ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಪ್ರಾಪ್ತರ ಸೋಶಿಯಲ್‌ ಮೀಡಿಯಾ ಬಳಕೆ ನಿಷೇಧಿಸಲು ಸರ್ಕಾರದ ಚಿಂತನೆ

ಆಸ್ಟ್ರೇಲಿಯಾದ ಮಾದರಿಯಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸುವ ಕುರಿತು ಆಂಧ್ರ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಐಟಿ ಸಚಿವ ನಾರಾ ಲೋಕೇಶ್ ತಿಳಿಸಿದ್ದಾರೆ. ಡಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನೋಮಿಕ್ ಫೋರಮ್‌ನಲ್ಲಿ ಮಾತನಾಡಿದ ಅವರು, ಮಕ್ಕಳು ಸಾಮಾಜಿಕ ಜಾಲತಾಣದ ವಿಷಯಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಅಸಮರ್ಥರಾಗಿರುವುದರಿಂದ, ಮಕ್ಕಳ ರಕ್ಷಣೆಗೆ ಬಲಿಷ್ಠ ಕಾನೂನು ವ್ಯವಸ್ಥೆ ಅಗತ್ಯವಿದೆ ಎಂದು ಹೇಳಿದರು.

ಇನ್ಮುಂದೆ ಅಪ್ರಾಪ್ತರು ಸೋಶಿಯಲ್‌ ಮೀಡಿಯಾ ಬಳಸುವಂತಿಲ್ಲ!

ಸಾಂದರ್ಭಿಕ ಚಿತ್ರ -

Profile
Sushmitha Jain Jan 22, 2026 5:16 PM

ಹೈದರಾಬಾದ್‌, ಜ. 22: ಕಳೆದ ತಿಂಗಳು ಆಸ್ಟ್ರೇಲಿಯಾ(Australia) ಜಾರಿಗೆ ತಂದಿರುವ ಕಾನೂನಿನ ಮಾದರಿಯಲ್ಲೇ ಆಂಧ್ರ ಪ್ರದೇಶ(Andhra Pradesh) ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ (social media) ಬಳಕೆಯನ್ನು ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ ಎಂದು ಐಟಿ ಸಚಿವ ನಾರಾ ಲೋಕೇಶ್(Nara Lokesh) ತಿಳಿಸಿದ್ದಾರೆ.

ಡಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನೋಮಿಕ್ ಫೋರಮ್‌ನಲ್ಲಿ (World Economic Forum) ಬ್ಲೂಂಬರ್ಗ್‌ ಜತೆ ಮಾತನಾಡಿದ ಲೋಕೇಶ್, ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಷಯಗಳ ಅರ್ಥವನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಲಿಷ್ಠ ಕಾನೂನು ಚೌಕಟ್ಟಿನ ಅಗತ್ಯವಿದೆ ಎಂದು ಹೇಳಿದರು.

“ಕಡಿಮೆ ವಯಸ್ಸಿನೊಳಗಿನ ಮಕ್ಕಳು ಅಂತಹ ವೇದಿಕೆಗಳಲ್ಲಿ ಇರಬಾರದು. ಅವರು ತಮಗೆ ತಲುಪುವ ವಿಷಯಗಳ ಪರಿಣಾಮವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಬಲಿಷ್ಠ ಕಾನೂನು ವ್ಯವಸ್ಥೆ ಅಗತ್ಯವಾಗಬಹುದು” ಎಂದು ಲೋಕೇಶ್ ತಿಳಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥನಿ ಆಲ್ಬನೀಸ್ ನೇತೃತ್ವದ ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಟಿಕ್‌ಟಾಕ್, ಎಕ್ಸ್ (ಟ್ವಿಟರ್), ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಸ್ನ್ಯಾಪ್‌ಚಾಟ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸಿತ್ತು. ಈ ನಿಷೇಧದ ಅಡಿಯಲ್ಲಿ, ಮಕ್ಕಳು ಹೊಸ ಖಾತೆಗಳನ್ನು ತೆರೆಯಲು ಸಾಧ್ಯವಿಲ್ಲ; ಈಗಾಗಲೇ ಇರುವ ಖಾತೆಗಳನ್ನು ಕೂಡ ನಿಷ್ಕ್ರಿಯಗೊಳಿಸಬೇಕಾಗುತ್ತದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎನ್‌ಡಿಎ ಸೇರಿದರೆ ಕೇರಳಕ್ಕೆ ದೊಡ್ಡ ಅನುದಾನ ಸಿಗಲಿದೆ ಎಂದು ಕೇಂದ್ರ ಸಚಿವ ಅಠಾವಳೆ

ಆಂಧ್ರ ಪ್ರದೇಶದ ಸ್ಥಳೀಯ ಮಾಧ್ಯಮಗಳ ಪ್ರಕಾರ, ರಾಜ್ಯ ಸರ್ಕಾರ ಈ ರೀತಿಯ ಕ್ರಮವನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಇದು ಜಾರಿಗೆ ಬಂದರೆ, ಸಾಮಾಜಿಕ ಜಾಲತಾಣ ಬಳಕೆಗೆ ಮಕ್ಕಳ ಮೇಲೆ ನಿರ್ಬಂಧ ತರಲಿರುವ ಭಾರತದ ಮೊದಲ ರಾಜ್ಯವಾಗಿ ಆಂಧ್ರ ಪ್ರದೇಶ ಹೊರಹೊಮ್ಮಲಿದೆ.

ಲೋಕೇಶ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಟಿಡಿಪಿ ರಾಷ್ಟ್ರೀಯ ವಕ್ತಾರ ದೀಪಕ್ ರೆಡ್ಡಿ, ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಮಹಿಳೆಯರ ವಿರುದ್ಧ ಅವಹೇಳನಕಾರಿ ಮತ್ತು ಕ್ರೂರ ದಾಳಿಗಳಿಗೆ ನಿರ್ಲಕ್ಷ್ಯವಾಗಿ ಬಳಸಲಾಗಿತ್ತು ಎಂದು ಆರೋಪಿಸಿದರು.

“ಕಡಿಮೆ ವಯಸ್ಸಿನೊಳಗಿನ ಮಕ್ಕಳು ಆನ್‌ಲೈನ್‌ನಲ್ಲಿ ಮುಕ್ತವಾಗಿ ಲಭ್ಯವಿರುವ ನಕಾರಾತ್ಮಕ ಮತ್ತು ಹಾನಿಕಾರಕ ವಿಷಯಗಳನ್ನು ಅರ್ಥಮಾಡಿಕೊಳ್ಳುವಷ್ಟು ಭಾವನಾತ್ಮಕವಾಗಿ ಪಕ್ವರಾಗಿರುವುದಿಲ್ಲ. ಅದಕ್ಕಾಗಿಯೇ ಆಂಧ್ರ ಸರ್ಕಾರ ಜಾಗತಿಕವಾಗಿ ಉತ್ತಮ ಅನುಸರಣೆಗಳನ್ನು ಅಧ್ಯಯನ ಮಾಡುತ್ತಿದ್ದು, ಆಸ್ಟ್ರೇಲಿಯಾದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣ ಕಾನೂನನ್ನು ಪರಿಶೀಲಿಸುತ್ತಿದೆ” ಎಂದು ರೆಡ್ಡಿ ಹೇಳಿದರು.

ಆದರೆ ಇದನ್ನು ಸರ್ಕಾರದ ಅತಿಯಾದ ನಿಗಾವಾಗಿ ನೋಡಬಾರದು. ಈ ಕ್ರಮದ ಉದ್ದೇಶ ಮಕ್ಕಳನ್ನು ಕೆಟ್ಟ ವಿಷಯಗಳು ಮತ್ತು ಆನ್‌ಲೈನ್ ನಕಾರಾತ್ಮಕತೆಯಿಂದ ರಕ್ಷಿಸುವುದೇ ಹೊರತು, ಅವರ ಸ್ವಾತಂತ್ರ್ಯವನ್ನು ಕಡಿತಗೊಳಿಸುವುದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.