ದೆಹಲಿ, ಫೆ. 17: ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹರಡುವಿಕೆಯು ವೃತ್ತಿಪರರಲ್ಲಿ ಉದ್ಯೋಗ ನಷ್ಟದ ಭೀತಿಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐ (ANI)ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), "ಭಯಕ್ಕೆ ಸಿದ್ಧತೆಯೇ ಅತ್ಯುತ್ತಮ ಮದ್ದು" ಎಂದು ಒತ್ತಿ ಹೇಳಿದ್ದಾರೆ.
ಪ್ರಧಾನಿ ಅವರ ಪ್ರಕಾರ, ತಂತ್ರಜ್ಞಾನದ ಆಗಮನದಿಂದ ಹಳೆಯ ಉದ್ಯೋಗಗಳು ಸಂಪೂರ್ಣವಾಗಿ ಮಾಯವಾಗುವುದಿಲ್ಲ, ಬದಲಿಗೆ ಅವುಗಳ ಸ್ವರೂಪ ಬದಲಾಗುತ್ತದೆ (Redefined). "ತಂತ್ರಜ್ಞಾನದಿಂದ ಕೆಲಸಗಳು ಇಲ್ಲದಂತಾಗುವುದಿಲ್ಲ ಎಂಬುದು ಇತಿಹಾಸದಿಂದ ಸಾಬೀತಾಗಿದೆ. ಡಿಜಿಟಲ್ ರೂಪಾಂತರವು ಭಾರತದ ಆರ್ಥಿಕತೆಗೆ ಹೊಸ ತಾಂತ್ರಿಕ ಉದ್ಯೋಗಗಳನ್ನು ಸೇರಿಸುತ್ತದೆ. ನಾವೀನ್ಯತೆ ಉಂಟಾದಾಗಲೆಲ್ಲ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಎಐ ಯುಗದಲ್ಲೂ ಇದೇ ಸತ್ಯ ಮುಂದುವರಿಯಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಐ ತಂತ್ರಜ್ಞಾನದ ಬಗ್ಗೆ ಮೋದಿ ಮಾತು:
ಕೌಶಲ್ಯ ವೃದ್ಧಿಗೆ ಒತ್ತು
ಎಐ-ಚಾಲಿತ ಭವಿಷ್ಯಕ್ಕಾಗಿ ಭಾರತೀಯ ಕಾರ್ಯಪಡೆಯನ್ನು ಸಿದ್ಧಪಡಿಸಲು ಸರ್ಕಾರವು 'ಕೌಶಲ್ಯ' (Skilling) ಮತ್ತು 'ಮರು-ಕೌಶಲ್ಯ'ಕ್ಕೆ (Re-skilling) ಹೆಚ್ಚಿನ ಒತ್ತು ನೀಡುತ್ತಿದೆ. "ನಾವು ಇದನ್ನು ಭವಿಷ್ಯದ ಸಮಸ್ಯೆಯೆಂದು ನೋಡದೆ, ಇಂದಿನ ತುರ್ತು ಅಗತ್ಯವೆಂದು ಪರಿಗಣಿಸಿ ವಿಶ್ವದ ಅತಿದೊಡ್ಡ ಕೌಶಲ್ಯ ಉಪಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಎಐ ಅನ್ನು ನಾನು ನಮ್ಮ ಸಾಮರ್ಥ್ಯವನ್ನು ವೃದ್ಧಿಸುವ ಒಂದು ಶಕ್ತಿಯಾಗಿ (Force-multiplier) ನೋಡುತ್ತೇನೆ" ಎಂದು ಮೋದಿ ತಿಳಿಸಿದ್ದಾರೆ.
ಅಡುಗೆ ಮನೆಯ ಕೆಲಸ ಬಿಟ್ಟು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ಮಹಿಳೆ; ಗೃಹಿಣಿಯ ದೇಶಭಕ್ತಿಗೆ ನೆಟ್ಟಿಗರು ಫಿದಾ
ಎಐ ಕ್ಷೇತ್ರದಲ್ಲಿ ಭಾರತದ ಸಾರ್ವಭೌಮತ್ವ
ಆತ್ಮನಿರ್ಭರ ಭಾರತದ ಕನಸಿನ ಭಾಗವಾಗಿ, ಭಾರತವು ಕೇವಲ ತಂತ್ರಜ್ಞಾನವನ್ನು ಬಳಸುವ ದೇಶವಾಗದೆ, ಅದನ್ನು ಸೃಷ್ಟಿಸುವ ದೇಶವಾಗಬೇಕು ಎಂಬುದು ಪ್ರಧಾನಿ ಅವರ ಆಶಯ. ಅವರ ದೃಷ್ಟಿಕೋನವು ಮೂರು ಸ್ತಂಭಗಳ ಮೇಲೆ ನಿಂತಿದೆ:
- ಸಾರ್ವಭೌಮತ್ವ (Sovereignty)
- ಅಂತರ್ಗತತೆ (Inclusivity)
- ನಾವೀನ್ಯತೆ (Innovation)
"ಭಾರತವು ಜಾಗತಿಕವಾಗಿ ಅಗ್ರ ಮೂರು ಎಐ ಸೂಪರ್ ಪವರ್ ರಾಷ್ಟ್ರಗಳಲ್ಲಿ ಒಂದಾಗಬೇಕು. ನಮ್ಮ ಎಐ ಮಾದರಿಗಳು ಪ್ರಪಂಚದಾದ್ಯಂತ ಬಿಲಿಯನ್ಗಟ್ಟಲೆ ಜನರಿಗೆ ಅವರ ಸ್ಥಳೀಯ ಭಾಷೆಗಳಲ್ಲಿ ಸೇವೆ ನೀಡಬೇಕು. ಭಾರತದ ಎಐ ಸ್ಟಾರ್ಟ್‌ಅಪ್‌ಗಳು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲಿವೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ʼʼಎಐ ತಂತ್ರಜ್ಞಾನವು ಭಾರತೀಯರ ಜೀವನೋಪಾಯಕ್ಕೆ ಭೀತಿಯಾಗದೆ, ಅವರ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುವ ಸಾಧನವಾಗಿ ಕಾರ್ಯನಿರ್ವಹಿಸಲಿದೆʼʼ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.