ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ಬಿಟ್ಟು ತೊಲಗಿ ಆದೇಶ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿರುವ ನಟ ಇಮ್ರಾನ್ ಖಾನ್

Imran Khan: ಭಾರತವನ್ನು ತೊರೆಯುವಂತೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿರುವ ಆದೇಶವನ್ನು ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದಾರೆ. ನಟನ ಪರ ವಕೀಲ ಜುಲ್ಫಿಕರ್ ಮೆಮನ್ ಅವರು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ಎಫ್ಆರ್‌ಆರ್‌ಒ ಆದೇಶಿಸಿದೆ.

ಮುಂಬೈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಮ್ರಾನ್ ಖಾನ್

ಮುಂಬೈ, ಅ.16: ನಟ ಇಮ್ರಾನ್ ಖಾನ್ ಅವರು ಅಮೆರಿಕದ ಪ್ರಜೆಯಾಗಿದ್ದಾರೆ. ಆದರೆ ಅವರ ಬಳಿ ಭಾರತೀಯ ಸಾಗರೋತ್ತರ ನಾಗರಿಕ (Overseas Citizen of India) ಕಾರ್ಡ್ ಇದೆ. ಈ ಕಾರ್ಡ್ ವಿದೇಶಿ ಭಾರತೀಯ ಮೂಲದವರಿಗೆ ಭಾರತದಲ್ಲಿ ದೀರ್ಘಕಾಲ ವಾಸಿಸಲು ಕೆಲವು ಸೌಲಭ್ಯಗಳನ್ನು ನೀಡುತ್ತದೆ. ಇದೀಗ ಭಾರತವನ್ನು ತೊರೆಯುವಂತೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿರುವ ಆದೇಶವನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದಾರೆ. ನಟನ ಪರ ವಕೀಲ ಜುಲ್ಫಿಕರ್ ಮೆಮನ್ ಅವರು ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. 2000ರ ದಶಕದ ಕೊನೆಯ ವರ್ಷಗಳಲ್ಲಿ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದ ಇಮ್ರಾನ್ ಖಾನ್ ( Imran Khan) ಅವರು ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ಎಫ್ಆರ್‌ಆರ್‌ಒ ಆದೇಶಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಕೋರಿ ಮುಂಬೈನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಖಾನ್ ಅವರನ್ನು ಬಂಧಿಸಲಾಯಿತು. ಪ್ರತಿಭಟನೆಯ ನಂತರ, ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರು, ನಟ ಅಮೆರಿಕನ್ ಪ್ರಜೆಯಾಗಿದ್ದರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ದೂರನ್ನು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ರವಾನಿಸಿದ್ದು, ಬಳಿಕ ಆ ಕಚೇರಿಯು ಗಡಿಪಾರು ನೋಟಿಸ್ ಜಾರಿಗೊಳಿಸಿದೆ. ಇಮ್ರಾನ್ ಖಾನ್ ಅವರ ಬಳಿ ಒಸಿಐ ಕಾರ್ಡ್ ಇದ್ದರೂ, ಅವರು ಪ್ರತಿಭಟನೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಎಫ್ಆರ್‌ಆರ್‌ಒ ವಾದಿಸಿದೆ.

ಇಂದು ಸಿಜೆಪಿ ತಿರಂಗ ಮಾರ್ಚ್: ರಾಷ್ಟ್ರ ರಾಜಧಾನಿಯಲ್ಲಿ 6,000 ಪೊಲೀಸರ ನಿಯೋಜನೆ, ಸೆಂಟ್ರಲ್ ಪಾರ್ಕ್ ಬಂದ್

2025ರ ವಲಸೆ ಮತ್ತು ವಿದೇಶಿಗರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಈ ಉಚ್ಚಾಟನಾ ನೋಟಿಸ್ ನೀಡಲಾಗಿದೆ. ಈ ಕಾಯ್ದೆಯ ಸೆಕ್ಷನ್ 7ರ ಪ್ರಕಾರ, ಭಾರತದಲ್ಲಿ ವಿದೇಶಿಗರ ಪ್ರವೇಶ, ನಿರ್ಗಮನ, ವಾಸ್ತವ್ಯ ಅಥವಾ ಸಂಚಾರವನ್ನು ನಿಯಂತ್ರಿಸಲು, ನಿರ್ಬಂಧಿಸಲು ಅಥವಾ ನಿಷೇಧಿಸಲು ಭಾರತ ಸರ್ಕಾರಕ್ಕೆ ಆದೇಶಗಳು, ನಿರ್ದೇಶನಗಳು ಅಥವಾ ಸೂಚನೆಗಳನ್ನು ಹೊರಡಿಸುವ ಅಧಿಕಾರವಿದೆ. ಈ ಕ್ರಮವನ್ನು ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಬು ಅಜ್ಮಿ ವಿರೋಧಿಸಿದ್ದಾರೆ.

ನಟ ಇಮ್ರಾನ್ ಖಾನ್, ಅವರ ಸಂಗಾತಿ ಲೇಖಾ ವಾಷಿಂಗ್ಟನ್ ಹಾಗೂ ಅವರ ಸೋದರ ಸಂಬಂಧಿ ಝೇನ್ ಮೇರಿ ಖಾನ್ ಅವರು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದರು.

ನಂತರ ಇಮ್ರಾನ್ ಖಾನ್ ಅವರು ಪೊಲೀಸ್ ವ್ಯಾನ್‌ನೊಳಗೆ ತಾವು ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. “ನಾನು ಡ್ರೈವ್‌ಗೆ ಹೋಗುತ್ತಿದ್ದೇನೆ ಅನಿಸುತ್ತದೆ” ಎಂದು ತಮಾಷೆಯಾಗಿ ಬರೆದುಕೊಂಡಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ್ದ ನಟ, “ನಾನು ಯಾವುದೇ ಬೇಡಿಕೆಗಳನ್ನು ಮುಂದಿಡಲು ಬಂದಿಲ್ಲ. ಈ ನಗರದ ನಿವಾಸಿಯಾಗಿ, ಒಬ್ಬ ನಾಗರಿಕನಾಗಿ ಇಲ್ಲಿಗೆ ಬಂದಿದ್ದೇನೆ. ಜನರ ಸಂಚಾರ ಸ್ವಾತಂತ್ರ್ಯವನ್ನು ಏಕೆ ನಿರ್ಬಂಧಿಸಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಂದಿದ್ದೇನೆ. ಜನರ ಧ್ವನಿಯನ್ನು ಏಕೆ ಹತ್ತಿಕ್ಕಲಾಗುತ್ತಿದೆ? ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿದ್ದರು.