ಚಂಡೀಗಢ: ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಡ್ರಗ್ಸ್ (Drugs) ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಝೋಟಾ (Parvinder Singh Jhota) ಅವರ ಭೀಕರ ಹತ್ಯೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ಫೇಸ್ಬುಕ್ನಲ್ಲಿ ಲೈವ್ ವೀಡಿಯೊ ಮಾಡುತ್ತಿದ್ದ ಪರ್ವಿಂದರ ಸೀಂಗ್ ಝೋಟಾ ಅವರನ್ನು ಔಷಧ ಅಂಗಡಿ ಮಾಲೀಕನು ನಿನ್ನೆ ಗುಂಡಿಟ್ಟು ಹತ್ಯೆ ಮಾಡಿದ್ದ. ಇದೀಗ ಆಕ್ರೋಶಗೊಂಡ ಸಾರ್ವಜನಿಕರು ಮತ್ತು ಬೆಂಬಲಿಗರು ಆರೋಪಿಯ ಮೆಡಿಕಲ್ ಶಾಪ್ಗೆ ಬೆಂಕಿ ಹಚ್ಚಿದ್ದು, ಆರೋಪಿಯ ಮನೆ ಹಾಗೂ ಅಂಗಡಿಯ ಅಕ್ರಮ ಭಾಗಗಳನ್ನು ಬುಲ್ಡೋಜರ್ನಿಂದ ನೆಲಸಮಗೊಳಿಸಲಾಗಿದೆ.
ಪಂಜಾಬ್ನಲ್ಲಿ 'ನಶಾ ರೋಕೋ, ರೋಜ್ಗಾರ್ ದೋ' ಅಭಿಯಾನದ ಮೂಲಕ ಪ್ರಸಿದ್ಧರಾಗಿದ್ದ ಮಾಜಿ ಬಾಕ್ಸರ್ ಹಾಗೂ ಡ್ರಗ್ ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಝೋಟಾ ಅವರು, ಮಾನ್ಸಾದಲ್ಲಿನ ಮೆಡಿಕಲ್ ಶಾಪ್ಗಳಲ್ಲಿ ನಿಷೇಧಿತ ಹಾಗೂ ಮಾದಕ ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಸತತ ಹೋರಾಟ ನಡೆಸುತ್ತಿದ್ದರು. ಈ ವೇಳೆ ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿರುವ ಮೆಡಿಕಲ್ ಶಾಪ್ ಒಂದರಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದ ಬಳಿಕ ಪರ್ವಿಂದರ್ ತಮ್ಮ ಸಹಚರರೊಂದಿಗೆ ಮಂಗಳವಾರ ಬೆಳಿಗ್ಗೆ ಅಶ್ವಿನ್ ಕುಮಾರ್ ಎಂಬುವವರ ಮೆಡಿಕಲ್ ಶಾಪ್ಗೆ ತೆರಳಿ, ಮಾದಕ ಮಾತ್ರೆಗಳ ಮಾರಾಟ ಕುರಿತು ಪ್ರಶ್ನಿಸುತ್ತಾ ಫೇಸ್ಬುಕ್ನಲ್ಲಿ ಲೈವ್ ಪ್ರಸಾರ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಕೋಪಗೊಂಡ ಅಂಗಡಿ ಮಾಲೀಕ ಅಶ್ವಿನ್ ಕುಮಾರ್ ತನ್ನ ಪಿಸ್ತೂಲ್ನಿಂದ ಲೈವ್ನಲ್ಲೇ ಝೋಟಾ ಮೇಲೆ ಸತತವಾಗಿ ಗುಂಡು ಹಾರಿಸಿದ್ದಾನೆ. ಝೋಟಾ ಅವರ ಹೊಟ್ಟೆ ಹಾಗೂ ತೊಡೆಗೆ ಮೂರು ಗಂಡುಗಳು ತಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳದಿದ್ದರು.
ಝೋಟಾ ಅವರ ಹತ್ಯೆಯ ಸುದ್ದಿ ಹರಡುತ್ತಿದ್ದಂತೆಯೇ ಮಾನ್ಸಾ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಧಾರ್ಮಿಕ ಸಂಘಟನೆಗಳು ಹಾಗೂ ಸಾರ್ವಜನಿಕರು ನಗರದ ಬಂದ್ಗೆ ಕರೆ ನೀಡಿದ್ದರು. ಆಕ್ರೋಶಗೊಂಡಿದ್ದ ಜನರು ಬುಧವಾರ ಬೆಳಿಗ್ಗೆ ಆರೋಪಿ ಅಶ್ವಿನ್ ಕುಮಾರ್ಗೆ ಸೇರಿದ ಮೆಡಿಕಲ್ ಸ್ಟೋರ್ಗೆ ನುಗ್ಗಿ ಅದನ್ನು ಧ್ವಂಸಗೊಳಿಸಿತಲ್ಲದೆ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೊಂದೆಡೆ, ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕ ಬಂದ ಪೊಲೀಸ್ರು ಆರೋಪಿಯ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ಆಸ್ತಿಯನ್ನು ಭಾಗಶಃ ನೆಲಸಮಗೊಳಿಸಿತು.
ಘಟನೆ ಬಳಿಕ ರಾಜಸ್ಥಾನಕ್ಕೆ ಪಾರರಿಯಾಗಿದ್ದ ಪ್ರಮುಖ ಆರೋಪಿ ಅಶ್ವಿನ್ ಕುಮಾರ್ನನ್ನು ಪೊಲೀಸರು ರಾಜಸ್ಥಾನದ ಸಾಲಾಸರ್ನಲ್ಲಿ ವಶಕ್ಕೆ ಪಡೆದಿದ್ದಾರೆ. ಈ ಭೀಕರ ಹತ್ಯೆಯಿಂದಾಗಿ ಪಂಜಾಬ್ನ ಆಮ್ ಆದ್ಮಿ ಪಾರ್ಟಿ ಸರ್ಕಾರದ ವಿರುದ್ಧ ವಿಪಕ್ಷಗಳು ತೀವ್ರ ಟೀಕೆಯನ್ನು ಮಾಡುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಡ್ರಗ್ ಮಾಫಿಯಾ ವಿರುದ್ಧ ಧ್ವನಿ ಎತ್ತುವ ಸಾರ್ವಜನಿಕರಿಗೇ ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.