ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮ ಮಂದಿರ ದೇಣಿಗೆ ಹಗರಣ: ಪ್ರತಿದಿನ ನಾಪತ್ತೆಯಾಗುತ್ತಿತ್ತು 6–8 ಲಕ್ಷ ರುಪಾಯಿ; ಎಸ್‌ಐಟಿ ತನಿಖೆಯಲ್ಲಿ ಹೊರ ಬರುತ್ತಿದೆ ಆಘಾತಕಾರಿ ಮಾಹಿತಿ

Ram Temple Donations: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬಂದ ದೇಣಿಗೆಯಲ್ಲಿ ಪ್ರತಿದಿನ 6–8 ಲಕ್ಷ ರುಪಾಯಿ ದುರ್ಬಳಕೆಯಾಗಿರಬಹುದು ಎಂದು ಎಸ್‌ಐಟಿ ತನಿಖೆಯಲ್ಲಿ ಶಂಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದ್ದು, ಎಸ್‌ಬಿಐ ಸಿಬ್ಬಂದಿ, ಟ್ರಸ್ಟ್ ಅಧಿಕಾರಿಗಳು ಹಾಗೂ ಹಣದ ಹರಿವಿನ ಕುರಿತು ತನಿಖೆ ಮುಂದುವರಿದಿದೆ.

ಅಯೋಧ್ಯೆ ರಾಮ ಮಂದಿರ (ಸಂಗ್ರಹ ಚಿತ್ರ)

ಲಖನೌ, ಜು. 8: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ (Shri Ram Janmabhoomi Teerth Kshetra Trust) ಭಕ್ತರು ನೀಡಿದ ದೇಣಿಗೆಯ ಹಣ ದುರುಪಯೋಗವಾಗಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ತೀವ್ರಗೊಂಡಿದೆ. ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ವಿಚಾರಣೆಯಲ್ಲಿ, ಪ್ರತಿದಿನ ಸುಮಾರು 6ರಿಂದ 8 ಲಕ್ಷ ರುಪಾಯಿ ದುರುಪಯೋಗವಾಗಿರಬಹುದು ಎಂಬ ಪ್ರಾಥಮಿಕ ಅಂದಾಜು ಹೊರಬಿದ್ದಿದೆ.

ಮೂಲಗಳ ಪ್ರಕಾರ, ಪ್ರಕರಣ ಬೆಳಕಿಗೆ ಬರುವ ಮೊದಲು ಟ್ರಸ್ಟ್‌ನ ಬ್ಯಾಂಕ್ ಖಾತೆಗಳಿಗೆ ಪ್ರತಿದಿನ ಸರಾಸರಿ 16ರಿಂದ 18 ಲಕ್ಷ ರುಪಾಯಿ ದೇಣಿಗೆ ಜಮೆಯಾಗುತ್ತಿತ್ತು. ಆದರೆ ಹಗರಣ ಬಹಿರಂಗವಾದ ಬಳಿಕ ಈ ಮೊತ್ತ 24ರಿಂದ 26 ಲಕ್ಷ ರುಪಾಯಿಗೆ ಏರಿಕೆಯಾಗಿದೆ. ಈ ವ್ಯತ್ಯಾಸದ ಆಧಾರದ ಮೇಲೆ ಪ್ರತಿದಿನ 6–8 ಲಕ್ಷ ರುಪಾಯಿಯನ್ನು ಅಕ್ರಮವಾಗಿ ವರ್ಗಾಯಿಸಲಾಗುತ್ತಿತ್ತು ಎಂದು ಎಸ್‌ಐಟಿ ಶಂಕಿಸಿದೆ.

ದೇಣಿಗೆ ಪೆಟ್ಟಿಗೆಗಳಲ್ಲಿರುವ ನಗದು ಎಣಿಕೆಯ ಜವಾಬ್ದಾರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ವಹಿಸಿದ್ದು, ಬ್ಯಾಂಕ್ ಖಾಸಗಿ ಸಂಸ್ಥೆಯೊಂದರ ಸಹಾಯದಿಂದ ಹಣ ಎಣಿಕೆ ನಡೆಸುತ್ತಿತ್ತು. ಒಟ್ಟು 14 ಸದಸ್ಯರ ತಂಡದಲ್ಲಿ 11 ಮಂದಿ ಬ್ಯಾಂಕ್ ಸಿಬ್ಬಂದಿ ಹಾಗೂ ಮೂವರು ಟ್ರಸ್ಟ್ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದರು.

ತನಿಖೆಯ ವೇಳೆ ಕೆಲವು ಎಸ್‌ಬಿಐ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಅನುಮಾನ ಮೂಡಿದ್ದು, ಹಣದ ಹರಿವು ಮತ್ತು ಹಣಕಾಸು ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೂ ಪೊಲೀಸರು ಪತ್ರ ಬರೆಯಲು ಮುಂದಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ಸುಭಾಷ್ ಶ್ರೀವಾಸ್ತವ ದೇಣಿಗೆ ಎಣಿಕೆ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡಿದ್ದರು. ದೇಣಿಗೆ ಪೆಟ್ಟಿಗೆಯಿಂದ ಹಣ ತೆಗೆದು ಎಣಿಕೆ ಕೊಠಡಿಗೆ ಸಾಗಿಸುವುದು ಹಾಗೂ ಬಳಿಕ ಎಸ್‌ಬಿಐಗೆ ಹಸ್ತಾಂತರಿಸುವ ಜವಾಬ್ದಾರಿ ಅವರದ್ದಾಗಿತ್ತು.

ಮೂಲಗಳ ಪ್ರಕಾರ, ದೇವರಿಗೆ ಅರ್ಪಿಸಲಾದ ಚಿನ್ನಾಭರಣ ಮತ್ತು ಇತರ ಅಮೂಲ್ಯ ವಸ್ತುಗಳ ಸಮರ್ಪಕ ದಾಖಲೆ ನಿರ್ವಹಣೆ ಇಲ್ಲದ ಕಾರಣ ಅವುಗಳ ದುರುಪಯೋಗಕ್ಕೂ ಅವಕಾಶವಿತ್ತು. ಹಣ ಕಳವು ನಡೆಯುತ್ತಿರುವ ಬಗ್ಗೆ ತಂಡದ ಸದಸ್ಯರೊಬ್ಬರು ಸುಭಾಷ್ ಶ್ರೀವಾಸ್ತವರಿಗೆ ತಿಳಿಸಿದಾಗ, "ದೇವರು ಎಲ್ಲವನ್ನೂ ನೋಡುತ್ತಿದ್ದಾನೆ, ಇದು ನಿಮ್ಮ ಅಥವಾ ನನ್ನ ಮನೆಯ ಹಣವಲ್ಲ" ಎಂದು ಪ್ರತಿಕ್ರಿಯಿಸಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ.

ರಾಮ ಮಂದಿರ ದೇಣಿಗೆ ಹಗರಣ: ವಿವಾದದ ಬಳಿಕ ಚಂಪತ್ ರಾಯ್ ಫಸ್ಟ್‌ ರಿಯಾಕ್ಷನ್‌, ಬಹಿರಂಗ ಪತ್ರ

ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಎಸ್‌ಐಟಿ ಬಂಧಿಸಿದೆ. ಇವರಲ್ಲಿ ಸುಭಾಷ್ ಶ್ರೀವಾಸ್ತವ, ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಟಿನ್ನು ಯಾದವ್, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ ಹಾಗೂ ರಾಮಾಶಂಕರ್ ಮಿಶ್ರಾ ಸೇರಿದ್ದಾರೆ.

ಆರೋಪಿ ಅವಿನಾಶ್ ಶುಕ್ಲಾ ವಿಚಾರಣೆಯಲ್ಲಿ, ಕಳವು ಮಾಡಿದ ಹಣವನ್ನು ದೇವಾಲಯದ ಸಮೀಪದ ಉದ್ಯಾನವನವೊಂದರಲ್ಲಿ ಆರೋಪಿಗಳ ನಡುವೆ ಹಂಚಿಕೊಳ್ಳಲಾಗುತ್ತಿತ್ತು ಎಂದು ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಈ ನಡುವೆ ಎಸ್‌ಐಟಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌, ಟ್ರಸ್ಟಿಗಳಾದ ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದೆ. ಆರೋಪಗಳು ಕೇಳಿಬಂದ ಬಳಿಕ ಮೂವರೂ ಟ್ರಸ್ಟ್‌ನ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಇದಲ್ಲದೆ, ಅವರ ಚರ ಮತ್ತು ಸ್ಥಿರ ಆಸ್ತಿಗಳ ವಿವರ, ಆದಾಯದ ಮೂಲಗಳು, ದೇವಾಲಯ ನಿರ್ಮಾಣ ಹಾಗೂ ಭೂ ಖರೀದಿಯಲ್ಲಿ ಅಕ್ರಮ ಕಮಿಷನ್ ಪಡೆದಿರುವ ಆರೋಪಗಳ ಬಗ್ಗೆಯೂ ಎಸ್‌ಐಟಿ ಪರಿಶೀಲನೆ ನಡೆಸುತ್ತಿದೆ. ಟ್ರಸ್ಟ್‌ನ ವಾರ್ಷಿಕ ಲೆಕ್ಕಪರಿಶೋಧನಾ ವರದಿಗಳು, ಹಣಕಾಸು ದಾಖಲೆಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿರುವ ಎಸ್‌ಐಟಿ, ಅಗತ್ಯವಿದ್ದರೆ ಮರು ಲೆಕ್ಕಪರಿಶೋಧನೆ (Re-audit) ನಡೆಸುವ ಸಾಧ್ಯತೆಯನ್ನೂ ಪರಿಶೀಲಿಸುತ್ತಿದೆ.