ಲಖನೌ, ಜು. 7: ʼಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆʼ ಎಂಬ ಮಾತಿದೆ. ಅದರಂತೆ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದ (Ayodhya Ram Mandir Theft Case) ಹುಂಡಿಯಿಂದ ಕದ್ದ ಲಕ್ಷಾಂತರ ರುಪಾಯಿಯನ್ನು ಆರೋಪಿಗಳು ಐಷಾರಾಮಿ ಜೀವನ ನಡೆಸಲು ಖರ್ಚು ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಯೊಬ್ಬ ತನ್ನ ಕುಟುಂಬ, ಸ್ನೇಹಿತರು ಮತ್ತು ಗೆಳತಿಗೆ ದುಬಾರಿ ಉಡುಗೊರೆಗಳನ್ನು ನೀಡಲು ಈ ಹಣವನ್ನು ಬಳಸಿದ್ದಾನೆ ಎನ್ನುವ ವಿಚಾರ ಇದೀಗ ಬಯಲಾಗಿದೆ. ಇವುಗಳಲ್ಲಿ ದುಬಾರಿ ಐಫೋನ್ ಮತ್ತು ಮದುವೆಯ ಔತಣಕೂಟವೂ ಸೇರಿದೆ.
ದೇಣಿಗೆ ಕಳವು ಆರೋಪ ಎದುರಿಸುತ್ತಿರುವ ಎಂಟು ಸಿಬ್ಬಂದಿ ಪೈಕಿ ಅವಿನಾಶ್ ಶುಕ್ಲಾ ಎಂಬಾತ ಈ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ದೇಶವನ್ನೇ ಬೆಚ್ಚಿಬೀಳಿಸಿರುವ ಈ ಕಳವು ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ವಿಚಾರ ಹೊರಬರುತ್ತಿದೆ. ಶುಕ್ಲಾ ತನ್ನ ವಿಚಾರಣೆಯ ಸಮಯದಲ್ಲಿ ದೊಡ್ಡ ವಿಷಯಗಳನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ಕದ್ದ ಮೊತ್ತ ಕೋಟಿಗಟ್ಟಲೆ ಎಂದು ಅಂದಾಜಿಸಲಾಗಿದ್ದರೂ, ಶುಕ್ಲಾ ತನ್ನ ಕುಟುಂಬ ಮತ್ತು ಸ್ನೇಹಿತರಿಗಾಗಿ ಸುಮಾರು 19 ಲಕ್ಷ ರುಪಾಯಿ ಖರ್ಚು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದರಲ್ಲಿ ತನ್ನ ಸಹೋದರನ ಅದ್ದೂರಿ ವಿವಾಹವೂ ಸೇರಿದೆ. ಶುಕ್ಲಾ ಮದುವೆಗೆ ಸುಮಾರು 6 ಲಕ್ಷ ರುಪಾಯಿ ಖರ್ಚು ಮಾಡಿ ಮತ್ತೊಬ್ಬ ಸಹೋದರನಿಗೆ 5-6 ಲಕ್ಷ ರುಪಾಯಿ ನೀಡಿರುವುದಾಗಿ ಹೇಳಿದ್ದಾನೆ ಎಂಬುದು ತಿಳಿದುಬಂದಿದೆ. ಇದಲ್ಲದೆ, ಆರೋಪಿ ತನ್ನ ಗೆಳತಿಗೆ ಐಫೋನ್ ಉಡುಗೊರೆಯಾಗಿ ನೀಡಿ, ಆಕೆಗೆ 2.5 ಲಕ್ಷ ರುಪಾಯಿ ವರ್ಗಾಯಿಸಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಅಯೋಧ್ಯೆ ರಾಮ ಮಂದಿರದ ದೇಣಿಗೆಯಿಂದ ಪ್ರತಿ ನಿತ್ಯ 6- 8 ಲಕ್ಷ ರೂ. ಕಳವು
ಈ ಹಿಂದೆ, ಶುಕ್ಲಾ ಸುಮಾರು 20 ಲಕ್ಷ ರುಪಾಯಿ ಕದ್ದಿದ್ದಾನೆ ಎಂದು ಹೇಳಲಾಗಿತ್ತು. ಕಳವು ಜಾಡು ಹಿಡಿದು ಹೊರಟ ತನಿಖಾಧಿಕಾರಿಗಳು ಈಗ ಈ ಹಣಕಾಸಿನ ವಹಿವಾಟುಗಳು, ಬ್ಯಾಂಕ್ ಖಾತೆಗಳು ಮತ್ತು ಸಂಬಂಧಿತ ಆಸ್ತಿಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಭಗವಂತನಿಗೆ ಅರ್ಪಿಸಿದ ಪ್ರತಿ ಅಮೂಲ್ಯ ವಸ್ತುವೂ ಸುರಕ್ಷಿತ
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ದೇಣಿಗೆಯಾಗಿ ಬಂದ ಅಮೂಲ್ಯ ವಸ್ತುಗಳು ನಾಪತ್ತೆಯಾಗಿವೆ ಎಂಬ ಆರೋಪಗಳ ನಡುವೆ, ಭಗವಂತನಿಗೆ ಅರ್ಪಿಸಿದ ಪ್ರತಿ ಅಮೂಲ್ಯ ವಸ್ತುವೂ ಸುರಕ್ಷಿತವಾಗಿದೆ ಎಂದು ಟ್ರಸ್ಟ್ ಹೇಳಿದೆ. ಸೋಮವಾರ ಸುದ್ದಿಗೋಷ್ಠಿ ನಡೆಸಿದ ಟ್ರಸ್ಟ್, ಹಲವು ಅಮೂಲ್ಯ ವಸ್ತುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಎಲ್ಲ ದೇಣಿಗೆ ವಸ್ತುಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ.
ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಾತನಾಡಿ, ಚಿನ್ನದ ರಾಮಾಯಣ, ಶ್ರೀರಾಮನ ಪಾದುಕೆಗಳು, ಚಿನ್ನದ ಹಾರ ಹಾಗೂ ಕಾಕಭುಷುಂಡಿ ಮೂರ್ತಿ ಸೇರಿ ಐದು ಅಮೂಲ್ಯ ವಸ್ತುಗಳನ್ನು ಪ್ರದರ್ಶಿಸಿದರು. ಈ ಮೂಲಕ ಭಕ್ತರು ಕಾಣಿಕೆಯಾಗಿ ನೀಡಿದ ಹಲವು ವಸ್ತುಗಳು ನಾಪತ್ತೆಯಾಗಿವೆ ಎಂಬ ಆರೋಪಗಳು ಸುಳ್ಳು ಎನ್ನುವುದನ್ನು ಸಾಬೀತುಪಡಿಸಿದರು.
ಸುಮಾರು 2,800 ದೇಣಿಗೆ ವಸ್ತುಗಳ ದಾಖಲೆ ಟ್ರಸ್ಟ್‌ನ ನೋಂದಣಿ ಪುಸ್ತಕದಲ್ಲಿ ಲಭ್ಯವಿದ್ದು, ಪ್ರತಿಯೊಂದು ವಸ್ತುವನ್ನೂ ದಾಖಲಿಸಲಾಗಿದೆ. ಎಲ್ಲ ದೇಣಿಗೆ ವಸ್ತುಗಳು ಸುರಕ್ಷಿತವಾಗಿವೆ ಎಂದು ಟ್ರಸ್ಟ್ ಪುನರುಚ್ಚರಿಸಿತು.