ಚೆನ್ನೈ, ಮೇ 4: ರಾಷ್ಟ್ರ ರಾಜಕೀಯದಲ್ಲೇ ತಮಿಳುನಾಡು ಹೊಸದೊಂದು ಇತಿಹಾಸ ಬರೆದಿದೆ. ಸದಾ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುತ್ತ ಬಂದಿರುವ ತಮಿಳುನಾಡಿನಲ್ಲಿ ಇದೀಗ ನೂತನ ರಾಜಿಕೀಯ ಅಧ್ಯಾಯ ಆರಂಭವಾಗಿದೆ. ಕಾಲಿವುಡ್‌ನ ಸೂಪರ್ ಸ್ಟಾರ್ ಆಗಿ ಮೆರೆದು ರಾಜಕೀಯ ಪ್ರವೇಶಿಸಿದ ವಿಜಯ್ (Vijay) ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. 2024ರಲ್ಲಿ ವಿಜಯ್ ಹುಟ್ಟು ಹಾಕಿದ ತಮಿಳಗ ವೆಟ್ರಿ ಕಳಗಂ (TVK) ತಮಿಳುನಾಡಿನಲ್ಲಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 234 ಕ್ಷೇತ್ರಗಳ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ 118.
ಎಲ್ಲರ ನಿರೀಕ್ಷೆ ತಲೆಕೆಳಗಾಗಿಸಿ ಟಿವಿಕೆ ತಮಿಳುನಾಡಿನಲ್ಲಿ ಸುನಾಮಿಯಾಗಿ ಬದಲಾಗಿದ್ದು, ಸರ್ಕಾರ ರಚನೆಯತ್ತ ಮುನ್ನಡೆಯುತ್ತಿದೆ. ಟಿವಿಕೆಯ ಈ ಅಭೂತಪೂರ್ವ ಗೆಲುವಿನ ಹಿಂದೆ ವಿಜಯ್ ಸ್ಟಾರ್ ಡಮ್ ಜತೆಗೆ ಪ್ರಣಾಳಿಕೆ, ಮತದಾರರಿಗೆ ನೀಡಿದ ಭರವಸೆ ಪ್ರಭಾವ ಬೀರಿದೆ. ಜನ ಸಾಮಾನ್ಯಗೆ ಘೋಷಿಸಿದ ಯೋಜನೆ ವಿಜಯ್ ಕೈ ಹಿಡಿದಿರುವುದು ಇದೀಗ ಸ್ಪಷ್ಟವಾಗಿದೆ.
ವಿಜಯ್ ಘೋಷಿಸಿದ ಪ್ರಣಾಳಿಕೆ:
ಟಿವಿಕೆ ಗೆಲುವಿಗೆ ಕಾರಣವಾಗಿದ್ದೇನು?
ವಿಜಯ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಕೊಡುಗೆಗಳೇ ಟಿವಿಕೆಯ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯದ ಪ್ರತಿ ಮಹಿಳೆಗೆ 2,500 ರುಪಾಯಿ ನಗದು, ನಿರುದ್ಯೋಗಿ ಪದವೀಧರರಿಗೆ 10,000 ರುಪಾಯಿ ಒದಗಿಸುವುದಾಗಿ ಟಿವಿಕೆ ಭರವಸೆ ನೀಡಿತ್ತು. ಅಲ್ಲದೆ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿರುವ ಕೃಷಿ ಸಾಲ ಮನ್ನಾ ಮತ್ತು ಕೃತಕ ಬುದ್ಧಿಮತ್ತೆ ಸಚಿವಾಲಯ ಸ್ಥಾಪಿಸುವುದಾಗಿ ವಿಜಯ್ ಹೇಳಿದ್ದರು. ಇದೆಲ್ಲ ಮತಗಳಾಗಿ ಪರಿವರ್ತನೆಯಾಗಿರುವುದು ಇದೀಗ ಸ್ಪಷ್ಟವಾಗಿದೆ.
ಟಿವಿಕೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ವಿಜಯ್, ʼʼತಮಿಳುನಾಡಿನ ಜನಪ್ರಿಯ ಕವಿ ತಿರುವಳ್ಳುವರ್ ಅವರ ತಮಿಳು ಪಠ್ಯ ʼತಿರುಕ್ಕುರಲ್ʼನ ತತ್ವ ಸೂಚಿಸಿರುವಂತಹ ಆರಂ (ಸದ್ಗುಣ), ಪೊರುಲ್ (ಸಂಪತ್ತು) ಮತ್ತು ಇನ್ಬಮ್ (ಸಂತೋಷ) ಇವುಗಳನ್ನು ಆಡಳಿತದಲ್ಲಿ ಜಾರಿಗೊಳಿಸಲಾಗುವುದುʼʼ ಎಂದಿದ್ದರು.
"ಟಿವಿಕೆ ಪ್ರಾಮಾಣಿಕ ಆಡಳಿತವನ್ನು ತನ್ನ ಸಿದ್ಧಾಂತವಾಗಿ ಅಳವಡಿಸಿಕೊಂಡಿದೆ. ನಮ್ಮ ಪಕ್ಷದ ಮೊದಲ ಚುನಾವಣಾ ಪ್ರಣಾಳಿಕೆಯೂ ಪ್ರಾಮಾಣಿಕತೆಯ ಭರವಸೆ. ನಾವು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರಂತೆ ಮತದಾರರ ದಾರಿ ತಪ್ಪಿಸುವುದಿಲ್ಲ. ಜನರಿಗೆ ಖಾಲಿ ಭರವಸೆ ತುಂಬಿದ ಆತುರದ ಪ್ರಣಾಳಿಕೆಯನ್ನು ನಾವು ಬಿಡುಗಡೆ ಮಾಡುತ್ತಿಲ್ಲ" ಎಂದು ವಿಜಯ್ ಹೇಳಿದ್ದರು.
ಮ್ಯಾಜಿಕ್ ಸಂಖ್ಯೆ ದಾಟಲು ವಿಫಲವಾದರೆ ಏನು ಮಾಡುತ್ತಾರೆ ನಟ ವಿಜಯ್?
ಜನಸಾಮಾನ್ಯರಿಗೆ ನೀಡಿದ ಭರವಸೆಗಳೇನು?
ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ವರ್ಷಕ್ಕೆ 6 ಉಚಿತ ಎಲ್‌ಪಿಜಿ ಸಿಲಿಂಡರ್, ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕ ರಾಜ್ಯ ಸರ್ಕಾರಿ ಇಲಾಖೆ ಮತ್ತು ವಿಶೇಷ ಮಹಿಳಾ ನ್ಯಾಯಾಲಯದ ಭರವಸೆಯನ್ನೂ ನೀಡಲಾಗಿತ್ತು. ಬಡ ಕುಟುಂಬದ ಪ್ರತಿ ವಧುವಿಗೆ 8 ಗ್ರಾಂನ ಚಿನ್ನದ ನಾಣ್ಯ ಮತ್ತು ರೇಷ್ಮೆ ಸೀರೆಯ ವಾಗ್ದಾನವನ್ನೂ ನೀಡಲಾಗಿತ್ತು. 12ನೇ ತರಗತಿಯವರೆಗಿನ ಹುಡುಗಿಯರ ಪೋಷಕರಿಗೆ ವರ್ಷಕ್ಕೆ 15,000 ರುಪಾಯಿ, ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರುಪಾಯಿವರೆಗೆ ಹಣಕಾಸಿನ ಭರವಸೆ ಒದಗಿಸಲಾಗಿತ್ತು.
12ನೇ ತರಗತಿಯಿಂದ ಪಿಎಚ್‌ಡಿ ಹಂತದವರೆಗಿನ ವಿದ್ಯಾರ್ಥಿಗಳಿಗೆ ಪಕ್ಷವು 20 ಲಕ್ಷ ರುಪಾಯಿವರೆಗೆ ಮೇಲಾಧಾರ ರಹಿತ ಸಾಲ ಮತ್ತು ತಮಿಳುನಾಡು ಸರ್ಕಾರದಲ್ಲಿ ಎಲ್ಲ ನೇಮಕಾತಿಗಳಿಗೆ 'ಪಾರದರ್ಶಕ' ಕಾಲಮಿತಿಯ ಭರವಸೆ ನೀಡಲಾಗಿತ್ತು. ಪದವೀಧರರಿಗೆ 4,000 ರುಪಾಯಿ ಮತ್ತು ಡಿಪ್ಲೊಮಾ ಪಡೆದವರಿಗೆ 2,500 ರುಪಾಯಿ ಮಾಸಿಕ ನಿರುದ್ಯೋಗ ಭತ್ಯೆ ಘೋಷಿಸಲಾಗಿತ್ತು.
ತಮಿಳುನಾಡು ರಾಜಕೀಯವನ್ನೇ ತಿದ್ದಿ ಬರೆದ ಟಿವಿಕೆ; ಚೊಚ್ಚಲ ಪ್ರಯತ್ನದಲ್ಲೇ ಸರ್ಕಾರ ರಚನೆಯತ್ತ ದಳಪತಿ ವಿಜಯ್
ಕೌಶಲ್ಯ ತರಬೇತಿ ಪಡೆಯುವ ಪದವೀಧರರಿಗೆ ತಿಂಗಳಿಗೆ 10,000 ರುಪಾಯಿ ಮತ್ತು ಐಟಿಐ ಡಿಪ್ಲೊಮಾ ಪಡೆದವರಿಗೆ 8,000 ರುಪಾಯಿ ನೀಡಲಾಗುವುದು ಎಂದು ಪಕ್ಷ ಹೇಳಿತ್ತು. ʼಸಿಎಂ ಪೀಪಲ್ ಸರ್ವಿಸ್ ಅಸೋಸಿಯೇಟ್ʼ ಯೋಜನೆಯ ಭಾಗವಾಗಿ ಗ್ರಾಮ ಮಟ್ಟದಲ್ಲಿ ಅರ್ಧ ಮಿಲಿಯನ್ ಯುವಕರಿಗೆ ಉದ್ಯೋಗ ನೀಡುವುದಾಗಿ ಪಕ್ಷ ಭರವಸೆ ನೀಡಿತ್ತು.