ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶುದ್ಧೀಕರಣ ಗದ್ದಲದ ಮಧ್ಯೆ ರಾಹುಲ್ ಗಾಂಧಿಗೆ ಬುದ್ಧಿ ಶುದ್ಧಿ ಯಜ್ಞ ಮಾಡಿದ ಬಿಜೆಪಿ; ಏನಿದು ಆಚರಣೆ? ಯಾಕಾಗಿ?

BJP Performs Buddhi Shuddhi Yagna: ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾವು ಉತ್ತರಾಖಂಡದ ಡೆಹ್ರಾಡೂನ್‌ನ ದೇವಸ್ಥಾನವೊಂದರಲ್ಲಿ ಬುದ್ಧಿ ಶುದ್ಧಿ ಯಜ್ಞವನ್ನು ಆಯೋಜಿಸಿದ್ದು, ಈ ಧಾರ್ಮಿಕ ಆಚರಣೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ಇರಿಸಲಾಗಿತ್ತು.

ಉತ್ತರಾಖಂಡದಲ್ಲಿ ನಡೆದ ಬುದ್ಧಿ ಶುದ್ಧಿ ಯಜ್ಞ

ಡೆಹ್ರಾಡೂನ್‌, ಸೆ. 2: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ರ‍್ಯಾಲಿಯ ನಂತರ ಉತ್ತರಾಖಂಡದ ಹಲ್ದ್ವಾನಿಯ ಮೈದಾನದಲ್ಲಿ ನಡೆದಿದ್ದ ಶುದ್ಧೀಕರಣ ಆಚರಣೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ವಿಚಾರವನ್ನೇ ಮುಂದಿಟ್ಟು ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಬಿಜೆಪಿಯು ರಾಹುಲ್ ಗಾಂಧಿ (Rahul Gandhi) ಅವರ ಬುದ್ಧಿ ಶುದ್ಧಿ ಯಜ್ಞ ಆಚರಿಸುವ ಮೂಲಕ ತಿರುಗೇಟು ನೀಡಿದೆ.

ಬಿಜೆಪಿಯ ಪರಿಶಿಷ್ಟ ಜಾತಿ (SC) ಮೋರ್ಚಾವು ಉತ್ತರಾಖಂಡದ ಡೆಹ್ರಾಡೂನ್‌ನ ದೇವಸ್ಥಾನವೊಂದರಲ್ಲಿ ಬುದ್ಧಿ ಶುದ್ಧಿ ಯಜ್ಞವನ್ನು ಆಯೋಜಿಸಿತ್ತು. ಈ ಧಾರ್ಮಿಕ ಆಚರಣೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ಇರಿಸಲಾಗಿತ್ತು. ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರಿಗೆ ಸದ್ಬುದ್ಧಿ ಬರಲಿ ಹಾಗೂ ಸುಳ್ಳು ಹರಡುವುದನ್ನು ನಿಲ್ಲಿಸಲಿ ಎಂಬ ಉದ್ದೇಶದಿಂದ ಈ ಯಜ್ಞವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಬಿಜೆಪಿ ತಿಳಿಸಿದೆ.

ಉತ್ತರಾಖಂಡದಲ್ಲಿ ನಡೆದ ಬುದ್ಧಿ ಶುದ್ಧಿ ಯಜ್ಞ:



ಹಲ್ದ್ವಾನಿಯ ಶುದ್ಧೀಕರಣ ಆಚರಣೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ (SC/ST Act) ಎಫ್‌ಐಆರ್ ದಾಖಲಿಸುವಂತೆ ಕೋರಿ ಉತ್ತರಾಖಂಡದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ ಮರುದಿನವೇ ಬಿಜೆಪಿಯು ಈ ಬುದ್ಧಿ ಶುದ್ಧಿ ಯಜ್ಞ ನಡೆಸಿದೆ. ಜತೆಗೆ ಶುದ್ಧೀಕರಣ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಿಂಪಡೆಯಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಉತ್ತರಾಖಂಡ ಸಚಿವಾಲಯದ ಎದುರು ಪ್ರತಿಭಟನೆ ನಡೆಸಿದ್ದಾರೆ.

ಮೋದಿ ನೇತೃತ್ವದ ದುರಾಡಳಿತಕ್ಕೆ 2029ರಲ್ಲಿ ಅಂತ್ಯ; ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ

ಏನಿದು ವಿವಾದ?

ಆಗಸ್ಟ್ 11ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಶುದ್ಧೀಕರಣ ಯಜ್ಞವನ್ನು ನಡೆಸಲಾಗಿದೆ ಎಂಬ ಆರೋಪದೊಂದಿಗೆ ಈ ವಿವಾದ ಪ್ರಾರಂಭವಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಮೂರು ದಿನಗಳ ನಂತರ ಈ ಆಚರಣೆ ನಡೆದಿತ್ತು. ಖರ್ಗೆ ದಲಿತ ಸಮುದಾಯದವಾರಿಗುವುದರಿಂದ ಈ ಶುದ್ಧೀಕರಣ ಆಚರಣೆ ನಡೆದಿದೆ. ಇದು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಯನ್ನು ಉತ್ತೇಜಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಆದರೆ ಬಿಜೆಪಿಯು ಇಂತಹ ಯಾವುದೇ ಆಚರಣೆಯನ್ನು ಮಾಡಲಾಗಿಲ್ಲ ಎಂದು ಹೇಳಿದೆ. ಕಾಂಗ್ರೆಸ್ ರ‍್ಯಾಲಿ ಸ್ಥಳವು ಕಸದಿಂದ ತುಂಬಿ ಹೋಗಿದ್ದರಿಂದ ಮೈದಾನವನ್ನು ಸ್ವಚ್ಛಗೊಳಿಸಿ ಹವನ ನಡೆಸಲಾಯಿತು ಎಂದು ಅದು ವಾದಿಸಿದೆ. ವಾಲ್ಮೀಕಿ ಸಮುದಾಯದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದಕ್ಕೂ ಖರ್ಗೆ ಅವರ ಜಾತಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಆಗಸ್ಟ್ 29ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಶುದ್ಧೀಕರಣದ ಘಟನೆಯನ್ನು ಅಸ್ಪೃಶ್ಯತೆಯ ಕೃತ್ಯ ಮತ್ತು ಅಪರಾಧ ಎಂದು ಹೇಳಿದ್ದರು. ಅದಕ್ಕೆ ಕಾರಣರಾದವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು. ಬಿಜೆಪಿ-ಆರ್‌ಎಸ್‌ಎಸ್ ಅಸ್ಪೃಶ್ಯತೆಯ ಆಚರಣೆಯನ್ನು ಮುಂದುವರಿಸುತ್ತಿದೆ ಎಂದು ಆರೋಪಿಸಿದರು. ಈ ಘಟನೆಯು ದೇಶದಲ್ಲಿ ದಲಿತರ ಮೇಲಿನ ವರ್ತನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ರ‍್ಯಾಲಿಯ ಸ್ಥಳ ‘ಶುದ್ಧೀಕರಣʼ ನಾಚಿಕೆಗೇಡಿನ ಕೃತ್ಯ; ಸಿಎಂ ಡಿ.ಕೆ. ಶಿವಕುಮಾರ್ ಕಿಡಿ

ಇನ್ನು ವಾಲ್ಮೀಕಿ ಸಮುದಾಯದ ಸದಸ್ಯ ಮತ್ತು ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸದ ಪದಾಧಿಕಾರಿ ಅಮಿತ್ ಕುಮಾರ್ ನೀಡಿದ ದೂರಿನ ಮೇರೆಗೆ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಹುಲ್ ಗಾಂಧಿಯ ಹೇಳಿಕೆಗಳು, ಈ ಆಚರಣೆಗೆ ಜಾತಿವಾದಿ ತಿರುವು ನೀಡಿವೆ. ಅಲ್ಲದೆ, ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಕುಮಾರ್ ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರು ಸೇರಿ ಸಮಾಜದ ವಿವಿಧ ವರ್ಗಗಳ ಜನರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು ಎಂದು ಕುಮಾರ್ ಹೇಳಿದ್ದಾರೆ.