ಉತ್ತರಪ್ರದೇಶ: ಬಕ್ರೀದ್ ( Bakri Eid) ಹಬ್ಬದಂದು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿ ಬಲಿ (animal sacrifice) ನೀಡುವಂತಿಲ್ಲ ಹಾಗೂ ನಿಷೇಧಿತ ಪ್ರಾಣಿಗಳನ್ನು ಬಲಿ ಕೊಡುವಂತಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ (Uttar Pradesh cm) ಯೋಗಿ ಆದಿತ್ಯನಾಥ್ (Yogi Adityanath) ಎಚ್ಚರಿಸಿದ್ದಾರೆ. ಬಕ್ರೀದ್ ಹಬ್ಬಕ್ಕೂ ಮುನ್ನ ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಹಬ್ಬದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಜೊತೆಗೆ ಎಚ್ಚರಿಕೆಯಿಂದ ನಿರ್ದೇಶನಗಳನ್ನು ಪಾಲಿಸಲು ಸೂಚಿಸಿದರು. ಪೂರ್ವನಿರ್ಧಾರಿತ ಪ್ರದೇಶಗಳಲ್ಲಿ ಮಾತ್ರ ಪ್ರಾಣಿ ಬಲಿಗಳನ್ನು ನೀಡಬಹುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಹಬ್ಬದ ಆಚರಣೆ ವೇಳೆಯಲ್ಲಿ ಹಿಂದಿನ ಸಂಪ್ರದಾಯಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು. ಯಾವುದೇ ಹೊಸ ಪದ್ದತಿಗಳ ಆಚರಣೆಗೆ ಅವಕಾಶವಿಲ್ಲ. ಇದನ್ನು ಯಾರು ಕೂಡ ಪ್ರೋತ್ಸಾಹಿಸ ಬಾರದು ಎಂದು ಅವರು ಹೇಳಿದ್ದಾರೆ.
10 ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಯಾವುದೇ ರೀತಿಯಲ್ಲಿ ರಸ್ತೆಗಳ ನಿರ್ಬಂಧಕ್ಕೆ ಅವಕಾಶವಿಲ್ಲ. ಸಾಂಪ್ರದಾಯಿಕ ಸ್ಥಳಗಳಲ್ಲಿ ಮಾತ್ರ ನಮಾಜ್ ಸಲ್ಲಿಸಬೇಕು. ಇದಕ್ಕಾಗಿ ರಸ್ತೆಗಳನ್ನು ನಿರ್ಬಂಧಿಸಲು ಅನುಮತಿ ನೀಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಆಡಳಿತಾತ್ಮಕ ವಿಷಯಗಳ ಪರಿಶೀಲನೆ ನಡೆಸಿದ ಅವರು, ಪ್ರತಿ ಜಿಲ್ಲೆಯಲ್ಲೂ ಧಾರ್ಮಿಕ ಬಲಿ ನೀಡಿದ ಬಳಿಕ ತ್ಯಾಜ್ಯ ವಿಲೇವಾರಿಗೆ ಉತ್ತಮ ಯೋಜಿತ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ರಾಜ್ಯಾದ್ಯಂತ ಮಾಂಸದ ಮುಕ್ತ ಮಾರಾಟವನ್ನು ನಿಷೇಧಿಸಲಾಗಿದೆ. ಅಕ್ರಮ ಕಸಾಯಿಖಾನೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು. ಪರವಾನಗಿ ಪಡೆದ ಕಸಾಯಿಖಾನೆಗಳಲ್ಲಿ ಪ್ರಾಣಿಗಳ ಸಂಖ್ಯೆ ನಿಗದಿತ ಸಾಮರ್ಥ್ಯವನ್ನು ಮೀರಬಾರದು ಎಂದು ಸೂಚಿಸಿದ್ದಾರೆ.
ಬಕ್ರೀದ್ ಹಬ್ಬದ ವೇಳೆ ವಿದ್ಯುತ್ ಸರಬರಾಜು, ನೈರ್ಮಲ್ಯ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಹಬ್ಬಗಳಿಗೆ ಮುಂಚಿತವಾಗಿ ಧ್ವಜ ಮೆರವಣಿಗೆ, ಧಾರ್ಮಿಕ ಸ್ಥಳಗಳ ಸುತ್ತಮುತ್ತ ಪೊಲೀಸ್ ಪಡೆಗಳು ಗಸ್ತು ನಡೆಸುವಂತೆ ತಿಳಿಸಿದರು.
ಅಲಿಗಢ, ಬಿಜ್ನೋರ್, ಸಹರಾನ್‌ಪುರ, ರಾಂಪುರ ಮತ್ತು ಸಂಭಾಲ್ ಸೇರಿದಂತೆ ಸೂಕ್ಷ್ಮ ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ಮುಖ್ಯಸ್ಥರೊಂದಿಗೆ ನಿರಂತರ ಸಂವಹನ ನಡೆಸಬೇಕು, ಸಂಭಾವ್ಯ ದುಷ್ಕೃತ್ಯಗಳ ವಿರುದ್ಧ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಅವರು, ಪೊಲೀಸ್ ಠಾಣೆ, ತಹಸಿಲ್ ಮತ್ತು ಜಿಲ್ಲಾ ಮಟ್ಟದಲ್ಲಿ ಶಾಂತಿ ಸಮಿತಿ ಸಭೆ ನಡೆಸಲು ನಿರ್ದೇಶನವನ್ನು ನೀಡಿದರು.
ಬಕ್ರೀದ್ ಹಬ್ಬದೊಂದಿಗೆ ಗಂಗಾ ದಸರಾ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ ಅವರು, ಪ್ರಯಾಗ್‌ರಾಜ್, ವಾರಣಾಸಿ, ಅಯೋಧ್ಯಾ, ಚಿತ್ರಕೂಟ, ಹಾಪುರ್, ಮುಜಫರ್‌ನಗರ ಮತ್ತು ಅಮ್ರೋಹಾ ಸೇರಿದಂತೆ ಜಿಲ್ಲೆಗಳಲ್ಲಿ ಘಾಟ್‌ಗಳ ಸ್ವಚ್ಛತೆ, ಬ್ಯಾರಿಕೇಡಿಂಗ್, ಆಂಬ್ಯುಲೆನ್ಸ್‌ಗಳ ನಿಯೋಜನೆ, ನೆರಳು ಮತ್ತು ಪಾರ್ಕಿಂಗ್ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತೀವ್ರ ಬಿಸಿಲಿನ ವಾತಾವರಣದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ಮತ್ತು ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ ಅವರು, ರಸ್ತೆ ಸುರಕ್ಷತೆ ಮತ್ತು ಅಕ್ರಮ ಗಣಿಗಾರಿಕೆಯ ಬಗ್ಗೆ ಕಟ್ಟುನಿಟ್ಟಿನ ನಿಲುವನ್ನು ತೆಗೆದುಕೊಂಡು, ನಂಬರ್ ಪ್ಲೇಟ್‌ಗಳಿಲ್ಲದ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾರ್ಯಪಡೆಯನ್ನು ರಚಿಸುವಂತೆ ನಿರ್ದೇಶನ ನೀಡಿದರು.
ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಮುಖ್ಯ ವೈದ್ಯಾಧಿಕಾರಿ ಹುದ್ದೆಯನ್ನು ತಕ್ಷಣವೇ ಭರ್ತಿ ಮಾಡುವಂತೆ ಸೂಚಿಸಿದ ಅವರು ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಬ್ಲಾಕ್ ಮಟ್ಟದಲ್ಲಿ ಸಮುದಾಯ ಸಭೆಗಳನ್ನು ಆಯೋಜಿಸುವಂತೆಯೂ ಸೂಚಿಸಿದರು. ಈ ಸಭೆಯಲ್ಲಿ ದಾಖಲಾಗುವ ಪೊಲೀಸ್ ದೂರುಗಳನ್ನು ತಕ್ಷಣ ಪರಿಹರಿಸಲು ನಿರ್ದೇಶನ ನೀಡಿದರು.
ಆಯುಷ್ ಇಲಾಖೆಯ ಕಾರ್ಯನಿರ್ವಹಣೆಯ ಪರಿಶೀಲನೆ ನಡೆಸಿದ ಅವರು, ರಾಜ್ಯಾದ್ಯಂತ 'ಆಯುಷ್ ಆರೋಗ್ಯ ಮತ್ತು ಸ್ವಾಸ್ಥ್ಯ ನೀತಿ-2026' ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.