ದೆಹಲಿ, ಜು. 13: 2020ರ ಈಶಾನ್ಯ ದೆಹಲಿ ದಂಗೆಯ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿ ಅಂಕಿತ್ ಶರ್ಮಾ ಅವರ ಭೀಕರ ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (Aam Aadmi Party) ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ (Tahir Hussain) ಮತ್ತು ಇತರ ನಾಲ್ವರನ್ನು ದೆಹಲಿಯ ಕರ್ಕರ್ಡೂಮಾ ನ್ಯಾಯಾಲಯವು (Karkardooma Court) ಸೋಮವಾರ ದೋಷಿ ಎಂದು ತೀರ್ಪು ನೀಡಿದೆ.
ಪ್ರಕರಣದಲ್ಲಿ ತಾಹಿರ್ ಹುಸೇನ್ ಹೆಸರು ಕೇಳಿಬಂದ ತಕ್ಷಣ ಅವರನ್ನು ಆಪ್ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ನ್ಯಾಯಾಲಯವು ಇದೀಗ ತಾಹಿರ್ ಹುಸೇನ್‌ನನ್ನು ದ್ವೇಷ ಉತ್ತೇಜನ, ದಂಗೆ, ಹಲ್ಲೆ, ಬಲಪ್ರಯೋಗ ಮತ್ತು ಕೊಲೆ ಆರೋಪಗಳ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಹುಸೇನ್ ಜತೆಗೆ ಜಾವೇದ್, ಅನಾಸ್, ನಾಜಿಮ್ ಮತ್ತು ಕಾಸಿಮ್ ಎಂಬ ಇತರ ನಾಲ್ಕು ಆರೋಪಿಗಳನ್ನೂ ಅಂಕಿತ್ ಶರ್ಮಾ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ನಿರ್ಧರಿಸಿದೆ. ಆದರೆ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇತರ ಆರು ಮಂದಿ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.
ಐಬಿ ಅಧಿಕಾರಿಯ ಮೃತದೇಹವನ್ನು ಆ್ಯಸಿಡ್ ಹಾಕಿ ಸುಡಲಾಗಿತ್ತು
ಪ್ರಾಸಿಕ್ಯೂಷನ್ ಪ್ರಕಾರ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಮತ್ತು ವಿರೋಧಿ ಪ್ರತಿಭಟನೆಗಳು ತಾರಕಕ್ಕೇರಿದ್ದಾಗ, ಚಾಂದ್ ಬಾಗ್ ಪುಲಿಯಾ ಬಳಿ ತಾಹಿರ್ ಹುಸೇನ್ ಮತ್ತು ಆತನ ಸಹಚರರು ಕಾನೂನುಬಾಹಿರವಾಗಿ ಗುಂಪುಗೂಡಿ ಐಬಿ ಅಧಿಕಾರಿಯನ್ನು ಅಪಹರಿಸಿ ಕೊಲೆ ಮಾಡಿದ್ದರು. ಚಾರ್ಜ್ ಶೀಟ್ ಪ್ರಕಾರ, ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವಂತೆ ಮತ್ತು ಯಾರನ್ನೂ ಬಿಡಬೇಡಿ ಎಂದು ತಾಹಿರ್ ಹುಸೇನ್ ಜನಸಮೂಹವನ್ನು ಪ್ರಚೋದಿಸಿದ್ದ. 2020ರ ಫೆಬ್ರವರಿ 25ರಂದು ಸಂಜೆ ಕಚೇರಿಯಿಂದ ಮನೆಗೆ ಮರಳಿದ್ದ 26 ವರ್ಷದ ಅಂಕಿತ್ ಶರ್ಮಾ ಮನೆಯ ಸಾಮಗ್ರಿ ತರಲು ಹೊರಹೋಗಿದ್ದಾಗ ಈ ದುರಂತ ನಡೆದಿತ್ತು. ಅವರ ಮೃತದೇಹವು ನಂತರ ಚರಂಡಿಯೊಂದರಲ್ಲಿ ಪತ್ತೆಯಾಗಿತ್ತು. ಗುರುತು ಮರೆಮಾಚಲು ಅವರ ಮುಖ ಮತ್ತು ದೇಹದ ಇತರ ಭಾಗಗಳ ಮೇಲೆ ಆ್ಯಸಿಡ್ ಹಾಕಿ ಸುಡಲಾಗಿತ್ತು.
ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು
ತಾಹಿರ್ ಕಚೇರಿ ಕಟ್ಟಡದ ಮಹಡಿಯಲ್ಲೇ ನಡೆದಿತ್ತು ಪಿತೂರಿ
ಮೃತರ ತಂದೆ ರವೀಂದರ್ ಕುಮಾರ್ 2020ರ ಫೆಬ್ರವರಿ 26ರಂದು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿತ್ತು. ಮುಖ್ಯ ಕರಾವಳ್ ನಗರ ರಸ್ತೆಯಲ್ಲಿದ್ದ ತಾಹಿರ್ ಹುಸೇನ್ ಅವರ ಕಚೇರಿ ಕಟ್ಟಡದ ಚಾವಣಿಯಿಂದಲೇ ಉದ್ರಿಕ್ತ ಗುಂಪು ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ದಾಳಿ ಮತ್ತು ಗುಂಡಿನ ದಾಳಿ ನಡೆಸಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ದೆಹಲಿ ಹೈಕೋರ್ಟ್ ಈ ಹಿಂದೆ ಹುಸೇನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನ್ಯಾಯಾಲಯದ ಈ ತೀರ್ಪಿನ ವಿರುದ್ಧ ತಾವು ಮೇಲ್ಮನವಿ ಸಲ್ಲಿಸುವುದಾಗಿ ತಾಹಿರ್ ಹುಸೇನ್ ಪರ ವಕೀಲ ಅಬ್ದುಲ್ ಗಫಾರ್ ತಿಳಿಸಿದ್ದಾರೆ.