ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸರ್ಕಾರಕ್ಕೆ ತಲೆನೋವಾದ ಜೈಲುಗಳಲ್ಲಿ ಹೆಚ್ಚುತ್ತಿರುವ ಎಚ್‌ಐವಿ ಪ್ರಕರಣ: 4 ತಿಂಗಳಲ್ಲಿ 226 ಕೈದಿಗಳಿಗೆ ಸೋಂಕು

HIV Cases: ಅಸ್ಸಾಂನ 31 ಜೈಲುಗಳಲ್ಲಿ ಏಪ್ರಿಲ್‌ನಿಂದ ಜುಲೈವರೆಗೆ ನಡೆಸಿದ HIV ತಪಾಸಣೆಯಲ್ಲಿ 226 ಕೈದಿಗಳಿಗೆ ಸೋಂಕು ಪತ್ತೆಯಾಗಿದೆ. ಇವರಲ್ಲಿ 202 ಮಂದಿ ART ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಭೂಮಿ ಜಿಲ್ಲಾ ಜೈಲಿನಲ್ಲಿ 11 ಕೈದಿಗಳಿಗೆ HIV ಪಾಸಿಟಿವ್ ದೃಢಪಟ್ಟಿದ್ದು, ಜೈಲುಗಳಲ್ಲಿನ ಸೋಂಕಿನ ಪರಿಸ್ಥಿತಿ ಮತ್ತು ಕಾರಣಗಳ ಕುರಿತು ಸರ್ಕಾರ ಪರಿಶೀಲನೆ ನಡೆಲಿದೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ದಿಸ್‌ಪುರ, ಆ. 31: ಅಸ್ಸಾಂನ ವಿವಿಧ ಜೈಲುಗಳಲ್ಲಿ ಎಚ್‌ಐವಿ(HIV) ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಜೈಲಿನಲ್ಲಿದ್ದಾಗಲೇ ಕೈದಿಯೊಬ್ಬನಿಗೆ ಎಚ್‌ಐವಿ ಸೋಂಕು ತಗುಲಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ತಿಳಿಸಿದ್ದಾರೆ. ಏಪ್ರಿಲ್‌ನಿಂದ ಜುಲೈವರೆಗೆ ರಾಜ್ಯದ 31 ಜೈಲುಗಳಲ್ಲಿ ನಡೆಸಿದ ಎಚ್‌ಐವಿ ತಪಾಸಣೆಯಲ್ಲಿ 226 ಕೈದಿಗಳಿಗೆ ಸೋಂಕು ಇರುವುದು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇವರ ಪೈಕಿ 202 ಮಂದಿ ಆಂಟಿರೆಟ್ರೋವೈರಲ್ ಥೆರಪಿ (ART) ಪಡೆಯುತ್ತಿದ್ದಾರೆ.

ಜೈಲಿನಲ್ಲಿರುವ ವ್ಯಕ್ತಿಗೆ ಸೋಂಕು ಹೇಗೆ ಮತ್ತು ಯಾವ ಪರಿಸ್ಥಿತಿಯಲ್ಲಿ ತಗುಲಿತು ಎಂಬುದನ್ನು ವಿವರವಾಗಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸೋಂಕಿತ ವ್ಯಕ್ತಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಹಾಗೂ ಆರೈಕೆ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ವಿಚಾರವನ್ನು ಗುವಾಹಟಿ ಹೈಕೋರ್ಟ್ ಕೂಡ ಪರಿಗಣಿಸುತ್ತಿದೆ ಎಂದು ಶರ್ಮಾ ತಿಳಿಸಿದ್ದಾರೆ.

ಶ್ರೀಭೂಮಿ ಜೈಲಿನಲ್ಲಿ 11 ಮಂದಿಗೆ ಸೋಂಕು

ಇತ್ತೀಚೆಗೆ ಶ್ರೀಭೂಮಿ ಜಿಲ್ಲಾ ಜೈಲಿನಲ್ಲಿ 11 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇವರಲ್ಲಿ ಒಬ್ಬರು ಮಹಿಳಾ ಕೈದಿ ಎಂದು ತಿಳಿದುಬಂದಿದೆ. ಸೋಂಕಿತರಲ್ಲಿ ಹೆಚ್ಚಿನವರು NDPS ಪ್ರಕರಣಗಳಲ್ಲಿ ಬಂಧಿತರಾಗಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಯುಗದಲ್ಲಿ HIV ಕುರಿತ ತಪ್ಪು ಮಾಹಿತಿಯ ವಿರುದ್ಧ ಹೋರಾಟ

ಜೈಲಿನ ಒಟ್ಟು ಸಾಮರ್ಥ್ಯ ಕೇವಲ 187 ಮಂದಿಯಾದರೂ, ಪ್ರಸ್ತುತ 445 ಕೈದಿಗಳು ಇಲ್ಲಿದ್ದಾರೆ. ತೀವ್ರ ಜೈಲು ದಟ್ಟಣೆ ಕೂಡ ಚರ್ಚೆಗೆ ಕಾರಣವಾಗಿದೆ. ಏಡ್ಸ್ ನಿಯಂತ್ರಣ ಸಮಿತಿಯ ಸದಸ್ಯರು ನಿಯಮಿತವಾಗಿ ಜೈಲಿಗೆ ಭೇಟಿ ನೀಡಿ ಸೋಂಕಿತ ಕೈದಿಗಳಿಗೆ ಚಿಕಿತ್ಸೆ ಮತ್ತು ಸಮಾಲೋಚನೆ ನೀಡುತ್ತಿದ್ದಾರೆ. ಅಗತ್ಯವಿದ್ದಾಗ HIV ಪಾಸಿಟಿವ್ ವಿಚಾರಣಾಧೀನ ಕೈದಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಸಿಲ್ಚಾರ್ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗುತ್ತದೆ.

ರಾಜ್ಯದ 31 ಜೈಲುಗಳಲ್ಲಿ ಪತ್ತೆಯಾದ 226 HIV ಪ್ರಕರಣಗಳಲ್ಲಿ ಸುಮಾರು 95% ಪ್ರಕರಣಗಳು ಇಂಜೆಕ್ಷನ್ ಮೂಲಕ ಮಾದಕವಸ್ತು ಬಳಕೆಗೆ ಸಂಬಂಧಿಸಿವೆ ಎಂದು ಮೂಲಗಳು ತಿಳಿಸಿವೆ. ಭದ್ರತಾ ಕಾರಣಗಳಿಂದ ಕೆಲವು ಕೈದಿಗಳನ್ನು ART ಕೇಂದ್ರಗಳಿಗೆ ಕರೆದೊಯ್ಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ART ತಂಡಗಳೇ ಜೈಲುಗಳಿಗೆ ತೆರಳಿ ಚಿಕಿತ್ಸೆ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುತ್ತಿವೆ.

ಅಸ್ಸಾಂನಲ್ಲಿ ಪ್ರಸ್ತುತ ಸುಮಾರು 33,000 ಸಕ್ರಿಯ HIV/AIDS ರೋಗಿಗಳಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಅಶೋಕ್ ಸಿಂಘಲ್ ಈ ಹಿಂದೆ ಮಾಹಿತಿ ನೀಡಿದ್ದರು.