ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೋಯಿಂಗ್ 787 ಫ್ಲೀಟ್‌ನ ಇಂಧನ ನಿಯಂತ್ರಣ ಸ್ವಿಚ್‌ಗಳ ಪರಿಶೀಲನೆ ಪ್ರಾರಂಭಿಸಿದ ಏರ್ ಇಂಡಿಯಾ

Air India begins inspection: ಏರ್ ಇಂಡಿಯಾ ಬೋಯಿಂಗ್ 787 ಫ್ಲೀಟ್‌ನ ಎಲ್ಲ ವಿಮಾನಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್‌ಗಳ ಪರಿಶೀಲನೆಯನ್ನು ಆರಂಭಿಸಿದೆ. ಡ್ರೀಂಲೈನರ್‌ನಲ್ಲಿ ಸ್ವಿಚ್ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ವಿಮಾನಯಾನ ಸಂಸ್ಥೆಯು ಪ್ರಸ್ತುತ 33 ಬೋಯಿಂಗ್ 787 ಡ್ರೀಮ್‌ಲೈನರ್‌ಗಳನ್ನು ನಿರ್ವಹಿಸುತ್ತಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಫೆ. 3: ಲಂಡನ್ ಹೀಥ್ರೋ–ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಡ್ರೀಂಲೈನರ್‌ ವಿಮಾನದ ಸ್ವಿಚ್ ಕಾರ್ಯನಿರ್ವಹಣೆಯಲ್ಲಿ ದೋಷ ಕಂಡುಬಂದ ನಂತರ ಏರ್ ಇಂಡಿಯಾ ತನ್ನ ಬೋಯಿಂಗ್ 787 ವಿಮಾನಗಳ ಸಂಪೂರ್ಣ ಫ್ಲೀಟ್‌ನಲ್ಲಿನ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಪರಿಶೀಲಿಸಲು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನಯಾನ ಸಂಸ್ಥೆಯು ಪ್ರಸ್ತುತ 33 ಬೋಯಿಂಗ್ 787 ಡ್ರೀಮ್‌ಲೈನರ್‌ಗಳನ್ನು ನಿರ್ವಹಿಸುತ್ತಿದೆ. ಘಟನೆಯ ನಂತರ, ಏರ್ ಇಂಡಿಯಾದ ವಿಮಾನ ಕಾರ್ಯಾಚರಣೆಗಳ ಹಿರಿಯ ಉಪಾಧ್ಯಕ್ಷ ಮನೀಶ್ ಉಪ್ಪಲ್, 787 ಪೈಲಟ್‌ಗಳಿಗೆ ಇಂಧನ ನಿಯಂತ್ರಣ ಸ್ವಿಚ್‌ಗಳ ಮರುಪರಿಶೀಲನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಬಿ 787 ವಿಮಾನಗಳಲ್ಲಿ ಒಂದರಲ್ಲಿ ದೋಷ ಪತ್ತೆಯಾದ ನಂತರ, ವಿಮಾನಯಾನ ಸಂಸ್ಥೆಯ ಎಂಜಿನಿಯರಿಂಗ್ ತಂಡವು ಈ ಸಮಸ್ಯೆಯನ್ನು ವಿಮಾನ ತಯಾರಕ ಬೋಯಿಂಗ್‌ಗೆ ಆದ್ಯತೆಯ ಮೌಲ್ಯಮಾಪನಕ್ಕಾಗಿ ವರ್ಗಾಯಿಸಿದೆ ಎಂದು ಉಪ್ಪಲ್ ಹೇಳಿದರು.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗುವ ಮುನ್ನ ಎಡಕ್ಕೆ ವಾಲಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಬೋಯಿಂಗ್‌ನ ಪ್ರತಿಕ್ರಿಯೆಯನ್ನು ಕಾಯುತ್ತಿರುವ ಸಮಯದಲ್ಲಿ, ನಮ್ಮ ಎಂಜಿನಿಯರ್‌ಗಳು ಜಾಗರೂಕತೆಯಿಂದ ಇಂಧನ ನಿಯಂತ್ರಣ ಸ್ವಿಚ್ (FCS) ಲ್ಯಾಚ್‌ನ ಸಾಮಾನ್ಯ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಫ್ಲೀಟ್‌ ಮಟ್ಟದಲ್ಲಿ ಮುಂಜಾಗ್ರತಾ ಪುನರ್ ಪರಿಶೀಲನೆಯನ್ನು ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಉಪ್ಪಾಲ್ B787 ಪೈಲಟ್‌ಗಳಿಗೆ ಕಳುಹಿಸಿದ ಇ‑ಮೇಲ್‌ನಲ್ಲಿ, ಈ ಮರುಪರಿಶೀಲನೆ ನಡೆಸಲಾದ ವಿಮಾನದಲ್ಲಿ ಯಾವುದೇ ಸಮಸ್ಯೆಯ ಬಗ್ಗೆ ವರದಿ ಆಗಿಲ್ಲ ಎಂದು ಹೇಳಿದರು.

ಕಾರ್ಯಾಚರಣೆ ಸಮಯದಲ್ಲಿ ಕಂಡುಬಂದ ಯಾವುದೇ ದೋಷವನ್ನು ತಕ್ಷಣ ವರದಿ ಮಾಡಲು ಮತ್ತು ವಿಮಾನವನ್ನು ಸ್ವೀಕರಿಸುವ ಮೊದಲು ಎಲ್ಲ ಅಗತ್ಯ ಕ್ರಮಗಳು ಪೂರ್ಣಗೊಳ್ಳುವಂತೆ ನೋಡಿಕೊಳ್ಳಲು ಏರ್ ಇಂಡಿಯಾವು ಸಿಬ್ಬಂದಿಗೆ ಸೂಚಿಸಿದೆ.

ಕಳೆದ ವರ್ಷ ಅಹಮದಾಬಾದ್‌ನಲ್ಲಿ 260 ಜನರನ್ನು ಬಲಿ ತೆಗೆದುಕೊಂಡ ಬೋಯಿಂಗ್ 787-8 ವಿಮಾನದ ಭೀಕರ ಅಪಘಾತದ ನಂತರ ಏರ್ ಇಂಡಿಯಾ ಇಂಧನ ನಿಯಂತ್ರಣ ಸ್ವಿಚ್‌ಗಳ ಪರಿಶೀಲನೆ ನಡೆಸಿತ್ತು.

ಸೋಮವಾರ (ಫೆಬ್ರವರಿ 2) ಲಂಡನ್ ಹೀಥ್ರೂ ನಿಲ್ದಾಣದಿಂದ ಬೆಂಗಳೂರಿಗೆ ತಲುಪಿದ ಬೋಯಿಂಗ್ 787-8 ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಕಂಡುಬಂದಿದೆ ಎಂದು ಏರ್ ಇಂಡಿಯಾ ಪೈಲಟ್ ವರದಿ ಮಾಡಿದ್ದಾರೆ. ಇದರಿಂದಾಗಿ ವಿಮಾನಯಾನ ಸಂಸ್ಥೆಯು ವಿವರವಾದ ಪರಿಶೀಲನೆಗಾಗಿ ವಿಮಾನವನ್ನು ಲ್ಯಾಂಡಿಂಗ್ ಮಾಡಿತು. ವಿಮಾನವು ಭಾನುವಾರ ಲಂಡನ್‍ನ ಹೀಥ್ರೂದಿಂದ ಹೊರಟು ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ಇಳಿಯಿತು.

ಅಪ್ಪಾ ನಾನು ಬಾರಾಮತಿಗೆ ಹೋಗುತ್ತಿದ್ದೇನೆ; ವಿಮಾನ ಪತನಕ್ಕೂ ಮುನ್ನ ಫ್ಲೈಟ್‌ ಸಿಬ್ಬಂದಿ ತಂದೆಗೆ ಹೇಳಿದ್ದೇನು?

ಜೂನ್‌ನಲ್ಲಿ ನಡೆದ ಅಪಘಾತದ ನಂತರ ಇಂಧನ ನಿಯಂತ್ರಣ ಸ್ವಿಚ್ ಅನ್ನು ಮತ್ತೆ ಪರಿಶೀಲಿಸಲಾಗಿದೆ. ಪ್ರಾಥಮಿಕ ತನಿಖಾ ವರದಿಯಲ್ಲಿ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಇಂಧನ ಪೂರೈಕೆಯನ್ನು ಕಡಿತಗೊಳಿಸಲಾಗಿದೆ ಎಂದು ಗಮನಿಸಲಾಗಿದೆ.

ಏರ್ ಇಂಡಿಯಾ ಪ್ರಸ್ತುತ 33 ಬೋಯಿಂಗ್ 787 ವಿಮಾನಗಳ ಫ್ಲೀಟ್ ನಿರ್ವಹಿಸುತ್ತಿದೆ. ಇದರಲ್ಲಿ 26 ಲೆಗಸಿ ಬೋಯಿಂಗ್ 787-8 ಮತ್ತು 7 ಬೋಯಿಂಗ್ 787-9 ಸೇರಿವೆ. 787-9 ಫ್ಲೀಟ್ ವಿಸ್ತಾರಾದಿಂದ ಸ್ವಾಧೀನಪಡಿಸಿಕೊಂಡ 6 ವಿಮಾನಗಳು ಮತ್ತು ಜನವರಿಯಲ್ಲಿ ಫ್ಲೀಟ್‌ಗೆ ಸೇರಿಸಲಾದ ಒಂದು ಕಸ್ಟಮ್-ನಿರ್ಮಿತ ಡ್ರೀಮ್‌ಲೈನರ್ ಅನ್ನು ಒಳಗೊಂಡಿದೆ.