ಜಮ್ಮು, ಜೂ.12: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ ವಲಯದಲ್ಲಿ ನಿಯಂತ್ರಣ ರೇಖೆ ಸಮೀಪ ಶುಕ್ರವಾರ (ಜೂ. 12) ನಡೆದ ತರಬೇತಿ ಅಭ್ಯಾಸದ ವೇಳೆ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡ (Grenade Explosion) ಪರಿಣಾಮ ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಎಲ್‌ಒಸಿಗೆ ಸಮೀಪವಿರುವ ಮಾಲ್ಟಿ ಸೆಕ್ಟರ್‌ನಲ್ಲಿರುವ ಆರ್ಮಿ ಫಾರ್ವರ್ಡ್ ಪೋಸ್ಟ್ ಬಳಿ ಮಧ್ಯಾಹ್ನ 12.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಸೇನಾ ಸಿಬ್ಬಂದಿ ನಿಯಮಿತ ತರಬೇತಿ ಮತ್ತು ಶಸ್ತ್ರಾಸ್ತ್ರ ನಿರ್ವಹಣೆ ಕವಾಯತುಗಳನ್ನು ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡರು. ಗಾಯಗೊಂಡ ಇಬ್ಬರೂ ಸಿಬ್ಬಂದಿಯನ್ನು ತಕ್ಷಣ ಚಿಕಿತ್ಸೆಗಾಗಿ ಪೂಂಚ್‌ನ 425 ಫೀಲ್ಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ಪಡೆದ ನಂತರ, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಗಾಯಗಳ ತೀವ್ರತೆಯನ್ನು ಪರಿಗಣಿಸಿ, ಭಾರತೀಯ ಸೇನೆಯು ವಾಯು ಮಾರ್ಗದ ಮೂಲಕ ಸ್ಥಳಾಂತರ ವ್ಯವಸ್ಥೆ ಮಾಡಿದ್ದು, ಇಬ್ಬರು ಯೋಧರನ್ನು ವಿಶೇಷ ಚಿಕಿತ್ಸೆಗೆಂದು ಉದಂಪುರದಲ್ಲಿರುವ ನಾರ್ದರ್ನ್ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
Vijayapur News: ವಿಜಯಪುರದ ಪಾನ್ ಶಾಪ್‌ನಲ್ಲಿ ನಿಗೂಢ ಸ್ಫೋಟ; ಮೂವರಿಗೆ ಗಾಯ
ಗಾಯಗೊಂಡ ಸೈನಿಕರನ್ನು ಬಿಹಾರ ಬೆಟಾಲಿಯನ್‌ನ ಲ್ಯಾನ್ಸ್ ನಾಯಕ್ ರವೀಂದರ್ ಭೇರಾ ಮತ್ತು ಅಗ್ನಿವೀರ್ ಶಕ್ತಿ ಪ್ರಸಾದ್ ಎಂದು ಗುರುತಿಸಲಾಗಿದೆ. ಈ ಮಧ್ಯೆ, ಆಕಸ್ಮಿಕ ಸ್ಫೋಟದ ಕಾರಣವನ್ನು ಕಂಡುಹಿಡಿಯಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗಿದೆ.
ಸ್ಟೀಲ್ ಪ್ಲಾಂಟ್‌ನಲ್ಲಿ ಭೀಕರ ಸ್ಫೋಟ: 8 ಕಾರ್ಮಿಕರ ದುರ್ಮರಣ
ಪ್ರಸಿದ್ಧ ಉಕ್ಕಿನ ಕಾರ್ಖಾನೆಯಲ್ಲಿ ಜೂನ್ 8 ರಂದು ಸ್ಫೋಟ ಸಂಭವಿಸಿ, 8 ಮಂದಿ ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ಸಂಭವಿಸಿತ್ತು. ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ದುರಂತ ನಡೆದಿತ್ತು. ಕರಗಿದ ಉಕ್ಕನ್ನು ಸಾಗಿಸುತ್ತಿದ್ದ ದೊಡ್ಡ ಪಾತ್ರೆಯು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರು. ಹಲವು ಉದ್ಯೋಗಿಗಳು ತೀವ್ರವಾಗಿ ಗಾಯಗೊಂಡರು.
ಉಕ್ಕಿನ ಕಾರ್ಖಾನೆಯ ಎಸ್‌ಎಂಎಸ್-2 ಮತ್ತು ಎಸ್‌ಟಿಸಿ-3 ಹೀಟ್ ಸೌಲಭ್ಯದ ಘಟಕದಲ್ಲಿ ಈ ಅಪಘಾತ ನಡೆದಿತ್ತು. ಅತ್ಯಂತ ಹೆಚ್ಚಿನ ತಾಪಮಾನದಲ್ಲಿದ್ದ ದ್ರವರೂಪದ ಉಕ್ಕನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದ್ದು, ಭಾರಿ ಪ್ರಮಾಣದ ಕರಗಿದ ಉಕ್ಕು ಸುತ್ತಲೂ ಸೋರಿಕೆಯಾಯಿತು. ಹಠಾತ್ ಆದ ಈ ಸ್ಫೋಟದಿಂದಾಗಿ ಇಡೀ ಕಾರ್ಖಾನೆಯ ಆವರಣದಲ್ಲಿ ತಲ್ಲಣ ಮತ್ತು ಭೀತಿ ಸೃಷ್ಟಿಯಾಯಿತು. ಅಲ್ಲಿದ್ದ ಕಾರ್ಮಿಕರು ಹಾಗೂ ಸಿಬ್ಬಂದಿ ತಮ್ಮ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದರು. ವಿಷಯ ತಿಳಿಯುತ್ತಿದ್ದಂತೆ ಸ್ಟೀಲ್ ಪ್ಲಾಂಟ್‌ನ ಭದ್ರತಾ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದರು.