆಚ್ಚು ಅಂದರೆ ದಾಖಲೆಯ ಬರೋಬ್ಬರಿ ಶೇ. 96.35ರಷ್ಟು ಮತದಾನವಾಗಿದೆ. ನಂತರದ ಸ್ಥಾನ ಸಮ್ಸರ್‌ಗಂಜ್‌ನಲ್ಲಿ ಶೇ. 95.89ರಷ್ಟು ಮತದಾನವಾಗಿದೆ. ಸ್ವಾತಂತ್ರ್ಯದ ನಂತರ ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾನವಾಗಿರುವುದುಈ ಬಾರಿ ಎನ್ನುವುದು ವಿಶೇಷ.
ಸ್ಫೋಟ
ಈ ಮಧ್ಯೆ ಮುರ್ಷಿದಾಬಾದ್‌ನ ನೌಡಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿ ಹಲವರು ಗಾಯಗೊಂಡ ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಘಟನೆಯ ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಎಯುಜೆಪಿ ಬೆಂಬಲಿಗರ ಮಧ್ಯೆ ಪರಸ್ಪರ ಘರ್ಷಣೆ ನಡೆದಿದೆ ಎನ್ನಲಾಗಿದೆ. ಉದ್ವಿಗ್ನತೆ ಭುಗಿಲೆದ್ದಂತೆ, ಭದ್ರತಾ ಸಿಬ್ಬಂದಿ ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮುಂದಾದರು.
ಮತದಾನದ ವೇಳೆ ಟಿಎಂಸಿ, ಎಯುಜೆಪಿ ಪಕ್ಷದ ನಡುವೆ ಘರ್ಷಣೆ
ಇನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೌರಾದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ತಮಿಳುನಾಡು: ಶೇ. 84ಕ್ಕಿಂತ ಹೆಚ್ಚು ಮತದಾನ, ಕರೂರ್‌ನಲ್ಲಿ ಅತಿಹೆಚ್ಚು
2026ರ ವಿಧಾನಸಭಾ ಚುನಾವಣೆಯ ಮತದಾನ ಮುಗಿದಂತೆ ತಮಿಳುನಾಡಿನಲ್ಲಿ ಮತದಾನದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಹಲವು ಜಿಲ್ಲೆಗಳಲ್ಲಿ ಶೇ. 80ರ ಸಮೀಪಕ್ಕೆ ಮತದಾನವಾಗಿದೆ. ಚುನಾವಣಾ ಆಯೋಗದ ಪ್ರಕಾರ, ರಾಜ್ಯವು ಒಟ್ಟು ಶೇ. 84.29ರಷ್ಟು ಮತದಾನವನ್ನು ದಾಖಲಿಸಿದ್ದು, ಸ್ವಾತಂತ್ರ್ಯದ ನಂತರದ ಅತ್ಯಧಿಕ ಮತದಾನ ವಾಗಿದೆ ಎನ್ನುವುದನ್ನು ಅಂಕಿ-ಅಂಶ ಸೂಚಿಸಿದೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕರೂರ್ ಶೇ. 89.32ರಷ್ಟು ಮತದಾನದೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದೆ. ಸೇಲಂ ಶೇ. 88.02 ಮತ್ತು ಈರೋಡ್‌ನಲ್ಲಿ ಶೇ. 87.59ರಷ್ಟು ಮತದಾನ ನಡೆದಿದೆ. ಧರ್ಮಪುರಿ ಮತ್ತು ತಿರುಪ್ಪೂರಿನಲ್ಲೂ ಕೂಡ ಕ್ರಮವಾಗಿ ಶೇ. 87.28 ಮತ್ತು ಶೇ. 86.33ರಷ್ಟು ಮತದಾನವಾಗಿದೆ.
ಇನ್ನು ಅರಿಯಲೂರ್‌ನಲ್ಲಿ ಶೇ. 83.09 ಮತದಾನ ದಾಖಲಾಗಿದ್ದರೆ, ತಿರುಚಿರಾಪಳ್ಳಿಯಲ್ಲಿ ಶೇ. 82.76ರಷ್ಟು ಮತದಾನವಾಗಿದೆ. ರಾಜಧಾನಿ ಚೆನ್ನೈನಲ್ಲಿ ಶೇ. 81.34ರಷ್ಟು ಮಂದಿ ಹಕ್ಕು ಚಲಾಯಿಸಿದರು. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೆ ನಡೆಯಿತು. ಮೇ 4ರಂದು ಮತ ಎಣಿಕೆ ನಡೆಯಲಿದೆ.