ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎರಡು, ಮೂರನೇ ಮಗುವಿಗೆ 25,000 ರುಪಾಯಿ ಪ್ರೋತ್ಸಾಹ ಧನ ಘೋಷಿಸಿದ ಆಂಧ್ರ ಪ್ರದೇಶ ಸಿಎಂ; ಜನಸಂಖ್ಯೆ ಹೆಚ್ಚಿಸಲು ಪ್ಲ್ಯಾನ್‌

Population policy in Andhra Pradesh: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಜನಸಂಖ್ಯೆ ಹೆಚ್ಚಿಸುವ ಸಲುವಾಗಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಕುಟುಂಬದಲ್ಲಿ ಎರಡನೇ ಅಥವಾ ಮೂರನೇ ಮಗು ಜನಿಸಿದಾಗ, ಪ್ರಸವ ಸಮಯದಲ್ಲಿ 25,000 ರೂಪಾಯಿ ನೆರವು ನೀಡಲಾಗುತ್ತದೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಆಂಧ್ರ ಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು (ಸಂಗ್ರಹ ಚಿತ್ರ)

ಅಮರಾವತಿ, ಮಾ. 6: ಎನ್. ಚಂದ್ರಬಾಬು ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವು (Andhra Pradesh government) ಜನಸಂಖ್ಯೆ ನಿರ್ವಹಣೆಗೆ ಸಂಬಂಧಿಸಿದ ಹೊಸ ನೀತಿಯನ್ನು ರಾಜ್ಯ ವಿಧಾನಸಭೆಯಲ್ಲಿ ಘೋಷಿಸಿದೆ. ಈ ಯೋಜನೆಯಡಿ ಮಕ್ಕಳ ಜನನವನ್ನು ಉತ್ತೇಜಿಸಲು ಆರ್ಥಿಕ ಪ್ರೋತ್ಸಾಹಧನ ನೀಡಲಾಗುತ್ತದೆ. ಕುಟುಂಬದಲ್ಲಿ ಎರಡನೇ ಅಥವಾ ಮೂರನೇ ಮಗು ಜನಿಸಿದಾಗ, ಪ್ರಸವ ಸಮಯದಲ್ಲಿ 25,000 ರುಪಾಯಿ ನೆರವು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (N. Chandrababu Naidu) ತಿಳಿಸಿದ್ದಾರೆ.

ಪ್ರಸ್ತುತ ಸುಮಾರು ಶೇ. 58ರಷ್ಟು ಕುಟುಂಬಗಳಲ್ಲಿ ಕೇವಲ ಒಂದು ಮಗು ಮಾತ್ರ ಇದೆ. ಸುಮಾರು 2.17 ಲಕ್ಷ ಕುಟುಂಬಗಳಲ್ಲಿ 2 ಮಕ್ಕಳು ಇದ್ದರೆ, ಸುಮಾರು 62 ಲಕ್ಷ ಕುಟುಂಬಗಳಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳು ಇದ್ದಾರೆ ಎಂದು ಸಿಎಂ ತಿಳಿಸಿದರು. ಇದಲ್ಲದೆ, ಸುಮಾರು 3 ಲಕ್ಷ ಕುಟುಂಬಗಳಲ್ಲಿ 2 ಮಕ್ಕಳ ಬದಲು ಕೇವಲ 1 ಮಗು ಮಾತ್ರ ಇದ್ದರೆ, ಇನ್ನೂ 3 ಲಕ್ಷ ಕುಟುಂಬಗಳಲ್ಲಿ 2 ಮಕ್ಕಳಿಗಿಂತ ಹೆಚ್ಚು ಮಕ್ಕಳು ಇದ್ದಾರೆ ಎಂದು ಅವರು ಹೇಳಿದರು.

ಜನಸಂಖ್ಯೆ ಹೆಚ್ಚಿಸಲು ಆಂಧ್ರ ಪ್ರದೇಶದಲ್ಲಿ ನೂತನ ಯೋಜನೆ:



ರಾಜ್ಯದ ಒಟ್ಟು ಜನನ ದರ (Total Fertility Rate - TFR) 1993ರಲ್ಲಿ 3.0 ಇದ್ದದ್ದು ಈಗ 1.5ಕ್ಕೆ ಇಳಿದಿದೆ ಎಂದು ತಿಳಿಸಿದರು. ಜನಸಂಖ್ಯೆಯ ಸಮತೋಲನವನ್ನು ಕಾಯ್ದುಕೊಳ್ಳಲು TFR 2.1 ಆಗಿರಬೇಕು ಎಂದು ಅವರು ಹೇಳಿದರು.

ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬೆಂಗಾವಲು ವಾಹನ ಅಪಘಾತ

ಕಡಿಮೆ ಜನನ ದರ ಮುಂದುವರಿದರೆ ಭವಿಷ್ಯದಲ್ಲಿ ಕಾರ್ಮಿಕರ ಕೊರತೆ ಮತ್ತು ದೀರ್ಘಕಾಲದ ಆರ್ಥಿಕ ಸವಾಲುಗಳು ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇದೇ ರೀತಿಯ ಸಮಸ್ಯೆಗಳನ್ನು ಜಪಾನ್, ದಕ್ಷಿಣ ಕೊರಿಯಾ ಮತ್ತು ಇಟಲಿ ಈಗಾಗಲೇ ಎದುರಿಸುತ್ತಿದೆ ಎಂದು ಅವರು ಹೇಳಿದರು.

ಸರ್ಕಾರವು ಏಪ್ರಿಲ್ 1ರಿಂದ ಜನಸಂಖ್ಯಾ ನಿರ್ವಹಣಾ ನೀತಿಯನ್ನು ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಎರಡನೇ ಅಥವಾ ಮೂರನೇ ಮಗುವಿನ ಜನನಕ್ಕೆ 25,000 ರುಪಾಯಿ ಪ್ರೋತ್ಸಾಹ ಧನ, ಮೂರನೇ ಮಗುವಿಗೆ ಐದು ವರ್ಷಗಳವರೆಗೆ ಮಾಸಿಕ 1,000 ಆರ್ಥಿಕ ನೆರವು ಮತ್ತು 18 ವರ್ಷಗಳವರೆಗೆ ಉಚಿತ ಶಿಕ್ಷಣ ಸೇರಿದೆ.

ಘೋಷಿಸಲಾದ ಹೆಚ್ಚುವರಿ ಕ್ರಮಗಳಲ್ಲಿ 12 ತಿಂಗಳ ಪೋಷಕರ ರಜೆ ಮತ್ತು ಎರಡು ತಿಂಗಳ ತಂದೆಯ ರಜೆ, ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗೆ ವಿಶೇಷ ರಜೆ ಮತ್ತು ಪ್ರತಿ 50 ಮಕ್ಕಳಿಗೆ ಮಕ್ಕಳ ಆರೈಕೆ ಕೇಂದ್ರಗಳ ಸ್ಥಾಪನೆ ಸೇರಿವೆ. ಈ ನೀತಿಯು ಮಹಿಳಾ ರಕ್ಷಣೆಗಾಗಿ ಕೆಲಸ ಮಾಡುವ ಮಹಿಳಾ ಹಾಸ್ಟೆಲ್‌ಗಳು, ಗುಲಾಬಿ ಶೌಚಾಲಯಗಳು ಮತ್ತು ಶೀ ಕ್ಯಾಬ್‌ಗಳನ್ನು ಸಹ ಪ್ರಸ್ತಾಪಿಸುತ್ತದೆ.

ವಿಶ್ವಕಪ್‌ ವಿಜೇತೆ ಶ್ರೀ ಚರಣಿಗೆ 2.5 ಕೋಟಿ ರು., ಜೊತೆಗೆ ಸರ್ಕಾರಿ ಹುದ್ದೆ ಘೋಷಿಸಿದ ಚಂದ್ರಬಾಬು ನಾಯ್ಡು!

ಸರ್ಕಾರವು ಐವಿಎಫ್ (IVF) ಸೇವೆಗಳನ್ನು ಒದಗಿಸಲು ಮಾತೃತ್ವ ಸೆಂಟರ್ ಆಫ್ ಎಕ್ಸಲೆನ್ಸ್‌ಗಳನ್ನು ಸ್ಥಾಪಿಸುವ ಯೋಜನೆ ಹೊಂದಿದೆ. ಜತೆಗೆ ಸಿಸೇರಿಯನ್ (Caesarean) ಶಸ್ತ್ರಚಿಕಿತ್ಸೆಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ನೀತಿಯಡಿ 175 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎರಡು ವಾರಗಳ ಕಾಲ ವಿಶೇಷ ಕ್ಲಿನಿಕ್‌ಗಳನ್ನು ಆಯೋಜಿಸಲಾಗುತ್ತದೆ. ಜತೆಗೆ ಮಕ್ಕಳ ಆರೈಕೆ ಶಿಕ್ಷಕರಿಗೆ ವಿಶೇಷ ತರಬೇತಿ ನೀಡುವ ಯೋಜನೆಯನ್ನೂ ರೂಪಿಸಲಾಗಿದೆ. ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆಯನ್ನು ಶೇ. 31ರಿಂದ ಶೇ. 59ಕ್ಕೆ ಹೆಚ್ಚಿಸುವುದು ಅಗತ್ಯ ಎಂದು ಅವರು ಹೇಳಿದ್ದಾರೆ. ಇದರಿಂದ ಶೇ. 15ರಷ್ಟು ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ (GSDP) ವೃದ್ಧಿ ಸಾಧಿಸಲು ಸಾಧ್ಯ ಎಂದು ಅವರು ಒತ್ತಿ ಹೇಳಿದರು.

ಇದೇ ವೇಳೆ, ವಿಶಾಖಪಟ್ಟಣಂದಲ್ಲಿ 172 ಕೋಟಿ ರುಪಾಯಿ ವೆಚ್ಚದಲ್ಲಿ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ನಿರ್ಮಿಸುವ ಯೋಜನೆಯನ್ನೂ ಸರ್ಕಾರ ಹೊಂದಿದೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.