ನವದೆಹಲಿ: ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರ್ಪಡೆಯಾಗಿ, ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವಾ ವಿಸ್ತರಣೆಯನ್ನು (Second Tour of Duty - TOD) ಆಯ್ಕೆ ಮಾಡಿಕೊಳ್ಳುವ ಅಗ್ನಿವೀರರಿಗೆ (Agniveer service) ವಿವಾಹವಾಗಲು ಅನುಮತಿ ನೀಡಲಾಗುವುದು ಎಂದು ರಕ್ಷಣಾ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ. 2022ರಲ್ಲಿ ಜಾರಿಗೆ ಬಂದ ಅಗ್ನಿಪಥ್ ಯೋಜನೆಯ ನಿಯಮಾವಳಿಗಳ ಪ್ರಕಾರ, ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಅವಿವಾಹಿತರಾಗಿರಬೇಕು ಮತ್ತು ತಮ್ಮ ಆರಂಭಿಕ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಮದುವೆಯಾಗುವಂತಿರಲಿಲ್ಲ.
ಇದೀಗ ಎರಡು ವರ್ಷಗಳ ಸೇವಾ ವಿಸ್ತರಣೆಗೆ ನೋಂದಾಯಿಸಿಕೊಳ್ಳುವ ಸಮಯದಲ್ಲೂ ಅವರು ಅವಿವಾಹಿತರಾಗಿಯೇ ಇರಬೇಕು ಎಂದು ಸೂಚಿಸಲಾಗಿದೆ. ಆದರೆ, ಮೊದಲ ಅವಧಿಯ ನಂತರ ಸಿಗುವ ಸಣ್ಣ ವಿರಾಮವನ್ನು ಮುಗಿಸಿ, ಎರಡನೇ ಅವಧಿಗೆ ಸೇರ್ಪಡೆಯಾದ ಬಳಿಕ ನಡೆಯುವ ಸುಮಾರು ನಾಲ್ಕು ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ತಕ್ಷಣ ಅವರು ವಿವಾಹವಾಗಲು ಅರ್ಹರಾಗಿರುತ್ತಾರೆ.
ಅಗ್ನಿಪಥ್ ಯೋಜನೆಯಡಿ 17.5 ರಿಂದ 21 ವರ್ಷದೊಳಗಿನ ಯುವಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ, ಗ್ರಾಮೀಣ ಪ್ರದೇಶ ಮತ್ತು ಸಣ್ಣ ಪಟ್ಟಣಗಳಿಂದ ಬರುವ ಬಹುತೇಕ ಯುವಕರು ತಮ್ಮ ಸೇವೆಯ ಐದನೇ ವರ್ಷಕ್ಕೆ ಕಾಲಿಡುವ ಹೊತ್ತಿಗೆ 23 ಅಥವಾ 24 ವರ್ಷ ವಯಸ್ಸಿನವರಾಗಿರುತ್ತಾರೆ. ಈ ವಯಸ್ಸಿನಲ್ಲಿ ಅವರಿಗೆ ಮದುವೆಯಾಗಲು ಅವಕಾಶ ನೀಡುವ ಮೂಲಕ ಅವರ ವೈಯಕ್ತಿಕ ಮತ್ತು ಸಾಮಾಜಿಕ ಅಗತ್ಯಗಳಿಗೆ ರಕ್ಷಣಾ ಇಲಾಖೆ ಸ್ಪಂದಿಸಿದಂತಾಗಿದೆ.
ತರಬೇತಿ ಪಡೆದ ಯೋಧರನ್ನು ದೀರ್ಘಾವಧಿಯವರೆಗೆ ಸೇನೆಯಲ್ಲಿ ಉಳಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ನವೆಂಬರ್ 4ರಂದು ಎರಡು ವರ್ಷಗಳ 'ಸೆಕೆಂಡ್ ಟೂರ್ ಆಫ್ ಡ್ಯೂಟಿಗೆ ಅನುಮೋದನೆ ನೀಡಿತ್ತು. ಈಗಾಗಲೇ ಭಾರತೀಯ ನೌಕಾಪಡೆಯ ಮೊದಲ ಬ್ಯಾಚ್ನ ಅಗ್ನಿವೀರರು ತಮ್ಮ ನಾಲ್ಕು ವರ್ಷಗಳ ಆರಂಭಿಕ ಸೇವೆಯನ್ನು ಪೂರ್ಣಗೊಳಿಸಿದ್ದು, ಮೆರಿಟ್ ಆಧಾರದ ಮೇಲೆ ಶೇ. 25ರಷ್ಟು ಸಿಬ್ಬಂದಿಗೆ ಕಾಯಂ ಸೇವೆಯ ಅವಕಾಶ ನೀಡಲಾಗಿದೆ.
ಅಗ್ನಿವೀರರ ಸೇವಾ ಅವಧಿ 2 ವರ್ಷ ವಿಸ್ತರಣೆ: ಕೇಂದ್ರ ಸಚಿವ ಸಂಪುಟದಿಂದ ಮಹತ್ವದ ನಿರ್ಧಾರ
ಉಳಿದ ಅರ್ಹ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಸೇವಾ ವಿಸ್ತರಣೆಯ ಆಯ್ಕೆಯನ್ನು ನೀಡಲಾಗಿದ್ದು, ಆರು ವರ್ಷಗಳ ಒಟ್ಟು ಸೇವೆಯ ನಂತರ ಕಾಯಂ ನೇಮಕಾತಿಗೆ ಮತ್ತೊಂದು ಅವಕಾಶ ಸಿಗಲಿದೆ. ಭಾರತೀಯ ಭೂಸೇನೆ ಮತ್ತು ವಾಯುಪಡೆಯ ಮೊದಲ ಬ್ಯಾಚ್ಗಳು ಕೂಡ ಮುಂದಿನ ತಿಂಗಳು ತಮ್ಮ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲಿವೆ.