ಕೊಲ್ಕತ್ತಾ: ಸುಮಾರು ಎರಡು ದಶಕಗಳ ಬಳಿಕ ದೇಶಭ್ರಷ್ಟ ಬಾಂಗ್ಲಾದೇಶ (Bangladesh) ಮೂಲದ ಲೇಖಕಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ (Taslima Nasreen) ಶುಕ್ರವಾರ ಕೊಲ್ಕತ್ತಾ (Kolkata) ಗೆ ಮರಳಿದ್ದಾರೆ . ನೆತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, "ಮತ್ತೆ ಕೊಲ್ಕತ್ತಾಗೆ ಬಂದಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
2007ರಲ್ಲಿ ತಮ್ಮ ವಿವಾದಾತ್ಮಕ ಆತ್ಮಕಥೆ 'ದ್ವಿಖಂಡಿತೋ' (Dwikhondito) ವಿರುದ್ಧ ಭಾರೀ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ತಸ್ಲೀಮಾ ನಸ್ರೀನ್ ಕೊಲ್ಕತ್ತಾವನ್ನು ತೊರೆಯಬೇಕಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ನಗರಕ್ಕೆ ಭೇಟಿ ನೀಡಿದ್ದಾರೆ.
2003ರಲ್ಲಿ ಅಂದಿನ ಸಿಪಿಎಂ (CPM) ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂಬ ಆರೋಪದ ಮೇರೆಗೆ ಅವರ ಪುಸ್ತಕವನ್ನು ನಿಷೇಧಿಸಿತ್ತು. ಪ್ರಸ್ತುತ 63 ವರ್ಷದ ತಸ್ಲೀಮಾ ನಸ್ರೀನ್ ದೆಹಲಿಯಲ್ಲಿ ದೀರ್ಘಾವಧಿಯ ನಿವಾಸ ಪರವಾನಗಿಯೊಂದಿಗೆ ವಾಸಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮತ್ತೆ ಬುಲ್ಡೋಜರ್ ಸದ್ದು; ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕಚೇರಿ ಧ್ವಂಸ
ಮೂಲಭೂತವಾದ ವಿರೋಧಿ ಕಾರ್ಯಕ್ರಮದಲ್ಲಿ ಭಾಗಿ
ಶನಿವಾರ ರವೀಂದ್ರ ಸದನ್‌ನಲ್ಲಿ ನಡೆಯಲಿರುವ ಮೂಲಭೂತವಾದ ವಿರೋಧಿ ಕಾರ್ಯಕ್ರಮದಲ್ಲಿ ತಸ್ಲೀಮಾ ನಸ್ರೀನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ತಮ್ಮ ಕವನಗಳನ್ನು ವಾಚಿಸಿ, ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ನಾಗರಿಕ ಸನ್ಮಾನವನ್ನೂ ಸ್ವೀಕರಿಸಲಿದ್ದಾರೆ.
"ಕೊಲ್ಕತ್ತಾವನ್ನು ನಾನು ಸ್ವಯಂಪ್ರೇರಿತವಾಗಿ ಬಿಟ್ಟಿರಲಿಲ್ಲ"
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಸ್ಲೀಮಾ ನಸ್ರೀನ್, "ನಾನು ಕೊಲ್ಕತ್ತಾವನ್ನು ಸ್ವಯಂಪ್ರೇರಿತವಾಗಿ ಬಿಟ್ಟಿರಲಿಲ್ಲ. ಅಂದಿನ ಪಶ್ಚಿಮ ಬಂಗಾಳ ಸರ್ಕಾರವೇ ನನ್ನನ್ನು ರಾಜ್ಯ ತೊರೆಯುವಂತೆ ಮಾಡಿತು. ಆದರೂ ಒಂದು ದಿನ ನಾನು ಮತ್ತೆ ಇಲ್ಲಿಗೆ ಮರಳುತ್ತೇನೆ ಎಂಬ ಆಶೆಯನ್ನು ಎಂದಿಗೂ ಕೈಬಿಟ್ಟಿರಲಿಲ್ಲ" ಎಂದು ಭಾವುಕರಾಗಿ ಹೇಳಿದರು.
ರಾಜಕೀಯ ವಿವಾದಕ್ಕೆ ಕಾರಣವಾದ ಭೇಟಿ
ತಸ್ಲೀಮಾ ನಸ್ರೀನ್ ಅವರ ಕೊಲ್ಕತ್ತಾ ಭೇಟಿ ರಾಜಕೀಯ ಚರ್ಚೆಗೂ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ಶಾಸಕ ಅಖ್ರುಜ್ಜಮಾನ, "ತಸ್ಲೀಮಾ ನಸ್ರೀನ್ ಮುಸ್ಲಿಮರ ವಿರುದ್ಧ ಪದೇ ಪದೇ ಮಾತನಾಡಿದ್ದಾರೆ. ಅದಕ್ಕಾಗಿಯೇ ಡಬಲ್ ಎಂಜಿನ್ ಸರ್ಕಾರ ಅವರಿಗೆ ಸ್ವಾಗತ ನೀಡುತ್ತಿದೆ" ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಸಚಿವೆ ಅಗ್ನಿಮಿತ್ರಾ ಪಾಲ್, "ಹಿಂದಿನ ಸರ್ಕಾರದ ಅವಧಿಯಲ್ಲಿ ಅವರಿಗೆ ಮರಳಲು ಅವಕಾಶ ನೀಡಲಿಲ್ಲ. ಇಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದಲ್ಲಿ ತಸ್ಲೀಮಾ ನಸ್ರೀನ್ ಮರಳುತ್ತಿರುವುದು ಹೆಮ್ಮೆಯ ಸಂಗತಿ" ಎಂದು ಹೇಳಿದರು.