ಭೋಪಾಲ್, ಜು. 12: ನಟಿ, ಮಾಡೆಲ್ ತ್ವಿಶಾ ಶರ್ಮಾ (Twisha Sharma Death Case) ಅವರ ಮೊದಲ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಸಿಗಲಿಲ್ಲ ಎನ್ನಲಾದ ಜಿಮ್ನಾಸ್ಟಿಕ್ಸ್ ಬೆಲ್ಟ್ ಈಗ ಅವರ ಸಾವಿನ ತನಿಖೆಯಲ್ಲಿ ಅತ್ಯಂತ ನಿರ್ಣಾಯಕ ಸಾಕ್ಷ್ಯಗಳಲ್ಲಿ ಒಂದಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ, ಏಮ್ಸ್ ನವದೆಹಲಿ ವೈದ್ಯಕೀಯ ಮಂಡಳಿಯು 11 ಪುಟಗಳ ವಿಧಿವಿಜ್ಞಾನ ವರದಿಯನ್ನು ಕೇಂದ್ರ ತನಿಖಾ ದಳಕ್ಕೆ (CBI) ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ಏಮ್ಸ್ ದೆಹಲಿಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ವರದಿಯನ್ನು ಸಲ್ಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ಅಡಿಯಲ್ಲಿ ಅದರ ವಿಷಯಗಳು ಗೌಪ್ಯವಾಗಿರಲಿದೆ.
ಮೂಲಗಳ ಪ್ರಕಾರ, ಪ್ರಯೋಗಾಲಯ ಮತ್ತು ಹಿಸ್ಟೋಪಾಥೋಲಾಜಿಕಲ್ (ಅಂಗಾಂಶ ಪರೀಕ್ಷೆ) ಪರೀಕ್ಷೆಗಳಲ್ಲಿ ಲೋಹದ ಉಂಗುರ ಹೊಂದಿದ್ದ ಜಿಮ್ನಾಸ್ಟಿಕ್ಸ್ ಬೆಲ್ಟ್ ಅನ್ನು ಕುತ್ತಿಗೆ ಬಿಗಿಯಲು ಬಳಸಲಾಗಿದ್ದು, ಚರ್ಮದ ಅಂಗಾಂಶ ಪತ್ತೆಯಾಗಿದೆ. ಈ ಪರೀಕ್ಷಾ ಫಲಿತಾಂಶಗಳು, ಆ ವಸ್ತು ತ್ವಿಶಾ ಅವರ ಕುತ್ತಿಗೆಯಲ್ಲಿ ಕಂಡುಬಂದ ಗಾಯದ ಮಾದರಿಯೊಂದಿಗೆ ಹೊಂದಿಕೆಯಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ತ್ವಿಶಾ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆಯೇ ಅಥವಾ ಕೊಲೆ ಮಾಡಲಾಯಿತೇ ಎಂಬುದನ್ನು ಈ ವರದಿ ಸಾಬೀತುಪಡಿಸುವುದಿಲ್ಲ. ಆದರೆ ತನಿಖೆಯ ಆರಂಭದಿಂದಲೂ ಕಾಡುತ್ತಿದ್ದ ಪ್ರಮುಖ ಪ್ರಶ್ನೆಗೆ ಉತ್ತರ ನೀಡುವ ಸಾಧ್ಯತೆ ಇದೆ. ಜಿಮ್ನಾಸ್ಟಿಕ್ಸ್ ಬೆಲ್ಟ್ ಅನ್ನು ನಿಜವಾಗಿಯೂ ನೇಣು ಬಿಗಿಯಲು ಬಳಸಲಾಗಿದೆಯೇ? ಎಂಬುದು ಗೊತ್ತಾಗಲಿದೆ. ಜಿಮ್ನಾಸ್ಟಿಕ್ಸ್ ಬೆಲ್ಟ್‌ನ ಪಾತ್ರವೇ ತನಿಖಾಧಿಕಾರಿಗಳಿಗೆ ದೊಡ್ಡ ರಹಸ್ಯವಾಗಿ ಉಳಿದಿದೆ.
ತ್ವಿಶಾ ಶರ್ಮಾ ಸಾವು ಕೇಸ್; ಸಿಬಿಐನಿಂದ ಅತ್ತೆ ಗಿರಿಬಾಲಾ ಸಿಂಗ್ ಬಂಧನ
ಮೇ 12ರಂದು ಮಧ್ಯ ಪ್ರದೇಶದ ಭೋಪಾಲ್‌ನಲ್ಲಿರುವ ತನ್ನ ಪತಿ ಮನೆಯಲ್ಲಿ ತ್ವಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುವ ಹಿಂದಿನ ಅಂತಿಮ ಕ್ಷಣಗಳನ್ನು ಪುನರ್ನಿರ್ಮಿಸಲು ಏಮ್ಸ್ ವರದಿಯು ಸಿಬಿಐಗೆ ಸಹಾಯ ಮಾಡಲಿದೆ. ಆರಂಭಿಕ ತನಿಖೆಯ ಸುತ್ತಲಿನ ವಿವಾದದ ಕೇಂದ್ರಬಿಂದು ಜಿಮ್ನಾಸ್ಟಿಕ್ ಬೆಲ್ಟ್ ಎನಿಸಿಕೊಂಡಿದೆ. ನೇಣು ಬಿಗಿದುಕೊಳ್ಳಲು ಬಳಸಲಾಗಿದೆ ಎನ್ನಲಾದ ಬೆಲ್ಟ್ ಮೊದಲ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ವೈದ್ಯರಿಗೆ ಏಕೆ ನೀಡಲಿಲ್ಲ ಎಂದು ತ್ವಿಶಾ ಅವರ ಕುಟುಂಬ ಪದೇ ಪದೆ ಪ್ರಶ್ನಿಸಿದೆ.
ವಿಧಿವಿಜ್ಞಾನ ತಂಡವು ಬೆಲ್ಟ್ ವಶಪಡಿಸಿಕೊಂಡಿದೆ. ಆದರೆ ಸಕಾಲದಲ್ಲಿ ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಭೋಪಾಲ್ ಪೊಲೀಸರು ಒಪ್ಪಿಕೊಂಡಿದ್ದರು. ಪೊಲೀಸ್ ಆಯುಕ್ತರು ಇದನ್ನು ಪ್ರತ್ಯೇಕವಾಗಿ ಪರಿಶೀಲಿಸಲಿದ್ದಾರೆ.
ಏನಿದು ಪ್ರಕರಣ?
ವಕೀಲ ಸಮರ್ಥ್ ಸಿಂಗ್‌ನನ್ನು ಮದುವೆಯಾದ ಆರು ತಿಂಗಳೊಳಗೆ ಅಂದರೆ ಮೇ 12ರಂದು ತ್ವಿಶಾ ಶರ್ಮಾ ಪತಿ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಆಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂಬ ಆಧಾರದ ಮೇಲೆ ತನಿಖೆ ಮುಂದುವರಿಯಿತು. ಆದರೆ ಆಕೆಯ ಕುಟುಂಬವು ಕ್ರೌರ್ಯ ಮತ್ತು ವರದಕ್ಷಿಣೆ ಸಂಬಂಧಿತ ಕಿರುಕುಳದಿಂದ ಕೊಲೆ ಮಾಡಿರುವುದಾಗಿ ಆರೋಪಿಸಿತ್ತು.
ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸಿಬಿಐಗೆ ಪ್ರಕರಣದ ತನಿಖೆಯನ್ನು ಹಸ್ತಾಂತರಿಸಲಾಯಿತು. ಆರಂಭದಲ್ಲಿ ಬಂಧನದಿಂದ ತಪ್ಪಿಸಿಕೊಂಡಿದ್ದ ಸಮರ್ಥ್ ನಂತರ ನ್ಯಾಯಾಲಯದ ಮುಂದೆ ಶರಣಾಗಿದ್ದ. ನಂತರ ಆತನನ್ನು ಮತ್ತು ಆತನ ತಾಯಿ ಗಿರಿಬಾಲ ಸಿಂಗ್ ಅವರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.