ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿ ವಿವಿ ವಿದ್ಯಾರ್ಥಿ ಸಂಘ ಚುನಾವಣೆ: ಎಬಿವಿಪಿಗೆ ಭರ್ಜರಿ ಗೆಲುವು, ಎನ್‌ಎಸ್‌ಯುಐಗೆ ಭಾರಿ ಮುಖಭಂಗ, ಸ್ವತಂತ್ರ ಅಭ್ಯರ್ಥಿಗೆ ಪ್ರಮುಖ ಸ್ಥಾನ

Delhi University Polls: ಶನಿವಾರ ನಡೆದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭರ್ಜರಿ ಗೆಲುವು ಸಾಧಿಸಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ, ಎಬಿವಿಪಿಯ ಯಶ್ ದಬಾಸ್ ಎನ್‌ಎಸ್‌ಯುಐನ ವಿಜಯ್ ಶಂಕರ್ ಮೀನಾ ಅವರನ್ನು 2,053 ಮತಗಳ ಅಂತರದಿಂದ ಸೋಲಿಸಿ ಇತಿಹಾಸ ಬರೆದರು.

ದೆಹಲಿ ವಿವಿಯಲ್ಲಿ ಎಬಿವಿಪಿಗೆ ಭರ್ಜರಿ ಗೆಲುವು

ನವದೆಹಲಿ, ಸೆ. 19: ಶನಿವಾರ (ಸೆಪ್ಟೆಂಬರ್‌ 19) ನಡೆದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ (Delhi University Polls) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP), ಭರ್ಜರಿ ಗೆಲುವು ಸಾಧಿಸಿದೆ. ಎಬಿವಿಪಿಯ ಯಶ್ ದಬಾಸ್ ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಸಂಘದ ಚುನಾವಣೆಯ ಮತ ಎಣಿಕೆ ಶನಿವಾರ ಮುಕ್ತಾಯಗೊಂಡಿದ್ದು, ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೋಕೀನ್ ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದಾರೆ.

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (DUSU) 2026ರ ಚುನಾವಣೆಯಲ್ಲಿ ಎಬಿವಿಪಿ 4 ಪ್ರಮುಖ ಸ್ಥಾನಗಳ ಪೈಕಿ ಮೂರರಲ್ಲಿ ಭರ್ಜರಿ ಜಯ ಸಾಧಿಸಿದೆ. ಅಧ್ಯಕ್ಷರಾಗಿ ಯಶ್ ದಬಾಸ್, ಕಾರ್ಯದರ್ಶಿಯಾಗಿ ರಿಯಾ ಛಾವ್ಡಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಲಕ್ಷ್ಯ ರಾಜ್ ಸಿಂಗ್ ಆಯ್ಕೆಯಾಗಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ, ಎಬಿವಿಪಿಯ ಯಶ್ ದಬಾಸ್ 24,576 ಮತಗಳನ್ನು ಗಳಿಸಿ, ಪ್ರತಿಸ್ಪರ್ಧಿ ಎನ್‌ಎಸ್‌ಯುಐನ ವಿಜಯ್ ಶಂಕರ್ ಮೀನಾ ಅವರನ್ನು 2,053 ಮತಗಳ ಅಂತರದಿಂದ ಸೋಲಿಸಿದರು. ಶೋಕೀನ್ 30,615 ಮತಗಳೊಂದಿಗೆ ಉಪಾಧ್ಯಕ್ಷ ಹುದ್ದೆಗೆ ಆಯ್ಕೆಯಾದರು. ಎನ್‌ಎಸ್‌ಯುಐ ಟಿಕೆಟ್ ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಇನ್ನು ಎಬಿವಿಪಿಯ ದೊಡ್ಡ ಗೆಲುವಿನ ನಂತರ, ಯಶ್ ದಬಾಸ್ ಇದನ್ನು ವಿದ್ಯಾರ್ಥಿಗಳು, ಸಾಮರಸ್ಯ, ಸಂಘ ಮತ್ತು ದೇಶಭಕ್ತರಿಗೆ ಸಿಕ್ಕ ಜಯ ಎಂದು ಬಣ್ಣಿಸಿದರು. “ಈ ಹೋರಾಟದಲ್ಲಿ ನಮ್ಮೊಂದಿಗೆ ನಿಂತ, ಹಲವು ವರ್ಷಗಳಿಂದ ನಮ್ಮ ಎಲ್ಲ ಕೆಲಸಗಳಿಗೆ ಕೈಜೋಡಿಸಿ, ಹೆಗಲಿಗೆ ಹೆಗಲು ಕೊಟ್ಟು ನಿಂತ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಂದ ಜಯ ಇದಾಗಿದೆʼʼ ಎಂದು ದಬಾಸ್ ಹೇಳಿದರು.

ವಿಡಿಯೊ ವೀಕ್ಷಿಸಿ:



ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ ದಬಾಸ್, “ರಾಹುಲ್ ಗಾಂಧಿಯು ವಿದ್ಯಾರ್ಥಿ ರಾಜಕೀಯದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಏಕೆಂದರೆ ಅವರು ಹೆಚ್ಚು ತೊಡಗಿಸಿಕೊಂಡಷ್ಟೂ ಎನ್ಎಸ್‌ಯುಐ ಮತ್ತಷ್ಟು ಕುಸಿಯುತ್ತದೆ” ಎಂದು ಹೇಳಿದರು.

ಉತ್ತರ ಪತ್ರಿಕೆ ನೋಡಿ ವಿದ್ಯಾರ್ಥಿಗಳಲ್ಲಿ ದೆಹಲಿ ವಿವಿ ಪ್ರೊಫೆಸರ್ ಮನವಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ಎಬಿವಿಪಿ ಸಾಧಿಸಿರುವ ಈ ಗೆಲುವು, ಕಾಂಗ್ರೆಸ್ ಮತ್ತು ಅದರ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ. ಪರೀಕ್ಷಾ ಅಕ್ರಮಗಳ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ ಯುವ ಜನಸಂಪರ್ಕ ಅಭಿಯಾನ ‘ಛಾತ್ರೋಂ ಕಿ ಗೂಂಜ್’ನ ನಂತರವೂ ಈ ಸೋಲು ಎದುರಾಗಿದೆ.

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯ ಮೇಲೆ ಈ ಅಭಿಯಾನವು ಪರಿಣಾಮ ಬೀರಿಲ್ಲ ಎಂದು ಎಂದು ಎಬಿವಿಪಿ ನಾಯಕರು ತಿಳಿಸಿದ್ದಾರೆ. ದೀರ್ಘಕಾಲದವರೆಗೆ ದೆಹಲಿ ವಿವಿಯ ವಿದ್ಯಾರ್ಥಿ ಸಂಘದಲ್ಲಿ ಪ್ರಾಬಲ್ಯ ಹೊಂದಿದ್ದ ಎನ್‌ಎಸ್‌ಯುಐ ಈಗ ಸೋಲಿನತ್ತ ಮುಖ ಮಾಡಿದೆ. ಅಂದಹಾಗೆ, ಉಪಾಧ್ಯಕ್ಷ ಹುದ್ದೆಯನ್ನು 13,700ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶೋಕೀನ್ ಅವರಿಗೆ ಎನ್‌ಎಸ್‌ಯುಐ ಟಿಕೆಟ್ ನಿರಾಕರಿಸಿತ್ತು.

ʼʼನಾವು ಸೋತಿಲ್ಲ. ದೆಹಲಿ ವಿಶ್ವವಿದ್ಯಾಲಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ಚುನಾವಣೆಯಲ್ಲಿ ಗೆದ್ದಿದ್ದಾರೆ. ನಿಮ್ಮ ಅಪಾರ ಬೆಂಬಲಕ್ಕೆ ತುಂಬು ಹೃದಯದ ಧನ್ಯವಾದಗಳು. ಸ್ವಾಮಿ ಶ್ರದ್ಧಾನಂದ ಕಾಲೇಜು, ರಾಮಜಾಸ್ ಕಾಲೇಜು ಮತ್ತು ಶಿವಾಜಿ ಕಾಲೇಜಿನಂತಹ ಕಾಲೇಜುಗಳಲ್ಲಿ ನಡೆದ ಘಟನೆಗಳ ಬಗ್ಗೆ ನಾವು ದೂರು ದಾಖಲಿಸಿದ್ದೇವೆ. ನಕಲಿ ಮತದಾನ ನಡೆದಿತ್ತು. ವಿದ್ಯಾರ್ಥಿಗಳನ್ನು ಬಲವಂತವಾಗಿ ಮತ ಚಲಾಯಿಸುವಂತೆ ಮಾಡಲಾಯಿತು ಮತ್ತು ಅವರ ಗುರುತಿನ ಚೀಟಿಗಳನ್ನು ಕಸಿದುಕೊಳ್ಳಲಾಯಿತು. ಈ ಸಂಬಂಧ ಕೋರ್ಟ್ ಮೆಟ್ಟಿಲೇರಿ ಹೋರಾಡಲಿದ್ದೇವೆʼʼ ಎಂದು ಎನ್‌ಎಸ್‌ಯುಐ ಅಧ್ಯಕ್ಷೀಯ ಅಭ್ಯರ್ಥಿ ವಿಜಯ್ ಶಂಕರ್ ಮೀನಾ ಹೇಳಿದ್ದಾರೆ.