ರಾಜೌರಿ/ ಜಮ್ಮು, ಅ.29: ಜಮ್ಮು–ಕಾಶ್ಮೀರದ ರಜೌರಿ ಜಿಲ್ಲೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುಹೆ ರೀತಿಯಂತೆ ಇದ್ದ ಉಗ್ರರ ಅಡಗುದಾಣವನ್ನು ಪತ್ತೆ ಹಚ್ಚಿರುವ ಭದ್ರತಾ ಪಡೆಗಳು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸಿಡಿಮದ್ದುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಶಂಕಿತ ಚಟುವಟಿಕೆಗಳ ಕುರಿತ ಮಾಹಿತಿ ಮೇರೆಗೆ ಕೋತ್ರಾಂಕ ಉಪವಿಭಾಗದ ಮೇಲ್ಭಾಗದಲ್ಲಿರುವ ಡೋಬಾ ಗಲಿಯಲ್ಲಿ ರಾಷ್ಟ್ರೀಯ ರೈಫಲ್ಸ್, ಬಿಎಸ್ಎಫ್ ಮತ್ತು ಸಿಆರ್ಪಿಎಫ್ ಸಿಬ್ಬಂದಿ ಬುಧವಾರ ತಡರಾತ್ರಿಯಿಂದಲೇ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಉಗ್ರರ ಅಡಗುತಾಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ ಹೊಸ ದಾಖಲೆ ಬರೆದ 15 ವರ್ಷದ ಕನ್ನಡತಿ ಉಮಾ ಯಾರು?
ಅಡಗುತಾಣದಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ ನಾಲ್ಕು 'ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್' (UBGL) ರೌಂಡ್ಗಳು, ಮೂರು ಹ್ಯಾಂಡ್ ಗ್ರೆನೇಡ್ಗಳು, ಎಕೆ (AK) ಅಸಾಲ್ಟ್ ರೈಫಲ್ನ 237 ರೌಂಡ್ಗಳು, ಜನರಲ್ ಪರ್ಪಸ್ ಮೆಷಿನ್ ಗನ್ನ (GPMG) ಬೆಲ್ಟ್ನಲ್ಲಿ ಜೋಡಿಸಲಾದ 101 ಮದ್ದುಗುಂಡುಗಳು, ಪಿಸ್ತೂಲ್ನ 16 ರೌಂಡ್ಗಳು, ಎಕೆ ರೈಫಲ್ಗೆ ಅಳವಡಿಸುವ ಒಂದು ಬೇಯೊನೆಟ್ ಸೇರಿವೆ ಎಂದು ಅವರು ತಿಳಿಸಿದ್ದಾರೆ. ಆದರೆ, ಈ ಕಾರ್ಯಾಚರಣೆಯ ವೇಳೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಗುಂಡಿನ ದಾಳಿ: ಓರ್ವ ಸಾವು
ಪ್ರತ್ಯೇಕ ಪ್ರಕರಣವೊಂದರಲ್ಲಿ ಪಂಜಾಬ್ನ ತಾರ್ನ್ ತರನ್ ಜಿಲ್ಲೆಯ ಖೇಮಕರಣ ಪಟ್ಟಣದ ಅಸಲ್ ಉತ್ತರ್ ಗ್ರಾಮದ ಸಮೀಪ ಬುಧವಾರ (ಅಕ್ಟೋಬರ್ 28) ಮಧ್ಯಾಹ್ನ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ನಡೆದ ಈ ಘಟನೆಯ ದೃಶ್ಯ ಸ್ಥಳೀಯ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತರನ್ನು ಅಸಲ್ ಉತ್ತರ್ ಗ್ರಾಮದ ಗುರ್ಸೇವಕ್ ಸಿಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಹರಿಕೀರತ್ ಸಿಂಗ್ ಮತ್ತು ಸಾಜನ್ಪ್ರೀತ್ ಸಿಂಗ್ ಅವರನ್ನು ಭಿಖಿವಿಂಡ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ, ಮಂಜಿತ್ ಸಿಂಗ್ ಅಲಿಯಾಸ್ ಕಟ್ಟಾ ಮತ್ತು ಆತನ ಸಹೋದರ ಸಂದೀಪ್ ಸಿಂಗ್ ಈ ಪ್ರಕರಣದ ಶಂಕಿತ ಆರೋಪಿಗಳು. ಥಾರ್ ಎಸ್ಯುವಿಯಲ್ಲಿ ಬಂದಿದ್ದ ವ್ಯಕ್ತಿಗಳು ಮತ್ತೊಂದು ಕಾರಿನಲ್ಲಿದ್ದ ಮೂವರ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗುಂಡೇಟಿನಿಂದ ಗಾಯಗೊಂಡಿದ್ದ ಮೂವರಲ್ಲಿ ಗುರ್ಸೇವಕ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.