ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೌರವ್ ದಾಸ್, ಅಶುತೋಷ್ ರಂಕಾ ಬಂಧನ ಹೇಡಿತನದ ಕೃತ್ಯ: ಸಿಜೆಪಿ ನಾಯಕರ ಪರ ರಾಹುಲ್ ಗಾಂಧಿ ಭರ್ಜರಿ ಬ್ಯಾಟಿಂಗ್

ಪ್ರತಿಭಟನಾ ಸ್ಥಳ ಮಾನ್ಯತೆ ರದ್ದುಗೊಳಿಸಿರುವ ದೆಹಲಿಯ ಜಂತರ್ ಮಂತರ್‌ಗೆ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಒಳ ಪ್ರವೇಶಿಸಿದ ಆರೋಪದ ಮೇಲೆ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಬಂಧಿಸಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದು, ಇದೊಂದು ಹೇಡಿತನದ ಕೃತ್ಯ ಎಂದು ಕರೆದಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janta Party) ನಾಯಕರಾದ ಸೌರವ್ ದಾಸ್ (Sourav Das) ಮತ್ತು ಅಶುತೋಷ್ ರಂಕಾ (Ashutosh Ranka) ಅವರ ಬಂಧನವನ್ನು ವಿರೋಧ ಪಕ್ಷದ ನಾಯಕ (Opposition leader), ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Congress MP Rahul Gandhi) ಖಂಡಿಸಿದ್ದು, ಇದನ್ನು ಹೇಡಿತನದ ಕೃತ್ಯವೆಂದು ಹೇಳಿದ್ದಾರೆ. ಪ್ರತಿಭಟನಾ ಸ್ಥಳ ಮಾನ್ಯತೆ ರದ್ದುಗೊಳಿಸಿರುವ ದೆಹಲಿಯ ಜಂತರ್ ಮಂತರ್‌ಗೆ (Delhi Jantar Mantar) ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಒಳ ಪ್ರವೇಶಿಸಿದ ಆರೋಪದ ದೆಹಲಿ ಪೊಲೀಸರು (Delhi police) ಅವರನ್ನು ಬಂಧಿಸಿದ್ದು, ಅವರಿಗೆ ಐದು ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ಸಿಜೆಪಿ ನಾಯಕರು ಇತ್ತೀಚೆಗೆ ಪ್ರತಿಭಟನಾ ಸ್ಥಳದ ಮಾನ್ಯತೆಯನ್ನು ರದ್ದುಗೊಳಿಸಲಾದ ಜಂತರ್ ಮಂತರ್‌ಗೆ ಬ್ಯಾರಿಕೇಡ್‌ಗಳನ್ನು ದಾಟಿ ಪ್ರವೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ಬಂಧನವನ್ನು ಟೀಕಿಸಿರುವ ರಾಹುಲ್ ಗಾಂಧಿ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನಿಸಿದ ಮಹಿಳೆ

ಶಾಂತಿಯುತ ಪ್ರತಿಭಟನೆಯಲ್ಲಿ ಜಂತರ್ ಮಂತರ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು ಅಪರಾಧವಲ್ಲ. ಇದಕ್ಕಾಗಿ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೃತ್ಯ. ವಿವಿಧ ಬ್ಯಾನರ್‌ಗಳ ಅಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು ಮತ್ತು ಇಂಡಿಯಾ ಮೈತ್ರಿಕೂಟವು ಒಂದು ಸಾಮಾನ್ಯ ಉದ್ದೇಶಕ್ಕಾಗಿ ಒಗ್ಗೂಡಿದೆ ಎಂದು ಅವರು ಹೇಳಿದರು.

ನಾಗರಿಕರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಒತ್ತಾಯಿಸುತ್ತಿದ್ದಾರೆ. ಜಂತರ್ ಮಂತರ್ ಭಾರತದ ಜನತೆಗೆ ಸೇರಿರುವುದು. ಆ ಪ್ರತಿಭಟನಾ ಸ್ಥಳವನ್ನು ಮರಳಿ ಪಡೆಯುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.

ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಅಕ್ಟೋಬರ್ 10 ರಂದು ಸಹಿ ಮಾಡಿದ್ದ ಶಾಂತಿ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ ಹಾಗೂ ಅನುಮತಿಯಿಲ್ಲದೆ ಜಂತರ್ ಮಂತರ್‌ಗೆ ಪ್ರವೇಶಿಸಿದ ಆರೋಪದ ಮೇಲೆ ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಯಿತು. ಇದಕ್ಕೂ ಮೊದಲು ಅಜಿಂಕ್ಯ ಶಿಂಧೆ ಅವರನ್ನು ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಬಿಡುಗಡೆಗೊಳಿಸಲಾಗಿತ್ತು.

ಸಿಜೆಪಿ ನಾಯಕರ ವಿರುದ್ಧ ಅನಧಿಕೃತ ಪ್ರವೇಶ, ನಿಷೇಧಾಜ್ಞೆಗಳ ಉಲ್ಲಂಘನೆ, ಶಾಂತಿ ಒಪ್ಪಂದದ ಉಲ್ಲಂಘನೆ ಮತ್ತು ಕರ್ತವ್ಯನಿರತ ಸರ್ಕಾರಿ ನೌಕರರ ಕಾರ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಆರೋಪಗಳಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಸಿಜೆಪಿ ಮತ್ತು ಇತರ ಸಂಘಟನೆಗಳು ಸರಣಿ ಪ್ರತಿಭಟನೆಯನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪ್ರತಿಭಟನೆ ಮತ್ತು ಪ್ರದರ್ಶನಗಳಿಗೆ ಜಂತರ್ ಮಂತರ್ ಗೆ ನಿರ್ಬಂಧ ವಿಧಿಸಿ ಸೋಮವಾರ ಘೋಷಿಸಿದ ದೆಹಲಿ ಪೊಲೀಸರು ಇದಕ್ಕಾಗಿ ಪರ್ಯಾಯವಾಗಿ ಮೂರು ಸ್ಥಳಗಳನ್ನು ನಿಗದಿಪಡಿಸಿ ಆದೇಶಿಸಿದರು. ಈ ಆದೇಶವು 2022 ಏಪ್ರಿಲ್ 28ರ ಹಿಂದಿನ ಆದೇಶವನ್ನು ಭಾಗಶಃ ಬದಲಾಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಇದು ಭಿನ್ನಮತವನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದರು.

ಜಂತರ್ ಮಂತರ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು ತಪ್ಪೇನು ಎಂದು ಪ್ರಶ್ನಿಸಿರುವ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ನೇರವಾಗಿ ಸ್ವಲ್ಪ ಧೈರ್ಯ ತೋರಿಸಿ. ಭಿನ್ನಮತವನ್ನು ಹತ್ತಿಕ್ಕಲು ನೀವು ಅಷ್ಟೊಂದು ದೃಢ ನಿರ್ಧಾರ ಮಾಡಿದ್ದರೆ ಇಂತಹ ಹೇಡಿ ತಂತ್ರಗಳ ಹಿಂದೆ ಅಡಗಿಕೊಳ್ಳುವ ಬದಲು ಅಧಿಕೃತವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಧೈರ್ಯ ಮಾಡಿ ಎಂದು ಹೇಳಿದರು.

ಜಂತರ್ ಮಂತರ್‌ಗೆ ಅತಿಕ್ರಮಣ ಪ್ರವೇಶ ಆರೋಪ: ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಂಕಾಗೆ 5 ದಿನಗಳ ಜೈಲು ಶಿಕ್ಷೆ

ಇದಕ್ಕೂ ಮೊದಲು ನಾಗಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಜೆಪಿ ನಾಯಕರು ಯಾವ ಅಪರಾಧ ಮಾಡಿದ್ದಾರೆ. ಜಂತರ್ ಮಂತರ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಕ್ಕಾಗಿ ಐದು ದಿನಗಳ ಕಾಲ ವಶದಲ್ಲಿ ಇರಿಸಿಕೊಳ್ಳುವುದು ಹೇಡಿತನದ ಕ್ರಮ. 1975ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಇಂತಹ ಘಟನೆ ನಡೆದಿರಲಿಲ್ಲ ಎಂದು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author