ನವದೆಹಲಿ: ಲಡಾಖ್‌ನ (Ladakh) ರಾಜಕೀಯ ಹಕ್ಕು ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಕೇಂದ್ರ ಗೃಹ ಸಚಿವಾಲಯ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಲಡಾಖ್‌ನ ಕೇಂದ್ರಾಡಳಿತ ಪ್ರದೇಶಕ್ಕಾಗಿ ಸಂವಿಧಾನದ 371ನೇ ವಿಧಿಯ ಅಡಿಯಲ್ಲಿ 'ವಿಧಿ 371(K)'ಅನ್ನು ಸೇರ್ಪಡೆಗೊಳಿಸುವ ಹೊಸ ಕಾನೂನು ಪ್ರಸ್ತಾಪವನ್ನು ನಾಯಕರ ಮುಂದಿಟ್ಟಿದೆ. 2019 ರಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಕಾಯ್ದೆಯಡಿ ವಿಧಿ 370 ಅನ್ನು ರದ್ದುಗೊಳಿಸಿ, ಲಡಾಖ್ ಅನ್ನು ಶಾಸನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ರಚಿಸಲಾಗಿತ್ತು. ಅಂದಿನಿಂದ ಲಡಾಖ್‌ನ ಜನಪ್ರತಿನಿಧಿಗಳು ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹೊಸ ಕೊಡುಗೆಯನ್ನು ನೀಡಿದೆ.
ಕೇಂದ್ರ ಸರ್ಕಾರದ ಆಫರ್‌ನಲ್ಲಿ ಏನಿದೆ?
ಲಡಾಖ್‌ನಲ್ಲಿ ಕೇಂದ್ರದಿಂದ ನೇಮಕಗೊಳ್ಳುವ ಆಡಳಿತಗಾರರ ಬದಲು, ಸ್ಥಳೀಯ ಜನರಿಂದ ನೇರವಾಗಿ ಆಯ್ಕೆಯಾಗುವ ಶಾಸನಾತ್ಮಕ ಮಂಡಳಿಯನ್ನು ಸ್ಥಾಪಿಸುವುದು. ಭೂಮಿ, ಸ್ಥಳೀಯ ಉದ್ಯೋಗ, ಭಾಷೆ, ಸಾಂಸ್ಕೃತಿಕ ಗುರುತು ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಸಂಬಂಧಿಸಿದಂತೆ ಶಾಸನಗಳನ್ನು ರೂಪಿಸುವ ಅಧಿಕಾರವನ್ನು ಈ ಹೊಸ ಮಂಡಳಿಗೆ ನೀಡುವುದು. ನಾಗಾಲ್ಯಾಂಡ್ (371A) ಹಾಗೂ ಮಿಜೋರಾಂ (371G) ರಾಜ್ಯಗಳಿಗೆ ನೀಡಿರುವ ಮಾದರಿಯಲ್ಲೇ ಲಡಾಖ್ ಸ್ಥಳೀಯ ಆಚಾರ-ವಿಚಾರ ಮತ್ತು ಸಂಪ್ರದಾಯಗಳಿಗೆ ಧಕ್ಕೆ ಬಾರದಂತೆ ವಿಶೇಷ ಸಂವಿಧಾನಾತ್ಮಕ ಸುರಕ್ಷತೆ ನೀಡುವ ಕುರಿತು ಕೇಂದ್ರ ಸರ್ಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಇತ್ಯರ್ಥವಾಗದೆ ಉಳಿದಿರುವ ವಿಚಾರಗಳೇನು?
ಕೇಂದ್ರದ ಈ '371(K)' ಪ್ರಸ್ತಾಪವನ್ನು ಲಡಾಖ್ ಪ್ರತಿನಿಧಿಸುವ 'ಲೇಹ್ ಅಪೆಕ್ಸ್ ಬಾಡಿ' ಮತ್ತು 'ಕಾರ್ಗಿಲ್ ಡೆಮಾಕ್ರಟಿಕ್ ಅಲಿಯನ್ಸ್' ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ.
6ನೇ ಅನುಸೂಚಿ vs ವಿಧಿ 371(K): ಲಡಾಖ್ ನಾಯಕರು ಸಂವಿಧಾನದ 6ನೇ ಅನುಸೂಚಿ ಅಡಿಯಲ್ಲೇ ಸ್ವಾಯತ್ತತೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಕೇಂದ್ರವು 371(K) ಅಡಿಯಲ್ಲಿ ವಿಶೇಷ ಮಾದರಿ ನೀಡಲು ಬಯಸಿದೆ.
ಪೂರ್ಣ ರಾಜ್ಯದರ್ಜೆ (Full Statehood): ಲಡಾಖ್‌ಗೆ ಪೂರ್ಣ ಪ್ರಮಾಣದ ರಾಜ್ಯದರ್ಜೆ ಸಿಗಬೇಕು ಎಂಬುದು ಸ್ಥಳೀಯ ನಾಯಕರ ಪ್ರಮುಖ ಬೇಡಿಕೆಯಾಗಿದೆ.
ಸಾರ್ವಜನಿಕ ಸೇವಾ ಆಯೋಗ: ಲಡಾಖ್‌ಗೆ ಪ್ರತ್ಯೇಕ ಲೋಕಸೇವಾ ಆಯೋಗ ಮತ್ತು ಸರಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ 100% ಮೀಸಲಾತಿ ನೀಡುವ ಬಗ್ಗೆ ಗೃಹ ಸಚಿವಾಲಯ ಇನ್ನೂ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ.
ಹಣಕಾಸು ಅಧಿಕಾರ: ನೂತನವಾಗಿ ರಚನೆಯಾಗುವ ಮಂಡಳಿಗೆ ಹಣಕಾಸು ನಿರ್ಧಾರಗಳು ಮತ್ತು ಕಾನೂನು-ಸುವ್ಯವಸ್ಥೆ ವಿಭಾಗದ ಮೇಲೆ ಎಷ್ಟು ಅಧಿಕಾರವಿರಲಿದೆ ಎಂಬುದು ಸ್ಪಷ್ಟವಾಗಿಲ್ಲ.
ಲಡಾಖ್‌ಗೆ ನೇರವಾಗಿ ಶಾಸನಸಭೆ ನೀಡದಿರಲು ಕಾರಣವೇನು?
ʼ2019ರ ಜಮ್ಮು-ಕಾಶ್ಮೀರ ಪುನಾರಚನೆ ಕಾಯ್ದೆʼಯಡಿಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಶಾಸನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿ ಹಾಗೂ ಲಡಾಖ್ ಅನ್ನು ಶಾಸನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ರಚಿಸಲಾಯಿತು. ಈ ಎರಡರ ನಡುವೆ ವ್ಯತ್ಯಾಸವಿದೆ. ಶಾನಸಭೆ ಇದ್ದರೆ, ಸಂವಿಧಾನಾತ್ಮಕ ಚೌಕಟ್ಟಿನಡಿಯಲ್ಲಿ ತನಗೆ ನೀಡಲಾದ ವಿಷಯಗಳ ಮೇಲೆ ಸ್ವತಂತ್ರವಾಗಿ ಕಾನೂನುಗಳನ್ನು ರೂಪಿಸುವ ಅಧಿಕಾರ ಆ ಪ್ರದೇಶಕ್ಕೆ ಸಿಗುತ್ತದೆ. ಆದರೆ, ಪ್ರಸ್ತುತ ಲಡಾಖ್‌ನಲ್ಲಿ ಅಂತಹ ಯಾವುದೇ ಶಾಸನಸಭೆ ಇಲ್ಲ.
ಈಗ ಕೇಂದ್ರ ನೀಡುತ್ತಿರುವ '371(K)' ಪ್ರಸ್ತಾಪವು, ಲಡಾಖ್‌ಗೆ ಪೂರ್ಣ ಪ್ರಮಾಣದ ರಾಜ್ಯದರ್ಜೆ ನೀಡದಿದ್ದರೂ ಜನಪ್ರತಿನಿಧಿಗಳಿಗೆ ಕಾನೂನು ರೂಪಿಸುವ ಶಕ್ತಿ ನೀಡುತ್ತದೆ. ಅಂದರೆ, ಪ್ರಸ್ತುತ ಇರುವ ಕೇಂದ್ರಾಡಳಿತ ವ್ಯವಸ್ಥೆ ಮತ್ತು ಸ್ಥಳೀಯರ 'ಪೂರ್ಣ ರಾಜ್ಯದರ್ಜೆ'ಯ ಬೇಡಿಕೆಯ ನಡುವೆ ಇದೊಂದು 'ಮಧ್ಯಂತರ ಹಾದಿ' ಅಥವಾ ಸಮತೋಲನದ ಪರಿಹಾರವಾಗಿದೆ ಎಂದು ಹೇಳಬಹುದು.
ಮುಂದಿನ ಹಂತ
ಈ ಪ್ರಸ್ತಾಪವು ಲಡಾಖ್‌ನಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಶಮನಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಮುಖ ಹೆಜ್ಜೆಯಾಗಿದೆ. ಆದರೆ, 6ನೇ ಅನುಸೂಚಿ ಮತ್ತು ಪೂರ್ಣ ರಾಜ್ಯದರ್ಜೆಯ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ಮತ್ತು ಲಡಾಖ್ ನಾಯಕರ ನಡುವೆ ಮುಂದಿನ ಸುತ್ತಿನ ಮಾತುಕತೆಗಳಲ್ಲಿ ಯಾವ ತೀರ್ಮಾನವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.