ನವದೆಹಲಿ, ಡಿ.30: ಕೆಲ ದಿನಗಳ ಹಿಂದೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್(Air India Express pilot) ಕ್ಯಾಪ್ಟನ್ ವೀರೇಂದ್ರ ಸೆಜ್ವಾಲ್(Captain Virendra Sejwal) ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಳಿಕ, ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದಾರೆ.
"ತನಿಖೆಯ ಪ್ರಕ್ರಿಯೆಯಲ್ಲಿ, ಪ್ರಕರಣದ ದಾಖಲಾದ ನಂತರ, ಸಂಬಂಧಿತ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆರೋಪಿಯನ್ನು ವಿಚಾರಣೆಗೆ ಕರೆಸಲಾಯಿತು ಮತ್ತು ಆತನ ಬಂಧನವನ್ನು ಕೈಗೊಳ್ಳಲಾಯಿತು" ಎಂದು ಡಿಸಿಪಿ ವಿಚಿತ್ರವೀರ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಕ್ಯಾಪ್ಟನ್ ವೀರೇಂದ್ರ ಸೆಜ್ವಾಲ್ ತನಿಖೆಗೆ ಕೈಜೋಡಿಸಿದ್ದಾರೆ. ತನಿಖಾಧಿಕಾರಿ (ಐಒ) ಅವರ ಪ್ರತಿಕ್ರಿಯೆಯಿಂದ ತೃಪ್ತರಾಗದಿದ್ದರೆ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಬಹುದು. ಅರ್ಹತೆ ಮತ್ತು ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ತನಿಖೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ" ಎಂದು ದೆಹಲಿ ಪೊಲೀಸರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಪೈಲಟ್ ಸೆಜ್ವಾಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 126 (ತಪ್ಪಾದ ಸಂಯಮ) ಮತ್ತು 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಡಿ.19ರಂದು ಅಂಕಿತ್ ದಿವಾನ್ ಅವರು ತಮ್ಮ ಕುಟುಂಬದೊಂದಿಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ ವಿಮಾನ ಪ್ರಯಾಣಿಸಲು ಮುಂದಾಗಿದ್ದರು. ತಮ್ಮ ನಾಲ್ಕು ತಿಂಗಳ ಮಗು ಹಾಗೂ ಏಳು ವರ್ಷದ ಮಗಳೊಂದಿಗೆ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ದಿವಾನ್ ಕುಟುಂಬ ವಿಶೇಷ ಸಹಾಯದ ಅಗತ್ಯವಿರುವ ವ್ಯಕ್ತಿಗಳು ಬಳಸುವ ಭದ್ರತಾ ಮಾರ್ಗದ ದಾರಿಯಲ್ಲಿ ಸಾಗುತ್ತಿದ್ದರು. ಈ ಮಾರ್ಗದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್ ಕ್ಯಾಪ್ಟನ್ ವಿಜೇಂದರ್ ಸೆಜ್ವಾಲ್ ಸರದಿ ಉಲ್ಲಂಘಿಸಿದ ಕಾರಣ ಅಂಕಿತ್ ದಿವಾನ್ ಜತೆ ವಾಗ್ವಾದ ನಡೆಸಿ ಬಳಿಕ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ ಹೊಸ ವರ್ಷಾಚರಣೆಗೆ ಅಯೋಧ್ಯೆಯಲ್ಲಿ ಹೈ ಅಲರ್ಟ್; ಡ್ರೋನ್, ಸಿಸಿಟಿವಿ ನಿಯೋಜನೆ
ಪೈಲಟ್ ವೀರೇಂದ್ರ ಸೆಜ್ವಾಲ್ ಅವರು ಹಲ್ಲೆ ನಡೆಸಿದ್ದ ಘಟನೆಯನ್ನು ಅಂಕಿತ್ ದಿವಾನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. 'ನಾಲ್ಕು ತಿಂಗಳ ಮಗುವನ್ನು ಎತ್ತಿಕೊಂಡು ನಿಂತಿದ್ದೆವು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ತಮ್ಮ ಸಿಬ್ಬಂದಿ ಬಳಸುವ ಭದ್ರತಾ ತಪಾಸಣೆ ನಿಯಮಗಳನ್ನು ಅನುಸರಿಸುವಂತೆ ನಮಗೆ ಮಾರ್ಗದರ್ಶನ ನೀಡಿದ್ದರು. ವಿಮಾನ ನಿಲ್ದಾಣದ ಸಿಬ್ಬಂದಿ ನಮ್ಮ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಇದೇ ವೇಳೆ ವೀರೇಂದ್ರ ಅವರು ನನ್ನನ್ನು ‘ಅಶಿಕ್ಷಿತ’ ಎಂದು ನಿಂದಿಸಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಪೈಲಟ್ ತನ್ನ ಮೇಲೆ ಹಲ್ಲೆ ನಡೆಸಿದರು’ ಎಂದು ದಿವಾನ್ ವಿವರಿಸಿದ್ದರು.