ನವದೆಹಲಿ: ಪಶ್ಚಿಮ ಬಂಗಾಳದ (west bengal) ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (TMC chief Mamata Banerje) ಅವರಿಗೆ ಇದೀಗ ಮತ್ತೊಂದು ಆಘಾತವನ್ನು ರಾಜ್ಯಸಭಾ ಸಂಸದೆ (Rajya Sabha MP) ಸುಷ್ಮಿತಾ ದೇವ್ (Sushmita Dev) ನೀಡಿದ್ದಾರೆ. ಅವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ತೃಣಮೂಲ ಕಾಂಗ್ರೆಸ್ ಈಗ ಸಂಪೂರ್ಣ ಛಿದ್ರವಾಗಿದೆ. 20 ಸಂಸದರು, 60 ಶಾಸಕರು ಪಕ್ಷವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸುಷ್ಮಿತಾ ದೇವ್ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಈಗ ಪಕ್ಷದ ಮೇಲೆ ಹಿಡಿತ ಸಂಪೂರ್ಣವಾಗಿ ದುರ್ಬಲಗೊಂಡಿದೆ. ವಿಧಾನ ಸಭಾ ಚುನಾವಣೆ ಸೋಲಿನ ಬಳಿಕ ಪಕ್ಷದ ಉತ್ತರಾಧಿಕಾರಿಯಾಗಿ ಅಭಿಷೇಕ್ ಬ್ಯಾನರ್ಜಿಯನ್ನು ಗುರುತಿಸಿದ್ದು ಹಲವು ಹಿರಿಯ ನಾಯಕರ ವಿರೋಧಕ್ಕೆ ಕಾರಣವಾಗಿತ್ತು. ಇದರಿಂದ 60 ಶಾಸಕರು ಬಂಡಾಯ ನಾಯಕ ರಿತಬ್ರತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತು ಅವರನ್ನೇ ತಮ್ಮ ನಾಯಕನಾಗಿ ಘೋಷಿಸಿಕೊಂಡರು.
ಇದರ ಬಳಿಕ ಮಮತಾ ಬ್ಯಾನರ್ಜಿ ಅವರ ವಿಶ್ವಾಸಾರ್ಹ ಸಹಾಯಕ ಸುಖೇಂದು ಶೇಖರ್ ರಾಯ್ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ವಾರದ ಬಳಿಕ ಸುಷ್ಮಿತಾ ದೇವ್ ಅವರು ರಾಜ್ಯಸಭೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಎರಡೂ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಸುಷ್ಮಿತಾ ದೇವ್ ಅವರು ಹಿಂದೆ ಕಾಂಗ್ರೆಸ್ ಸಂಸದರಾಗಿದ್ದು, 2019 ರ ಸೋಲಿನ ಬಳಿಕ ಪಕ್ಷವನ್ನು ತೊರೆದು 2021 ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಪಕ್ಷದಲ್ಲಿ ಹಲವು ಉನ್ನತ ಅಧಿಕಾರವನ್ನು ಪಡೆದಿರುವ ಅವರು ಪಕ್ಷದ ರಾಷ್ಟ್ರೀಯ ವಕ್ತಾರರು, ಬಳಿಕ ರಾಜ್ಯಸಭಾ ಸ್ಥಾನವನ್ನು ಪಡೆದಿದ್ದರು. ಇದೀಗ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಕುರಿತು ರಾಜ್ಯಸಭೆ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಪತ್ರ ಬರೆದಿರುವ ಅವರು, ತಮ್ಮ ರಾಜೀನಾಮೆಯನ್ನು ತಕ್ಷಣ ಜಾರಿಗೆ ಬರುವಂತೆ ಅಂಗೀಕರಿಸಬೇಕೆಂದು ವಿನಂತಿಸಿದ್ದಾರೆ.
ರಾಜೀನಾಮೆ ಬಳಿಕ ಅವರು ದೆಹಲಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿ ಬಿಜೆಪಿಗೆ ಸೇರುವ ಸಾಧ್ಯತೆ ಇದೆ. ಮುಂದೆ ಉಪಚುನಾವಣೆ ನಡೆಯಲಿರುವ ಅಸ್ಸಾಂ ಲೋಕಸಭಾ ಸ್ಥಾನದಿಂದ ಸ್ಪರ್ಧಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಭವಿಷ್ಯ ಬಂಗಾಳದಲ್ಲಿ ಅಲ್ಲ ಅಸ್ಸಾಂನಲ್ಲಿದೆ. ನನ್ನ ಈ ನಿರ್ಧಾರಕ್ಕೆ ವೈಯಕ್ತಿಕ ಮತ್ತು ರಾಜಕೀಯ ಕಾರಣಗಳಿವೆ. ತೃಣಮೂಲ ಕಾಂಗ್ರೆಸ್ ಅನ್ನು ನಾನು ಯಾಕೆ ತೊರೆದಿದ್ದೇನೆ ಎಂಬುದು ಒಂದು ದೀರ್ಘ ಕಥೆ. ಒಂದೇ ಸಮಯದಲ್ಲಿ ನಾನು ಎರಡು ದೋಣಿಗಳಲ್ಲಿ ಇರುವ ಪರಿಸ್ಥಿತಿಯಲ್ಲಿರಲು ಬಯಸುವುದಿಲ್ಲ. ಮಮತಾ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಅನರ್ಹತೆ ಇಲ್ಲ: ಟಿವಿಕೆಗೆ ಬೆಂಬಲ ನೀಡಿದ 21 ಬಂಡಾಯ ಎಐಎಡಿಎಂಕೆ ಶಾಸಕರಿಗೆ ಬಿಗ್ ರಿಲೀಫ್
ಸುಖೇಂದು ಶೇಖರ್ ರಾಯ್ ಅವರ ರಾಜೀನಾಮೆ ಬಳಿಕ ಸುಷ್ಮಿತಾ ದೇವ್ ಅವರ ಈ ನಿರ್ಧಾರವು ತೃಣಮೂಲ ಕಾಂಗ್ರೆಸ್ ಗೆ ನೀಡಿರುವ ಬಹುದೊಡ್ಡ ಹೊಡೆತವಾಗಿದೆ. ಸುಖೇಂದು ಶೇಖರ್ ರಾಯ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಪಕ್ಷದ ವ್ಯಾಪಕ ಭ್ರಷ್ಟಾಚಾರ, ಮಹಿಳೆಯರ ಮೇಲಿನ ತೀವ್ರ ದಬ್ಬಾಳಿಕೆ, ಶಿಕ್ಷಣ, ಆರೋಗ್ಯ ರಕ್ಷಣೆ, ಕೈಗಾರಿಕೆ, ಉದ್ಯೋಗ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಕ್ಷೇತ್ರಗಳಲ್ಲಿರುವ ಅರಾಜಕತೆಯ ಬಗ್ಗೆ ಉಲ್ಲೇಖಿಸಿದ್ದರು. ಅಲ್ಲದೇ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದನ್ನು ಸ್ವಾಗತಿಸಿ, ಹೊಸ ಸರ್ಕಾರವು ಅಧಿಕಾರಕ್ಕೆ ಬಂದ ಆರಂಭದಿಂದಲೇ ಬಂಗಾಳದ ಅಭಿವೃದ್ಧಿ ಮತ್ತು ಪುನರ್ನಿರ್ಮಾಣಕ್ಕಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ ಎಂದು ಹೊಗಳಿದ್ದರು.