ಭುವನೇಶ್ವರ, ಡಿ. 17: ಸುಡಾನ್‌ನಲ್ಲಿ (Sudan) 45 ದಿನಗಳ ಕಾಲ ಒತ್ತೆಯಾಳಾಗಿದ್ದ ಒಡಿಶಾದ (Odisha) 36 ವರ್ಷದ ಆದರ್ಶ್ ಬೆಹೆರಾ ಬುಧವಾರ ಭಾರತಕ್ಕೆ ಮರಳಿದರು. ಅವರು ಮರಳಿದ್ದು ಕುಟುಂಬ ಹಾಗೂ ಆಪ್ತರಿಗೆ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಬೆಹೆರಾ ಅವರನ್ನು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದರು. ಬೆಹೆರಾ ಅವರ ಕಣ್ಮರೆ ಬಗ್ಗೆ ಮಾಹಿತಿ ಬಂದ ಕ್ಷಣದಿಂದಲೇ ರಾಜ್ಯ ಸರಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿತು ಎಂದು ಹೇಳಿದರು.
ಸುಡಾನ್‌ನಲ್ಲಿ ನಾಪತ್ತೆಯಾಗಿದ್ದ ಜಗತ್ಸಿಂಗ್‌ಪುರ ಜಿಲ್ಲೆಯ ಆದರ್ಶ್ ಬೆಹೆರಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿರುವುದು ಸಂತಸ ತಂದಿದೆ ಎಂದು ಸಿಎಂ ಮಾಝಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಾವು ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸುತ್ತಿದ್ದೆವು. ಭಾರತ ಸರ್ಕಾರದ ತ್ವರಿತ ಕ್ರಮಗಳು ಮತ್ತು ಅಂತಾರಾಷ್ಟ್ರೀಯ ಸಹಕಾರದ ಮೂಲಕ, ಆದರ್ಶ್ ಇಂದು ತನ್ನ ಕುಟುಂಬಕ್ಕೆ ಮರಳುತ್ತಿದ್ದಾರೆ ಎಂದು ಮಾಝಿ ಹರ್ಷ ವ್ಯಕ್ತಪಡಿಸಿದರು.
ಪಡೆದ 1 ಲಕ್ಷ ಸಾಲಕ್ಕೆ 74 ಲಕ್ಷ ರುಪಾಯಿ ಬಡ್ಡಿ; ಕಾಂಬೋಡಿಯಾಗೆ ತೆರಳಿ ಕಿಡ್ನಿ ಮಾರಿದ ಮಹಾರಾಷ್ಟ್ರ ರೈತ
ಈ ಯಶಸ್ವಿ ಕಾರ್ಯಾಚರಣೆಗಾಗಿ ವಿದೇಶಾಂಗ ಸಚಿವಾಲಯ ಮತ್ತು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅವರು ಧನ್ಯವಾದ ಅರ್ಪಿಸಿದರು. ಪ್ರತಿ ಒಡಿಶಾ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಕರ್ತವ್ಯ. ಅದು ರಾಜ್ಯದೊಳಗಿರಲಿ ಅಥವಾ ವಿದೇಶದಲ್ಲಿ ಇರಲಿ, ಎಲ್ಲರ ಸುರಕ್ಷತೆಯನ್ನು ಕಾಪಾಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಬಿಕ್ಕಟ್ಟಿನ ಸಮಯದಲ್ಲಿ, ನಾವು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಅವರು ಹೇಳಿದರು.
ಸುಡಾನ್‌ನ ಉತ್ತರ ಡಾರ್ಫರ್ ರಾಜ್ಯದ ಅಲ್-ಫಶೀರ್ ನಗರದಿಂದ ಬೆಹೆರಾ ನಾಪತ್ತೆಯಾಗಿದ್ದರು. ಭಾರತ ಸರ್ಕಾರವು ಅಂತಾರಾಷ್ಟ್ರೀಯ ಸಂವಾದಕರ ಸಹಾಯದಿಂದ ಅವರನ್ನು ಮರಳಿ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾಯಿತು.
ಬಿಡುಗಡೆಯಾದ ನಂತರ, ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಮೂರು ವರ್ಷದ ಮಗ ಸೇರಿದಂತೆ ಕುಟುಂಬವು ಬೆಹೆರಾ ಅವರನ್ನು ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಅವರು, ಇದು ನನಗೆ ಪುನರ್ಜನ್ಮ. ಸುಡಾನ್‌ನಲ್ಲಿ ಕ್ಷಿಪ್ರ ಬೆಂಬಲ ಪಡೆಗಳು (ಆರ್‌ಎಸ್‌ಎಫ್) ಮಿಲಿಟಿಯಾದಿಂದ ಅಪಹರಿಸಲ್ಪಟ್ಟ ನಂತರ ನಾನು ಜೀವಂತವಾಗಿರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಅವರು ನನ್ನನ್ನು ತುಂಬಾ ಹಿಂಸಿಸಿದರು. ಕೆಲವು ದಿನಗಳವರೆಗೆ ಆಹಾರವನ್ನು ನೀಡಲಿಲ್ಲ. ಜೈಲಿನಲ್ಲಿ ಬಂಧಿಸಿಟ್ಟರು. ಕಾಡಿನಲ್ಲಿ ನಡೆಯಬೇಕಾಯಿತು. ಅದೃಷ್ಟವಶಾತ್ ನನ್ನನ್ನು ಕೊಲ್ಲಲಿಲ್ಲ ಎಂದು ಅವರು ಹೇಳಿದರು.
ಜಗತ್ಸಿಂಗ್‌ಪುರ ಜಿಲ್ಲೆಯ ಕೊಟಕಾನಾ ಗ್ರಾಮದವರಾದ ಬೆಹೆರಾ, 2022ರಲ್ಲಿ ಅಂತರ್ಯುದ್ಧ ಪೀಡಿತ ಸುಡಾನ್‌ಗೆ ತೆರಳಿದ್ದರು. ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಪಹರಣಕ್ಕೊಳಗಾಗಿದ್ದರು.
ಸೆರೆಯಿಂದ ಬಿಡುಗಡೆಯಾದ ನಂತರ, ಬೆಹೆರಾ ಮಂಗಳವಾರ ತಡರಾತ್ರಿ ಅಬುಧಾಬಿಯಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿ ಬುಧವಾರ ಬೆಳಗ್ಗೆ ಭುವನೇಶ್ವರ ವಿಮಾನ ನಿಲ್ದಾಣ ತಲುಪಿದರು. ಜಗತ್ಸಿಂಗ್‌ಪುರ ಸಂಸದ ಬಿಭು ಪ್ರಸಾದ್ ತಾರೈ ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಬೆಹೆರಾ ಅವರ ಸುರಕ್ಷಿತ ಬಿಡುಗಡೆಗೆ ಮಧ್ಯಪ್ರವೇಶಿಸುವಂತೆ ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದ್ದರು ಎಂದು ಹೇಳಿದರು.