ಕೋಲ್ಕತ್ತಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (Bomb Threat) (ನವೆಂಬರ್ 11) ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India Flight) ಹೈಜಾಕ್ ಬೆದರಿಕೆ ಸಂದೇಶ ಪತ್ತೆಯಾಗಿದೆ. ಟೇಕ್-ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ವಿಮಾನದ ಶೌಚಾಲಯದ ಮಿರರ್ನಲ್ಲಿ ಬೆದರಿಕೆ ಬರಹ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ವಿಮಾನದಲ್ಲಿ ಕೈಬರಹದ ಸಂದೇಶ ಕಂಡುಬಂದಿದೆ. ಇದನ್ನು ಗಮನಿಸಿದ ಪೈಲಟ್ ತಕ್ಷಣವೇ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 10:20ಕ್ಕೆ ಕೋಲ್ಕತ್ತಾದಿಂದ ಮುಂಬೈಗೆ ಹೊರಡಲಿದ್ದ ಏರ್ ಇಂಡಿಯಾ (AI 2772 / AI 772) ವಿಮಾನದ ಶೌಚಾಲಯದಲ್ಲಿ "ಬೆಳಗ್ಗೆ 11:10ಕ್ಕೆ ವಿಮಾನವನ್ನು ಹೈಜಾಕ್ ಮಾಡಲಾಗುವುದು" ಎಂಬ ಬೆದರಿಕೆ ಸಂದೇಶ ಪತ್ತೆಯಾಗಿದೆ. ಲಿಪ್ಸ್ಟಿಕ್ನಿಂದ ಕನ್ನಡಿಯ ಮೇಲೆ ಈ ಬರಹ ಬರೆಯಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ವಿಮಾನದ ಸಿಬ್ಬಂದಿ ಈ ಸಂದೇಶವನ್ನು ಗಮನಿಸಿದ ತಕ್ಷಣ ಪೈಲಟ್ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ (ATC) ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನವನ್ನು ಪ್ರತ್ಯೇಕ ಪ್ರದೇಶಕ್ಕೆ (Isolation Bay) ಸ್ಥಳಾಂತರಿಸಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
ಬೆದರಿಕೆ ಸಂದೇಶದ ಮಾಹಿತಿ ಸಿಕ್ಕ ತಕ್ಷಣ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಕಾರ್ಯಪ್ರವೃತ್ತರಾದರು . ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಸಾಮಾನ್ಯ ಪಾರ್ಕಿಂಗ್ ಸ್ಥಳದಿಂದ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಿ ತಪಾಸಣೆಗೆ ಸಿದ್ಧತೆ ನಡೆಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೆಲ ದಿನಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಅಪಹರಣದ ಬೆದರಿಕೆ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಬೆಂಗಳೂರಿಗೇ ವಾಪಸ್ ತಂದು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ಈ ಘಟನೆ ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ತನಿಖೆಯ ನಂತರ ಇದೊಂದು ಹುಸಿ ಬೆದರಿಕೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Bomb threat: ದೇಶಾದ್ಯಂತ ಬಾಂಬ್ ಬೆದರಿಕೆ ಹಾಕಿ ಮೈಸೂರಿನಲ್ಲಿ ಕುಳಿತಿದ್ದ ಆರೋಪಿ ಆರೆಸ್ಟ್
178 ಪ್ರಯಾಣಿಕರಿದ್ದ ಇಂಡಿಗೋ ವಿಮಾನ (6E 451) ಸಂಜೆ 5:50 ಕ್ಕೆ ಬೆಂಗಳೂರಿನಿಂದ ಟೇಕ್ ಆಫ್ ಆಗಿತ್ತು. ಹಾರಾಟ ಆರಂಭವಾದ 30 ನಿಮಿಷಗಳ ನಂತರ ಶೌಚಾಲಯದಲ್ಲಿ ಕೈಬರಹದ ಚೀಟಿಯೊಂದು ಪತ್ತೆಯಾಯಿತು. ಅದರಲ್ಲಿ "ಈ ವಿಮಾನವು ಸರಿಯಾಗಿ ಸಂಜೆ 6:30 ಕ್ಕೆ ಅಪಹರಣಕ್ಕೊಳಗಾಗಲಿದೆ, ನಿರ್ಲಕ್ಷಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಬರೆಯಲಾಗಿತ್ತು.