ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಭಾಷಣ ಅಂದರೆ ವಿಶೇಷತೆ ಇದ್ದೇ ಇರುತ್ತದೆ. ಅಂತೆಯೇ ಇಂದು ಕೂಡ ಸ್ವಾತಂತ್ರ್ಯ ದಿನಾಚರಣೆ(Independence Day Speech) ಪ್ರಯುಕ್ತ ಧ್ವಜಾರೋಹಣ ಮಾಡಿ ಬಳಿಕ ಮಾತನಾಡಿದ ಮೋದಿ, ಹತ್ತು ಹಲವು ವಿಚಾರಗಳನ್ನು ದೇಶದ ಜನರೆದುರು ಪ್ರಸ್ತಾಪಿಸಿದರು. ಹಿಂದೆಂದೂ ಯಾವ ಪ್ರಧಾನಿಯೂ ಮಾಡದಂತಹ ದಾಖಲೆಯನ್ನು ಪ್ರಧಾನಿ ಮೋದಿ ಮಾಡಿದ್ದು, 103 ನಿಮಿಷಗಳ (1 ಗಂಟೆ 43 ನಿಮಿಷಗಳು) ಗಮನಾರ್ಹವಾದ ಭಾಷಣವನ್ನು ಮಾಡಿದರು.
ಬೆಳಿಗ್ಗೆ 7.34 ಕ್ಕೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಮೋದಿ ಬೆಳಿಗ್ಗೆ 9.17 ಕ್ಕೆ ಅದನ್ನು ಮುಕ್ತಾಯಗೊಳಿಸಿದರು. ಕಳೆದ ಬಾರಿ ಅವರು98 ನಿಮಿಷಗಳ ಭಾಷಣ ಮಾಡಿ (1 ಗಂಟೆ 38 ನಿಮಿಷಗಳು) ದಾಖಲೆ ಬರೆದಿದ್ದರು. ಇಂದು ಅವರು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2015 ರಲ್ಲಿ 88 ನಿಮಿಷಗಳ (1 ಗಂಟೆ 28 ನಿಮಿಷಗಳು) ಭಾಷಣ ಮಾಡುವ ಮೂಲಕ ದಾಖಲೆ ಬರೆದಿದ್ದರು. 1947 ರಲ್ಲಿ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (1 ಗಂಟೆ 12 ನಿಮಿಷಗಳು) 72 ನಿಮಿಷಗಳ ಭಾಷಣ ಮಾಡಿದ್ದರು.
2014 ರಲ್ಲಿ ಕೆಂಪು ಕೋಟೆಯಿಂದ ಮಾಡಿದ ಮೊದಲ ಭಾಷಣದಲ್ಲಿ ಅವರು 65 ನಿಮಿಷಗಳು (1 ಗಂಟೆ 5 ನಿಮಿಷಗಳು) ಮತ್ತು 2016 ರಲ್ಲಿ 96 ನಿಮಿಷಗಳು ಮಾತನಾಡಿದರು. 2017 ರಲ್ಲಿ ಸುಮಾರು 56 ನಿಮಿಷಗಳ ಕಾಲ ಮಾತನಾಡಿದ್ದರು. ಇದು ಅವರ ಅತ್ಯಂತ ಕಡಿಮೆ ಅವಧಿ ಭಾಷಣವಾಗಿತ್ತು. ಸ್ವಾತಂತ್ರ್ಯ ದಿನದ ಭಾಷಣ ಬಹಳ ಉದ್ಧವಾಗುತ್ತಿದೆ ಎಂದು ಜನ ದೂರುತ್ತಿದ್ದಾರೆ ಎಂಬುದನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.
ಮತ್ತೆ ಇಂದಿರಾ ಗಾಂಧಿ ದಾಖಲೆ ಮುರಿದ ಮೋದಿ
ಕೆಂಪು ಕೋಟೆಯಲ್ಲಿ ಸತತ 12 ಭಾಷಣಗಳನ್ನು ಮಾಡುವ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದಾರೆ. ಸತತ 17 ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳನ್ನು ಮಾಡಿದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ನಂತರದ ಸ್ಥಾನದಲ್ಲಿ ಪ್ರಧಾನಿ ಮೋದಿ ಇದ್ದಾರೆ. ಇನ್ನು ಪ್ರಧಾನಿ ಮೋದಿಯ ನಂತರ ಸ್ಥಾನದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿದ್ದು, ಅವರು 10 ಬಾರಿ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ್ದಾರೆ.