ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ahmedabad Crash: ದುರಂತದ ನೆನಪು ಕಾಡುತ್ತಲೇ ಇದೆ.. ಯಾರೊಂದಿಗೂ ಮಾತನಾಡಲು ಆಗುತ್ತಿಲ್ಲ.. ವಿಶ್ವಾಸ್ ಸಂಕಟ

ಅಹಮದಾಬಾದ್ ವಿಮಾನ ದುರಂತದಲ್ಲಿ (Ahmedabad flight Crash) ಬದುಕುಳಿದ ಏಕೈಕ ವ್ಯಕ್ತಿ (Ahmedabad Crash Survivor) ವಿಶ್ವಾಸ್ ಕುಮಾರ್ ರಮೇಶ್ ( Vishwas Kumar Ramesh ) ಮಾನಸಿಕವಾಗಿ ಆಘಾತಗೊಂಡಿದ್ದು, ಇದರಿಂದ ಹೊರಬರಲು ಅವರು ಒದ್ದಾಡುತ್ತಿದ್ದಾರೆ. ಅವರು ಯಾರೊಂದಿಗೂ ಮಾತನಾಡುತ್ತಿಲ್ಲ, ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುತ್ತಾರೆ ಎಂದು ಅವರ ಸೋದರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಮಾನಸಿಕ ಆಘಾತಕ್ಕೊಳಗಾಗಿರುವ ವಿಮಾನ ದುರಂತದಲ್ಲಿ ಬದುಕಿ ಬಂದ ಏಕೈಕ ವ್ಯಕ್ತಿ

ನವದೆಹಲಿ: ಅಹಮದಾಬಾದ್ ವಿಮಾನ ದುರಂತದಲ್ಲಿ (Ahmedabad flight Crash) ಬದುಕುಳಿದ ಏಕೈಕ ವ್ಯಕ್ತಿ (Ahmedabad Crash Survivor) ವಿಶ್ವಾಸ್ ಕುಮಾರ್ ರಮೇಶ್ ( Vishwas Kumar Ramesh ) ಮಾನಸಿಕವಾಗಿ ಆಘಾತಗೊಂಡಿದ್ದು, ಇದರಿಂದ ಹೊರಬರಲು ಅವರು ಒದ್ದಾಡುತ್ತಿದ್ದಾರೆ. ಅವರು ಯಾರೊಂದಿಗೂ ಮಾತನಾಡುತ್ತಿಲ್ಲ, ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುತ್ತಾರೆ ಎಂದು ಅವರ ಸೋದರ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ವಿಶ್ವಾಸ್ ಕುಮಾರ್ ರಮೇಶ್ ಅವರ ಸಹೋದರ ಅಜಯ್ ಸೇರಿದಂತೆ 270ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಭೀಕರ ಅಪಘಾತದ ನೆನಪು ರಮೇಶ್ ಅವರನ್ನು ಜರ್ಜರಿತರನ್ನಾಗಿ ಮಾಡಿದೆ.

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ಜೂನ್ 12ರಂದು ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ 270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್, ಈ ಭೀಕರ ದುರಂತದ ಆಘಾತವನ್ನು ನಿಭಾಯಿಸಲು ಇನ್ನೂ ಹೆಣಗಾಡುತ್ತಿದ್ದಾರೆ.

ಲಂಡನ್ ಗೆ ಹೊರಟಿದ್ದ ವಿಮಾನದಲ್ಲಿ 242 ಪ್ರಯಾಣಿಕರಲ್ಲಿ ಒಬ್ಬರಾಗಿದ್ದ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಮಾತ್ರ ಬದುಕಿಬಂದರು. ವಿಮಾನದಲ್ಲಿದ್ದ ಸಾವನ್ನಪ್ಪಿದ 241 ಮಂದಿಯಲ್ಲಿ ಅವರ ಸಹೋದರ ಅಜಯ್ ಕೂಡ ಸೇರಿದ್ದಾರೆ. ಈ ಅಪಘಾತದ ಬಳಿಕ ರಮೇಶ್ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇದನ್ನು ನಿಭಾಯಿಸಲು ಅವರು ಈಗ ಮನೋವೈದ್ಯರ ಸಹಾಯ ಪಡೆಯುತ್ತಿದ್ದಾರೆ ಎಂದು ಅವರ ಸೋದರಸಂಬಂಧಿಯೊಬ್ಬರು ಹೇಳಿದ್ದಾರೆ.

ಅಪಘಾತ ಸ್ಥಳದ ದೃಶ್ಯಗಳು, ಪವಾಡಸದೃಶವಾಗಿ ಅವರು ಪಾರಾಗಿರುವುದು, ಸಹೋದರನ ಸಾವಿನ ನೆನಪುಗಳು ಅವರನ್ನು ಕಾಡುತ್ತಿದೆ. ವಿದೇಶಗಳಿಂದ ಅನೇಕ ಸಂಬಂಧಿಕರು ವಿಶ್ವಾಸ್ ಅವರ ಯೋಗಕ್ಷೇಮ ವಿಚಾರಿಸಲು ಕರೆ ಮಾಡುತ್ತಿದ್ದಾರೆ. ಆದರೆ ಅವರು ಯಾರೊಂದಿಗೂ ಮಾತನಾಡುತ್ತಿಲ್ಲ. ಕೆಲವೊಮ್ಮೆ ಮಧ್ಯರಾತ್ರಿ ಎಚ್ಚರಗೊಳ್ಳುತ್ತಾರೆ. ಮತ್ತೆ ನಿದ್ರಿಸುವುದು ಕೂಡ ಅವರಿಗೆ ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮತ್ತೆ ಅವರು ಲಂಡನ್ ಗೆ ಹೋಗುವ ಯಾವುದೇ ಯೋಜನೆಯನ್ನು ಮಾಡಿಲ್ಲ. ಸದ್ಯಕ್ಕೆ ಅವರಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ರಮೇಶ್ ಸೋದರ ಸಂಬಂಧಿ ತಿಳಿಸಿದ್ದಾರೆ.

vis1

ಡಿಯುನಲ್ಲಿರುವ ತಮ್ಮ ಕುಟುಂಬವನ್ನು ಭೇಟಿ ಮಾಡಿ ರಮೇಶ್ ಮತ್ತು ಅಜಯ್ ಏರ್ ಇಂಡಿಯಾ ವಿಮಾನದಲ್ಲಿ ಲಂಡನ್‌ಗೆ ಹಿಂತಿರುಗುತ್ತಿದ್ದಾಗ ದುರಂತ ಸಂಭವಿಸಿದೆ. ಜೂನ್ 18 ರಂದು ಡಿಯುನಲ್ಲಿರುವ ಸ್ಮಶಾನಕ್ಕೆ ವಿಶ್ವಾಸ್ ತನ್ನ ಸಹೋದರನ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ವಿಮಾನ ಅಪಘಾತ

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಜೂನ್ 12ರಂದು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ಅನಂತರ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು.

ಇದನ್ನೂ ಓದಿ: Mission Indradhanush: ಭಾರತಕ್ಕೆ ʼಮೀಸಲ್ಸ್-ರುಬೆಲ್ಲಾ ಚಾಂಪಿಯನ್ ಪ್ರಶಸ್ತಿ; ಮಿಷನ್ ಇಂದ್ರಧನುಷ್ ಯಶಸ್ಸಿಗೆ ವಿಶ್ವಸಂಸ್ಥೆ ಶ್ಲಾಘನೆ

ಬೋಯಿಂಗ್ 787-8 (ಎಐ 171) ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ 241 ಮಂದಿ ಮತ್ತು ನೆಲದ ಮೇಲಿದ್ದ 34 ಜನರು ಅಪಘಾತದಲ್ಲಿ ಸಾವನ್ನಪ್ಪಿದರು. ಮೃತಪಟ್ಟವರಲ್ಲಿ 232 ಪ್ರಯಾಣಿಕರು ಮತ್ತು 10 ಸಿಬ್ಬಂದಿ ಇದ್ದು, ಇದರಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, ಏಳು ಪೋರ್ಚುಗೀಸರು ಮತ್ತು ಒಬ್ಬ ಕೆನಡಾದವರು ಸೇರಿದ್ದರು.

ರಮೇಶ್ ಪಾರಾಗಿದ್ದು ಹೇಗೆ?

ವಿಮಾನವು ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. ವಿಶ್ವಾಸ್ 11ಎ ಸೀಟ್ ನಲ್ಲಿದ್ದರು. ಇದರ ಹತ್ತಿರದಲ್ಲೇ ತುರ್ತು ನಿರ್ಗಮನ ಬಾಗಿಲು ಇತ್ತು. ವಿಮಾನ ಅಪಘಾತಕ್ಕೀಡಾದ ಬಳಿಕ ಹಾಸ್ಟೆಲ್ ಆವರಣದ ನೆಲ ಮಹಡಿಯಲ್ಲಿ ಬಿದ್ದಿತು. ಬಾಗಿಲು ಮುರಿದಿರುವುದನ್ನು ನೋಡಿ ವಿಶ್ವಾಸ್ ಹೊರಬಂದಿದ್ದರು. ಅದಾದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಸಂಪೂರ್ಣ ಹೊತ್ತಿ ಉರಿದಿದೆ.