ಪಾಟ್ನಾ, ಆ. 24: 164 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಹೊರಟಿದ್ದ ಏರ್ ಇಂಡಿಯಾ (Air India) ವಿಮಾನವು ಬಿಹಾರದ ಪಾಟ್ನಾದಲ್ಲಿಇಳಿಯುವಾಗ ಹಕ್ಕಿ ಡಿಕ್ಕಿ ಹೊಡೆದ ಘಟನೆ ಸೋಮವಾರ (ಆಗಸ್ಟ್ 24) ಬೆಳಗ್ಗೆ ನಡೆದಿದೆ. ಇದು ಬಿಹಾರದ ರಾಜಧಾನಿಯ ಜಯ ಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣದಲ್ಲಿ ಒಂದು ವಾರದಲ್ಲಿ ಸಂಭವಿಸಿದ ಎರಡನೇ ಘಟನೆಯಾಗಿದ್ದು, ಅದೃಷ್ವಶಾತ್ ಭಾರಿ ದುರಂತ ತಪ್ಪಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ತುರ್ತು ಲ್ಯಾಂಡಿಂಗ್ ಪ್ರೋಟೋಕಾಲ್ ಸಕ್ರಿಯಗೊಳಿಸಿ, ಮುನ್ನೆಚ್ಚರಿಕೆಯಾಗಿ ಅಗ್ನಿಶಾಮಕ ಸೇವೆಗಳನ್ನು ನಿಯೋಜಿಸಿದ್ದರು.
ಹಕ್ಕಿ ಡಿಕ್ಕಿ ಹೊಡೆದಿದ್ದರೂ AI 1741 ವಿಮಾನ ಬೆಳಗ್ಗೆ 7.43ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರನ್‌ವೇ ಸಮೀಪಿಸುತ್ತಿರುವಾಗ ವಿಮಾನದ ಬಲ ಟರ್ಬೈನ್‌ಗೆ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ಪೈಲಟ್ ವರದಿ ಮಾಡಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಲ್ಯಾಂಡಿಂಗ್ ನಂತರ ಪರಿಶೀಲನೆ ನಡೆಸಿದಾಗ ಹಕ್ಕಿ ಡಿಕ್ಕಿ ಹೊಡೆದಿರುವುದು ದೃಢಪಟ್ಟಿತು. ಆದರೆ ಎಂಜಿನ್‌ಗೆ ಯಾವುದೇ ಹಾನಿ ಕಂಡುಬಂದಿಲ್ಲ.
ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ:
ಕಡ್ಡಾಯ ತಪಾಸಣೆಯ ನಂತರ ವಿಮಾನವನ್ನು ದೆಹಲಿಗೆ ಹಿಂತಿರುಗಲು ಅನುಮತಿ ನೀಡಲಾಯಿತು. ಹೀಗಾಗಿ 160 ಪ್ರಯಾಣಿಕರನ್ನು ಹೊತ್ತ ಮತ್ತೊಂದು AI 1852 ವಿಮಾನವು 79 ನಿಮಿಷಗಳ ಕಾಲ ವಿಳಂಬವಾಯಿತು. ಬೆಳಗ್ಗೆ 8.45ರ ಬದಲಾಗಿ ಬೆಳಗ್ಗೆ 10.09 ಕ್ಕೆ ಹೊರಟಿತು.
ಏರ್ ಇಂಡಿಯಾ ವಿಮಾನ ಟರ್ಬುಲೆನ್ಸ್‌ಗೆ ಕಾರಣ ಪತ್ತೆ: ಮಾದಕ ದ್ರವ್ಯ ಸೇವಿಸಿದ್ದ ಪೈಲಟ್
ರಾಷ್ಟ್ರೀಯ ಜನತಾ ದಳದ (RJD) ರಾಜ್ಯಸಭಾ ಸದಸ್ಯ ಮನೋಜ್ ಝಾ AI 1852 ವಿಮಾನದಲ್ಲಿ ಪ್ರಯಾಣಿಸಬೇಕಾಗಿತ್ತು. ಬಳಿಕ ಅವರು ದೆಹಲಿಯ ಪ್ರಯಾಣವನ್ನು ಏರ್ ಇಂಡಿಯಾದ ಮಧ್ಯಾಹ್ನದ ವಿಮಾನಕ್ಕೆ (AI 2524) ರೀಶೆಡ್ಯೂಲ್ ಮಾಡಿಕೊಂಡರು.
ವಿಮಾನ ನಿಲ್ದಾಣದ ಸುತ್ತಮುತ್ತ ಹೆಚ್ಚುತ್ತಿರುವ ಹಕ್ಕಿ ಮತ್ತು ಪ್ರಾಣಿಗಳ ಚಟುವಟಿಕೆಯ ಬಗ್ಗೆ ಕಳವಳಗಳ ನಡುವೆ ಈ ಘಟನೆ ಸಂಭವಿಸಿದೆ. ಭಾನುವಾರ ವಿಮಾನ ಕಾರ್ಯಾಚರಣೆ ಆರಂಭವಾಗುವ ಮುನ್ನ ನಡೆದ ವಾಡಿಕೆಯ ತಪಾಸಣೆಯ ವೇಳೆ ರನ್‌ವೇಯಲ್ಲಿ ಸುಮಾರು 1.5 ಕೆಜಿ ತೂಕದ ಬಾವಲಿಯ ಅವಶೇಷಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಅದು ಯಾವುದೇ ವಿಮಾನಕ್ಕೆ ಡಿಕ್ಕಿ ಹೊಡೆದ ಬಗ್ಗೆ ವರದಿಯಾಗಿಲ್ಲ.
ಆಗಸ್ಟ್ 17ರಂದು ಏರ್ ಇಂಡಿಯಾ ದೆಹಲಿ-ಪಾಟ್ನಾ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಎರಡು ದಿನಗಳ ಕಾಲ ಪರಿಶೀಲನೆ ನಡೆಸಲಾಗಿತ್ತು. ವಿಮಾನವನ್ನು ದುರಸ್ತಿ ಮಾಡಲು ದೆಹಲಿಯಿಂದ ನಿರ್ವಹಣಾ ಎಂಜಿನಿಯರ್‌ಗಳನ್ನು ಕರೆಸಲಾಯಿತು. ಪರಿಶೀಲನೆ ಮತ್ತು ಅನುಮೋದನೆಯ ನಂತರ ಕಾರ್ಯಾಚರಣೆಗೆ ಅನುಮತಿ ನೀಡಲಾಯಿತು.
ಪಕ್ಷಿಗಳ ಹಾರಾಟ ನಿರ್ಬಂಧಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (AAI) ಬಂದೂಕುಗಳು ಮತ್ತು ಪಟಾಕಿಗಳನ್ನು ಹೊಂದಿರುವ ಸಿಬ್ಬಂದಿಯನ್ನು ನಿಯೋಜಿಸಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಫುಲ್ವಾರಿಶರೀಫ್ ಪ್ರದೇಶದಲ್ಲಿರುವ ಮಾಂಸದ ಅಂಗಡಿಗಳು ದೊಡ್ಡ ಸವಾಲಾಗಿದ್ದು, ಇವು ಪಕ್ಷಿಗಳನ್ನು ಆಕರ್ಷಿಸುವ ಮೂಲಕ ನಿರಂತರ ಸುರಕ್ಷತಾ ಅಪಾಯವನ್ನು ಉಂಟುಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.