ನವದೆಹಲಿ, ಅ. 6: ಭಾರತೀಯ ವಾಯುಪಡೆಯ (Indian Air Force) ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಷಲ್ (Air Marshal) ಆಶುತೋಷ್ ದೀಕ್ಷಿತ್ (Ashutosh Dixit) ಅವರನ್ನು ನೇಮಕ ಮಾಡಲಾಗಿದೆ. ಅವರು ಅಕ್ಟೋಬರ್ 31ರಂದು ಏರ್ ಚೀಫ್ ಮಾರ್ಷಲ್ ಆಗಿ ಅಧಿಕಾರ ಸ್ವೀಕರಿಸಲಿದ್ದು, 2028ರ ಡಿಸೆಂಬರ್ 31ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಈ ವರ್ಷದ ಜುಲೈ 1ರಂದು ವಾಯುಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದ ಆಶುತೋಷ್ ದೀಕ್ಷಿತ್ ಸುಮಾರು ನಾಲ್ಕು ದಶಕಗಳ ಸುದೀರ್ಘ ಸೇವಾ ಅನುಭವ ಹೊಂದಿದ್ದಾರೆ.
1986ರ ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಫೈಟರ್ ವಿಭಾಗಕ್ಕೆ ನಿಯೋಜಿತರಾದ ಅವರು, ಫೈಟರ್ ಪೈಲಟ್ ಹಾಗೂ ಎಕ್ಸ್‌ಪೆರಿಮೆಂಟಲ್ ಟೆಸ್ಟ್ ಪೈಲಟ್ ಆಗಿ ಸೇವೆ ಸಲ್ಲಿಸಿದ್ದಾರೆ.
3,500ಕ್ಕೂ ಹೆಚ್ಚು ಗಂಟೆಗಳ ಹಾರಾಟ ಅನುಭವ
ದೀಕ್ಷಿತ್ ಮಿರಾಜ್-2000, ಜಾಗ್ವಾರ್, ವಿವಿಧ ಮಿಗ್ ಮಾದರಿಗಳು, ತೇಜಸ್, ಹಾಕ್, ಕಿರಣ್, ಎಎನ್-32 ಮತ್ತು ಐಎಲ್-78 ಸೇರಿ ಹಲವು ವಿಮಾನಗಳಲ್ಲಿ 3,500ಕ್ಕೂ ಹೆಚ್ಚು ಗಂಟೆಗಳ ಹಾರಾಟ ಅನುಭವ ಹೊಂದಿದ್ದಾರೆ. ಅವರು ಅರ್ಹ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಹಾಗೂ ಎಕ್ಸ್‌ಪೆರಿಮೆಂಟಲ್ ಟೆಸ್ಟ್ ಪೈಲಟ್ ಆಗಿದ್ದಾರೆ.
ತಮ್ಮ ವೃತ್ತಿಜೀವನದ ಆರಂಭದಲ್ಲಿ ಏರ್ ಫೋರ್ಸ್ ಟೆಸ್ಟ್ ಪೈಲಟ್ಸ್ ಸ್ಕೂಲ್‌ನಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ ಅವರು, ನಂತರ ಫೈಟರ್ ಸ್ಕ್ವಾಡ್ರನ್‌ನ ಕಮಾಂಡ್ ವಹಿಸಿದ್ದರು. 2003ರ ಡಿಸೆಂಬರ್‌ನಲ್ಲಿ ಮಿರಾಜ್-2000 ವಿಮಾನಗಳಿಗೆ ಮರುಸಜ್ಜುಗೊಳ್ಳುತ್ತಿದ್ದ ಫೈಟರ್ ಸ್ಕ್ವಾಡ್ರನ್‌ನ ಜವಾಬ್ದಾರಿ ವಹಿಸಿಕೊಂಡರು. ಫ್ರಾನ್ಸ್‌ನಿಂದ ಭಾರತಕ್ಕೆ 10 ಹೊಸ ಮಿರಾಜ್-2000 ವಿಮಾನಗಳನ್ನು ತರಿಸುವ ಪ್ರಕ್ರಿಯೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಯುದ್ಧ ವಿಮಾನಗಳ ಮೌಲ್ಯಮಾಪನದಲ್ಲೂ ಪ್ರಮುಖ ಪಾತ್ರ
ದೀಕ್ಷಿತ್ ಫ್ಲೈಟ್ ಟೆಸ್ಟ್ ಸ್ಕ್ವಾಡ್ರನ್‌ನಲ್ಲಿ ಸೇವೆ ಸಲ್ಲಿಸುವ ವೇಳೆ ಜಾಗ್ವಾರ್ ಮತ್ತು ಮಿಗ್-27 ವಿಮಾನಗಳ ಸ್ವದೇಶಿ ಅಪ್‌ಗ್ರೇಡ್ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದ ಈ ವಿಮಾನಗಳ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸಲು ನೆರವಾಯಿತು. ಮಧ್ಯಮ ಬಹುಪಾತ್ರ ಯುದ್ಧ ವಿಮಾನಗಳ MMRCA ಯೋಜನೆಯಡಿ ನಡೆದ ವಿಮಾನಗಳ ತಾಂತ್ರಿಕ ಮೌಲ್ಯಮಾಪನ ಮತ್ತು ಕ್ಷೇತ್ರ ಪರೀಕ್ಷೆಗಳಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆರು ಸ್ಪರ್ಧಾತ್ಮಕ ಯುದ್ಧ ವಿಮಾನಗಳ ಕಾರ್ಯಕ್ಷಮತೆ, ರಡಾರ್, ಎಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆ ಹಾಗೂ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಕ್ರಿಯೆಯನ್ನು ಅವರು ಮುನ್ನಡೆಸಿದ್ದರು.
ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ
ದೀಕ್ಷಿತ್ ಪಶ್ಚಿಮ ವಲಯದಲ್ಲಿನ ಮುಂಚೂಣಿ ಫೈಟರ್ ಬೇಸ್ ಹಾಗೂ ದಕ್ಷಿಣ ವಲಯದ ಫೈಟರ್ ತರಬೇತಿ ಕೇಂದ್ರದ ಕಮಾಂಡ್ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ದಕ್ಷಿಣ ವಾಯು ಕಮಾಂಡ್‌ನ ಏರ್ ಡಿಫೆನ್ಸ್ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿರುವ ಅವರು, ಏರ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಪ್ರಾಜೆಕ್ಟ್ಸ್, ಪ್ಲಾನ್ಸ್ ವಿಭಾಗಗಳ ಸಹಾಯಕ ಏರ್ ಸ್ಟಾಫ್ ಮುಖ್ಯಸ್ಥ ಹಾಗೂ ಡೆಪ್ಯುಟಿ ಚೀಫ್ ಆಫ್ ದಿ ಏರ್ ಸ್ಟಾಫ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನದಲ್ಲಿ ಕಾಶ್ಮೀರಿ-ಲಡಾಖಿ ಭೋಜನ
ವಾಯುಪಡೆಯ ಉಪ ಮುಖ್ಯಸ್ಥರಾಗುವ ಮೊದಲು ಅವರು ಸೆಂಟ್ರಲ್ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದರು. ಬಳಿಕ ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ ಅಧ್ಯಕ್ಷರ ಅಡಿಯಲ್ಲಿ ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಆಗಿ ಸೇವೆ ಸಲ್ಲಿಸಿದರು. ಈ ತ್ರಿಸೇನಾ ಜವಾಬ್ದಾರಿಯಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಡುವಿನ ಜಂಟಿ ಕಾರ್ಯಾಚರಣೆ ಹಾಗೂ ಸಮನ್ವಯವನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಈ ಅವಧಿಯಲ್ಲಿ ಹಲವು ಜಂಟಿ ಡಾಕ್ಟ್ರಿನ್‌ಗಳು ಮತ್ತು ಆದೇಶಗಳು ಜಾರಿಗೆ ಬಂದವು.
ಪ್ರಮುಖ ಕಾರ್ಯಾಚರಣೆಗಳಲ್ಲಿ ಅನುಭವ
ಆಶುತೋಷ್ ದೀಕ್ಷಿತ್ ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್, ಕೋಪ್ ಇಂಡಿಯಾ ಮತ್ತು ಆಪರೇಷನ್ ಸಿಂದೂರ್ ಸೇರಿ ಹಲವು ಪ್ರಮುಖ ಕಾರ್ಯಾಚರಣೆಗಳು ಮತ್ತು ಸೇನಾ ಅಭ್ಯಾಸಗಳೊಂದಿಗೆ ಸಂಬಂಧ ಹೊಂದಿದ್ದಾರೆ.
ಹಲವು ಪ್ರತಿಷ್ಠಿತ ಪ್ರಶಸ್ತಿಗಳು
ಸುದೀರ್ಘ ಸೇವೆಗಾಗಿ ದೀಕ್ಷಿತ್ ಅವರಿಗೆ ಹಲವು ಪ್ರತಿಷ್ಠಿತ ಸೇನಾ ಗೌರವಗಳು ಲಭಿಸಿವೆ. 2006ರಲ್ಲಿ ವಾಯು ಸೇನಾ ಪದಕ, 2011ರಲ್ಲಿ ವಿಶಿಷ್ಟ ಸೇವಾ ಪದಕ, 2023ರಲ್ಲಿ ಅತಿ ವಿಶಿಷ್ಟ ಸೇವಾ ಪದಕ ಹಾಗೂ 2026ರಲ್ಲಿ ಪರಮ ವಿಶಿಷ್ಟ ಸೇವಾ ಪದಕ ನೀಡಲಾಗಿದೆ. ಅಕ್ಟೋಬರ್ 31ರಂದು ಅಧಿಕಾರ ವಹಿಸಿಕೊಂಡ ಬಳಿಕ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಭಾರತೀಯ ವಾಯುಪಡೆಯ ವೃತ್ತಿಪರ ಮುಖ್ಯಸ್ಥರಾಗಿ 2028ರ ಡಿಸೆಂಬರ್ 31ರವರೆಗೆ ಸೇವೆ ಸಲ್ಲಿಸಲಿದ್ದಾರೆ.